ಎರಡು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಪತ್ತೆಯಾದ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಜಾಲವು ರಾಜ್ಯಾದ್ಯಂತ ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ವಿಶೇಷವಾಗಿ 2023-24ರ ಅವಧಿಯಲ್ಲಿ ಹೊರಬಂದ ಈ ಪ್ರಕರಣಗಳು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಂಡ್ಯದಲ್ಲಿ ಮತ್ತೆ ಭ್ರೂಣಲಿಂಗ ಪತ್ತೆ ಪ್ರಕರಣ ಬಯಲಾಗಿದೆ.
ಇತ್ತೀಚೆಗೆ ಮಂಡ್ಯದ ಕೆ.ಆರ್.ಪೇಟೆಯ ಡಯಾಗ್ನಸ್ಟಿಕ್ ಸೆಂಟರ್ನಲ್ಲಿ ಅಕ್ರಮವಾಗಿ ಭ್ರೂಣ ಪತ್ತೆ, ಭ್ರೂಣ ಹತ್ಯೆ ನಡೆಸುತ್ತಿರುವುದು ಬಯಲಾಗಿದೆ. ಈ ಸಂಬಂಧ ಮೂವರು ಖಾಸಗಿ ಆಸ್ಪತ್ರೆಯ ವೈದ್ಯರನ್ನು ಬಂಧಿಸಲಾಗಿದೆ. ಬಂಧಿತರನ್ನು ಪಟ್ಟಣದ ಚೇತನಾ ನರ್ಸಿಂಗ್ ಹೋಮ್ನ ವೈದ್ಯೆ ಡಾ. ದಿವ್ಯಾ, ನಾವಿ ಡಯಾಗ್ನಸ್ಟಿಕ್ ಸೆಂಟರ್ನ ವೈದ್ಯ ಡಾ.ಹರ್ಷಿತ್ ಹಾಗೂ ಕುಶಾಲ್ ಡಯಾಗ್ನಸ್ಟಿಕ್ ಸೆಂಟರ್ನ ಡಾ.ಪರೀಶ್ ಎಂದು ಗುರುತಿಸಲಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಪ್ರಿಯಾಂಕಾ ನಾಪತ್ತೆಯಾಗಿದ್ದು, ಪತ್ತೆ ಶೋಧ ನಡೆಸಲಾಗುತ್ತಿದೆ.
ಇದನ್ನು ಓದಿದ್ದೀರಾ? ಮೈಸೂರು | ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ; ಮಾತಾ ಆಸ್ಪತ್ರೆಯ ವಿದ್ಯುತ್ ಸಂಪರ್ಕ ಕಡಿತ
ಈ ಆರೋಪಿಗಳು 31 ಬಾಲ ಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪಟ್ಟಣ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಒಟ್ಟು 17 ಆರೋಪಿಗಳ ವಿರುದ್ಧ 12 ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಲೋಕಾಯುಕ್ತ ಸಂಸ್ಥೆಯಲ್ಲೂ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಬಯಲಾದ ಜಾಲ
ಕಳೆದ ಎರಡು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ನೂರಾರು ಭ್ರೂಣಲಿಂಗ ಪತ್ತೆ ಪ್ರಕರಣಗಳು ವರದಿಯಾಗಿದ್ದವು. ಆಗ ದೊಡ್ಡ ಮಟ್ಟದ ತನಿಖೆ ನಡೆದು ಹಲವರು ಜೈಲು ಸೇರಿದ್ದರು. ಆದರೂ, ಹಣದ ಆಸೆಗಾಗಿ ಕೆಲವು ವೈದ್ಯಕೀಯ ವೃತ್ತಿಪರರು ಮತ್ತೆ ಅದೇ ಅಕ್ರಮ ಹಾದಿ ಹಿಡಿದಿರುವುದು ಕಳವಳಕಾರಿ.
ಈ ಜಾಲವು ಕೇವಲ ಮಂಡ್ಯಕ್ಕೆ ಸೀಮಿತವಾಗಿರದೆ, ಬೆಂಗಳೂರು, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೂ ಹಬ್ಬಿತ್ತು. ಮಂಡ್ಯದ ಪಾಂಡವಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿತ್ತು. ಬೆಂಗಳೂರಿನ ಪೊಲೀಸರು ನಡೆಸಿದ ಕಾರ್ಯಾಚರಣೆಯ ವೇಳೆ ಈ ಗಂಭೀರ ವಿಚಾರ ಬೆಳಕಿಗೆ ಬಂದಿತ್ತು.
ಇದನ್ನು ಓದಿದ್ದೀರಾ? ಮಂಡ್ಯ | ಇನ್ನೂ ನಿಂತಿಲ್ಲ ಭ್ರೂಣಲಿಂಗ ಪತ್ತೆ; ದಂಧೆ ನಡೆಸುತ್ತಿದ್ದ ಮೂವರ ಬಂಧನ
ಜಾಲ ಹೇಗೆ ಕಾರ್ಯನಿರ್ವಹಿಸುತ್ತಿತ್ತು?
ಈ ಜಾಲದಲ್ಲಿ ಆರೋಪಿಗಳು ಪರವಾನಗಿ ಇಲ್ಲದ ಪೋರ್ಟಬಲ್ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸಿ ರಹಸ್ಯ ಸ್ಥಳಗಳಲ್ಲಿ ಲಿಂಗ ಪತ್ತೆ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಗರ್ಭಿಣಿಯರನ್ನು ಭೇಟಿಯಾಗಿ, ನಂತರ ಅವರನ್ನು ಮಂಡ್ಯ ಅಥವಾ ಮೈಸೂರಿನ ಖಾಸಗಿ ಫಾರ್ಮ್‌ಹೌಸ್‌ಗಳಿಗೆ ಅಥವಾ ಸಣ್ಣ ಕ್ಲಿನಿಕ್‌ಗಳಿಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಒಂದು ಲಿಂಗ ಪತ್ತೆ ಪರೀಕ್ಷೆಗೆ ಸುಮಾರು 30,000 ರಿಂದ 50,000 ರೂಪಾಯಿಗಳವರೆಗೆ ಹಣ ವಸೂಲಿ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು, ಲ್ಯಾಬ್ ತಂತ್ರಜ್ಞರು ಮತ್ತು ದಲ್ಲಾಳಿಗಳು ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಮತ್ತು ಮಂಡ್ಯ ಜಿಲ್ಲಾ ಆರೋಗ್ಯ ಇಲಾಖೆ ಜಂಟಿಯಾಗಿ ಈ ಜಾಲವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತನಿಖೆಯ ವೇಳೆ ನೂರಾರು ಅಕ್ರಮ ಗರ್ಭಪಾತಗಳು ನಡೆದಿರುವುದು ಪತ್ತೆಯಾಗಿತ್ತು, ಇದು ತೀವ್ರ ಕಳವಳಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಆರೋಗ್ಯ ಇಲಾಖೆಯು ಕಣ್ಗಾವಲು ಹೆಚ್ಚಿಸಲಾಗಿದೆ.
ರಾಜ್ಯದಲ್ಲಿ ಲಿಂಗಾನುಪಾತ ಕುಸಿತ
2021ರಲ್ಲಿ ರಾಜ್ಯದಲ್ಲಿ ಪ್ರತಿ 1,000 ಪುರುಷರಿಗೆ 929 ಮಹಿಳೆಯರ ಲಿಂಗಾನುಪಾತವಿತ್ತು. ಆದರೆ 2022ರಲ್ಲಿ ಲಿಂಗಾನುಪಾತವು 929ಕ್ಕೆ ಇಳಿಕೆಯಾಗಿದೆ. ಇನ್ನು 2011ರಲ್ಲಿ ರಾಜ್ಯದಲ್ಲಿ ಲಿಂಗಾನುಪಾತ 1,000 ಪುರುಷರಿಗೆ 973 ಮಹಿಳೆಯರು ಆಗಿತ್ತು. ರಾಷ್ಟ್ರೀಯ ಸರಾಸರಿ 943ಕ್ಕಿಂತ ಹೆಚ್ಚಾಗಿತ್ತು. ಆದರೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಲಿಂಗಾನುಪಾತದಲ್ಲೂ ವ್ಯತ್ಯಾಸ ಕಂಡುಬಂದಿದೆ. 2024ರ ಅಂತಿಮ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಮತದಾರರ ಲಿಂಗಾನುಪಾತ 997(ಮಹಿಳೆಯರು) ಏರಿಕೆಯಾಗಿದೆ. ಆದರೆ ಇದು ಒಟ್ಟಾರೆ ಲಿಂಗಾನುಪಾತವಲ್ಲ.






