ಯಲ್ಲಾಪುರ–ಅಂಕೋಲಾ ರಾಷ್ಟ್ರೀಯ ಹೆದ್ದಾರಿ 52ರ ಬಾಳೆಗುಳಿ ಕ್ರಾಸ್‌ನಿಂದ ಮಾಸ್ತಿಕಟ್ಟಾವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿದಿನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ದುರಸ್ತಿಗೊಂಡಿದ್ದ ರಸ್ತೆ ಮತ್ತೆ ಹೊಂಡಮಯವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನಶಕ್ತಿ ವೇದಿಕೆ, ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ಸ್ಥಳೀಯರು ಬಾಳೆಗುಳಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ರಸ್ತೆಯ ಬೃಹತ್ ಹೊಂಡದಲ್ಲೇ ಸಾಂಕೇತಿಕವಾಗಿ ಪಿಂಡ ಪ್ರದಾನ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯಲು ವಿನೂತನವಾಗಿ ಪ್ರತಿಭಟಿಸಿದರು.
ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಮಾಧವ ನಾಯಕ ಮಾತನಾಡಿ, ರಸ್ತೆ ದುರಸ್ತಿಗೆ ಅನುಮೋದನೆ ದೊರೆತಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದರೂ, ಕಾಮಗಾರಿಯ ಅಧಿಕೃತ ಆದೇಶ ಇನ್ನೂ ಹೊರಬಿದ್ದಿಲ್ಲ. ಕೇವಲ ಅನುಮೋದನೆ ನೀಡುವುದರಿಂದ ಜನರ ಸಮಸ್ಯೆ ಪರಿಹಾರವಾಗುವುದಿಲ್ಲ. ಕೂಡಲೇ ಕಾಮಗಾರಿ ಆರಂಭಿಸಿ, ನಿಗದಿತ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಾರವಾರ | ಬೈತಕೂಲ ಬಂದರಿನಲ್ಲಿ ನೀರಿಗೆ ಬಿದ್ದು ಒಡಿಶಾ ಮೂಲದ ಮೀನುಗಾರ ಸಾವು
ರಸ್ತೆಯ ದುಸ್ಥಿತಿಯಿಂದ ದ್ವಿಚಕ್ರ ವಾಹನ ಸವಾರರು, ಆಟೊ ಹಾಗೂ ಟ್ಯಾಕ್ಸಿ ಚಾಲಕರು ಸೇರಿದಂತೆ ಎಲ್ಲ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಹೊಂಡಗಳಿಂದ ವಾಹನಗಳ ಬಿಡಿಭಾಗಗಳು ಹಾನಿಗೊಳಗಾಗಿ ದುರಸ್ತಿ ವೆಚ್ಚ ಹೆಚ್ಚುತ್ತಿದೆ. ರಸ್ತೆ ಹದಗೆಟ್ಟಿರುವ ಕಾರಣ ಸಣ್ಣ ಬಾಡಿಗೆಗೆ ತೆರಳಲೂ ರಿಕ್ಷಾ ಚಾಲಕರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವರ ದಿನನಿತ್ಯದ ಆದಾಯಕ್ಕೂ ಹೊಡೆತ ಬಿದ್ದಿದೆ ಎಂದು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹೇಳಿದರು.
ಪ್ರತಿಭಟನೆಯ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಪಿ. ರಾಜೇಂದ್ರ ಅವರನ್ನು ಗೋಪಾಲಕೃಷ್ಣ ನಾಯಕ ಪ್ರಶ್ನಿಸಿದರು. ಹೆದ್ದಾರಿ ದುರಸ್ತಿ ವಿಳಂಬದ ವಿಷಯವನ್ನು ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೀರಾ ಎಂಬ ಪ್ರಶ್ನೆಗೆ ಅಧಿಕಾರಿ ‘ಇಲ್ಲ’ ಎಂದು ಉತ್ತರಿಸಿದರು. ಇದರಿಂದ ಗೋಪಾಲಕೃಷ್ಣ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳದಲ್ಲಿದ್ದ ಸಾರ್ವಜನಿಕರೂ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ಹೊರಹಾಕಿದರು. ಶಿವಾನಂದ ನಾಯ್ಕ, ಸುರೇಶ್ ವರ್ಣೇಕರ, ವಿಜಯಕುಮಾರ ನಾಯ್ಕ ಸೇರಿದಂತೆ ಹಲವರು ಹದಗೆಟ್ಟ ಹೆದ್ದಾರಿಯಲ್ಲೇ ಅಣಕು ಪಿಂಡ ಪ್ರದಾನ ಮಾಡಿ, ಹಾಡುಗಳ ಮೂಲಕ ಪ್ರತಿಭಟನೆ ನಡೆಸಿದರು. ಲಾರಿ, ಟ್ಯಾಕ್ಸಿ ಹಾಗೂ ಆಟೊ ಚಾಲಕ-ಮಾಲಕರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಗೆ ಬೆಂಬಲ ನೀಡಿದರು.
ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಮಂಡಿಸಿ ಮನವಿ ಸಲ್ಲಿಸಿದರು.
15 ದಿನಗಳೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದರೆ ಮತ್ತಷ್ಟು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗಣಪತಿ ಮೂಲೆಮನೆ, ಭಾಸ್ಕರ ನಾರ್ವೇಕರ, ತುಳಸಿದಾಸ ಕಾಮತ, ನಾಗಾನಂದ ಬಂಟ, ಉಮೇಶ್ ನಾಯ್ಕ, ಸಂದೇಶ್ ಎಂ. ಭಾವಿಕೇರಿ, ರವಿ ಟಿ. ನಾಯ್ಕ, ರಾಘು ನಾಯ್ಕ ಕೇಣಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.





