ನಕಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಜಾತಿ ಪ್ರಮಾಣಪತ್ರಗಳ ಹಾವಳಿಗೆ ಕಡಿವಾಣ ಹಾಕಬೇಕು ಹಾಗೂ ಹೆಚ್ಚಿಸಲಾದ ಮೀಸಲಾತಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಬೇಕು ಎಂದು ಆಗ್ರಹಿಸಿ ವಾಲ್ಮೀಕಿ ನಾಯಕ ಬೇಡರ ಸಮಾಜದ ಮುಖಂಡರು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತ್ಯೇಕವಾಗಿ ಆಚರಿಸಿದರು.
ನಗರದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಸಮಾಜದ ಮುಖಂಡರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಮಹರ್ಷಿ ವಾಲ್ಮೀಕಿ ಅವರಿಗೆ ಗೌರವ ನಮನ ಸಲ್ಲಿಸಿದರು.
ಇನ್ನೊಂದೆಡೆ, ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಯಕ ಬೇಡರ ಸಮಾಜದ ಮುಖಂಡರು ಜಿಲ್ಲಾಡಳಿತ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಿಂದ ದೂರ ಉಳಿದು, ನಗರದ ಎಸ್‌ಬಿಐ ಕಾಲೋನಿಯ ವಾಲ್ಮೀಕಿ ಭವನದಲ್ಲಿ ಪ್ರತ್ಯೇಕವಾಗಿ ಜಯಂತಿ ಆಚರಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಸುಳ್ಳು ಎಸ್‌ಟಿ ಜಾತಿ ಮತ್ತು ಸಿಂಧುತ್ವ ಪ್ರಮಾಣಪತ್ರಗಳನ್ನು ಪಡೆದು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಕಲಿ ಪ್ರಮಾಣಪತ್ರಗಳಿಂದ ನೈಜ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯವಾಗುತ್ತಿದ್ದು, ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಸಮಾಜದ ಹೋರಾಟಗಾರರು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಲಾದ ಮೀಸಲಾತಿಗೆ ಸಂಬಂಧಿಸಿದ ಸರ್ಕಾರದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡು ಮೀಸಲಾತಿ ಸೌಲಭ್ಯಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ಅ.27ರಂದು ಕಾಂಗ್ರೆಸ್‌ನ ‘ಸಂಘಟನಾ ಸೃಜನ್-2’ ಅಭಿಯಾನ ಸಭೆ
ಕಾರ್ಯಕ್ರಮದಲ್ಲಿ ರಾಜ್ಯ ಎಸ್‌ಸಿ/ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿಯ ರಾಜ್ಯಾಧ್ಯಕ್ಷ ಶ್ರವಣಕುಮಾರ ಡಿ. ನಾಯಕ, ಮಾಜಿ ಮೇಯರ್ ಯಲ್ಲಪ್ಪ ನಾಯ್ಕೋಡಿ, ಸಮಾಜದ ಜಿಲ್ಲಾಧ್ಯಕ್ಷ ಶರಣು ಸುಬೇದಾರ, ಚೆನ್ನಬಸಪ್ಪ ಮೆಕಾಲೆ, ಎಂ.ಎಂ. ನಾಯಕ, ಮಾನಪ್ಪ ನಾಯಕ, ಡಾ. ಲಕ್ಷ್ಮಣ ಬೋಸಲೆ, ಗುರುರಾಜ ಸುಬೇದಾರ, ಬಿ.ಟಿ. ನಾಯಕ, ಮಾರುತಿ ಜಮಾದಾರ, ಗುರುರಾಜ ಸೂಲಹಳ್ಳಿ, ನಂದಕುಮಾರ ನಾಯಕ, ರಾಮು ನಾಯಕ, ಕೃಷ್ಣಪ್ಪ ನಾಯಕ ಜಾಹಾಗಿದಾರ, ರಂಗನಾಥ ದೊರೆ, ಹಣಮಂತ ಮಿಲ್ಟ್ರಿ, ದಿನೇಶ ಮದಕರಿ, ಲಕ್ಷ್ಮಣ ದೇಸಾಯಿ, ನಿಂಗಣ್ಣ ಇಜೇರಿ, ಯಲ್ಲಪ್ಪ ಅಫಜಲಪುರ, ಈರಪ್ಪ ಚೌಡಾಪೂರ, ಬಸು ನಾಯಕ ಸೇರಿದಂತೆ ನೂರಾರು ಸಮಾಜದ ಮುಖಂಡರು ಹಾಗೂ ಸಮುದಾಯದವರು ಭಾಗವಹಿಸಿದ್ದರು.





