ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ನೆಲಕದರೇನಹಳ್ಳಿ ಗ್ರಾಮದಲ್ಲಿ ‘ಗೃಹ ನಿರ್ಮಾಣ ಸಹಕಾರ ಸಂಘ’ಕ್ಕಾಗಿ ದಶಕಗಳ ಹಿಂದೆ ಮಾಡಲಾಗಿದ್ದ 59 ಎಕರೆ 39 ಗುಂಟೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ಭೂಸ್ವಾಧೀನ ಪ್ರಕ್ರಿಯೆಯು ವಂಚನೆ, ಅಧಿಕಾರದ ದುರ್ಬಳಕೆಯಿಂದ ಕೂಡಿದೆ ಹಾಗೂ ಯಾವುದೇ ನಿರ್ದಿಷ್ಟ ವಸತಿ ಯೋಜನೆಗೆ ಸರ್ಕಾರದ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಭೂಸ್ವಾಧೀನವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಸ್ವಾಧೀನವನ್ನು ಅಕ್ರಮವೆಂದು ಘೋಷಿಸಿದ್ದ ಈ ಹಿಂದಿನ ಏಕಸದಸ್ಯ ಪೀಠದ ತೀರ್ಪನ್ನು ಮರುಸ್ಥಾಪಿಸಿದೆ. ‘ಭೂಸ್ವಾಧೀನ ಕಾಯ್ದೆಯಡಿ ಸರ್ಕಾರವು ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ’ ಎಂದು ನ್ಯಾಯಾಲಯ ತನ್ನ 71 ಪುಟಗಳ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಭೂಸ್ವಾಧೀನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಅಥವಾ ಬಿಡಲಿ, ವಶಪಡಿಸಿಕೊಂಡ ಜಮೀನನ್ನು ಅದರ ಮೂಲ ಮಾಲೀಕರಿಗೆ ಮರಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸರ್ಕಾರದಿಂದ ಪರಿಹಾರ ಪಡೆದಿದ್ದ ಭೂಮಾಲೀಕರು, ಆ ಮೊತ್ತವನ್ನು ಯಾವುದೇ ಬಡ್ಡಿಯಿಲ್ಲದೆ ಮರುಪಾವತಿಸಬೇಕು. ಜಮೀನು ಹಸ್ತಾಂತರವಾಗಿದ್ದರೂ ಅಥವಾ ಹಣ ಮರುಪಾವತಿಯಾಗಿದ್ದರೂ, ಈ ಪ್ರಕರಣದ ಪ್ರತಿವಾದಿಯಾದ ‘ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ’ವು ಈ ಜಮೀನಿನ ಮೇಲೆ ಯಾವುದೇ ಹಕ್ಕು ಸಾಧಿಸುವಂತಿಲ್ಲ ಎಂದು ಕೋರ್ಟ್ ಕಟ್ಟುನಿಟ್ಟಾಗಿ ತಿಳಿಸಿದೆ.
ಪರಿಹಾರದ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿಸಲು ಸಾಧ್ಯವಾಗದ ಅಥವಾ ಇಷ್ಟವಿಲ್ಲದ ಮಾಲೀಕರ ಜಮೀನನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಬೇಕು. ಜಿಲ್ಲಾ ನ್ಯಾಯಾಧೀಶರ ಶ್ರೇಣಿಗಿಂತ ಕಡಿಮೆಯಿಲ್ಲದ ನ್ಯಾಯಾಂಗ ಅಧಿಕಾರಿಯ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಈ ಹರಾಜು ಪ್ರಕ್ರಿಯೆ ನಡೆಸಬೇಕು. ಇದರಿಂದ ಬರುವ ಹಣವನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಸಂತ್ರಸ್ತರ ಪರಿಹಾರ ನಿಧಿಗೆ ಬಳಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಈ ಪ್ರಕರಣದಲ್ಲಿ ವಂಚನೆಗೆ ‘ಗೃಹ ನಿರ್ಮಾಣ ಸಹಕಾರ ಸಂಘ’ವೇ ಕುಮ್ಮಕ್ಕು ನೀಡಿದೆ ಎಂದು ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, ಪ್ರತಿಯೊಬ್ಬ ಅರ್ಜಿದಾರರಿಗೆ ತಲಾ 50,000 ರೂ. ದಂಡ (ವೆಚ್ಚ) ಪಾವತಿಸುವಂತೆ ಆದೇಶಿಸಿದೆ. ಸೊಸೈಟಿಯ ಸದಸ್ಯತ್ವದ ಬಗ್ಗೆ ಸ್ಪಷ್ಟತೆಯಿಲ್ಲದಿರುವುದು, ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಸ್ವಾಧೀನಕ್ಕೂ ಮುನ್ನವೇ ಬಡಾವಣೆ ನಿರ್ಮಾಣಕ್ಕೆ ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದನ್ನು ಕೋರ್ಟ್ ಬೊಟ್ಟು ಮಾಡಿದೆ. ಜಿ.ವಿ.ಕೆ. ರಾವ್ ಸಮಿತಿಯು ಸಹ ಸೊಸೈಟಿಯ ದಾಖಲೆಗಳು ಅಪೂರ್ಣ ಮತ್ತು ದೋಷಪೂರಿತ ಎಂದು ಈ ಮೊದಲೇ ವರದಿ ನೀಡಿತ್ತು.
ನೆಲಕದರೇನಹಳ್ಳಿ ಗ್ರಾಮದಲ್ಲಿ 1988 ರಲ್ಲಿ ಈ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿತ್ತು. ಅಧಿಕಾರಿಗಳಿಗೆ ಲಂಚ ನೀಡಿರುವ ಬಗ್ಗೆ ಸಂಘದ ಪದಾಧಿಕಾರಿಗಳೇ ಹೇಳಿಕೆ ನೀಡಿದ್ದರೂ, ತ್ರಿಸದಸ್ಯ ಸಮಿತಿ ಹಾಗೂ ರಾಜ್ಯ ಮಟ್ಟದ ಸಮನ್ವಯ ಸಮಿತಿಯು ಯಾವುದೇ ಪರಿಶೀಲನೆ ನಡೆಸದೆ ನಿರ್ಲಕ್ಷ್ಯದಿಂದ ವರ್ತಿಸಿವೆ ಎಂದು ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಆದರೆ, ಘಟನೆ ನಡೆದು ಬಹಳಷ್ಟು ವರ್ಷಗಳು ಕಳೆದಿರುವುದರಿಂದ ಸರ್ಕಾರಿ ಅಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಮಾತ್ರ ನ್ಯಾಯಾಲಯ ಕೈಬಿಟ್ಟಿದೆ.





