ನವೆಂಬರ್ 26ರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ, ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನ ಸಮಿತಿ ಹಾಗೂ ಸಂವಿಧಾನ ಜನಾಂದೋಲನ ಹೋರಾಟ ಸಮಿತಿಗಳ ವತಿಯಿಂದ ಮೈಸೂರಿನಲ್ಲಿ ‘ಜನರ ದನಿ, ಸಂವಿಧಾನದ ದನಿ’ ಎಂಬ ಶೀರ್ಷಿಕೆಯಡಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮೈಸೂರಿಗೆ ಆಗಮಿಸಿದ್ದ ದಲಿತ ಸಂಘರ್ಷ ಸಮಿತಿಗಳ ರಾಜ್ಯಮಟ್ಟದ ಮುಖಂಡರು ನಗರದ ಖಾಸಗಿ ಹೋಟೆಲ್‌ನಲ್ಲಿ ಸಮಾಲೋಚನಾ ಸಭೆ ನಡೆಸಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ರಾಜ್ಯವ್ಯಾಪಿ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದರು.
ನವೆಂಬರ್ 26ರಂದು ಚಾಲನೆಗೊಳ್ಳಲಿರುವ ಈ ಅಭಿಯಾನವನ್ನು ವರ್ಷಪೂರ್ತಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಲಾಗುವುದು. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇಂದು ಎದುರಿಸುತ್ತಿರುವ ಸವಾಲುಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಸಂವಿಧಾನದ ಆಶಯಗಳನ್ನು ಬಲಪಡಿಸುವುದು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆಗೆ ಜನರನ್ನು ಸಂಘಟಿಸುವುದು ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ.
ಇದರೊಂದಿಗೆ ದಲಿತ ಸಮುದಾಯಗಳ ವಿವಿಧ ಉಪಜಾತಿಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಮತ್ತು ಒಡಕುಗಳನ್ನು ಸರಿಪಡಿಸಿಕೊಂಡು, ಪರಸ್ಪರ ಒಗ್ಗಟ್ಟು ಹಾಗೂ ಸಹಕಾರದೊಂದಿಗೆ ಮುನ್ನಡೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ದಲಿತ ಸಮುದಾಯಗಳ ಐಕ್ಯತೆ ಮತ್ತು ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಸಂಘಟಿತ ಹೋರಾಟ ಅಗತ್ಯವೆಂಬ ಹಿನ್ನೆಲೆಯಲ್ಲಿ, ಒಮ್ಮತದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಂವಿಧಾನ ರಕ್ಷಣೆಯ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ಈ ಸುದ್ದಿ ಓದಿದ್ದೀರಾ? ಪ್ರಜಾಪ್ರಭುತ್ವದ ಉಳಿವಿಗೆ ಸ್ವತಂತ್ರ ರಾಜಕೀಯ ಪರ್ಯಾಯ ಅನಿವಾರ್ಯ: ಡಾ. ಎಚ್.ವಿ. ವಾಸು
ಸಭೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಡಾ. ಎಚ್.ಸಿ. ಮಹದೇವಪ್ಪ, ಮೈಸೂರಿನ ಗಾಂಧಿನಗರದ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ದಸಂಸ ರಾಜ್ಯ ಮುಖಂಡರಾದ ಇಂಧೂಧರ್ ಹೊನ್ನಾಪುರ, ಎನ್. ವೆಂಕಟೇಶ್, ಎನ್. ಮುನಿಸ್ವಾಮಿ, ಡಿ.ಜಿ. ಸಾಗರ್, ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್, ವಿ. ನಾಗರಾಜ್, ಹರಿಹರ ಆನಂದಸ್ವಾಮಿ, ಅಣ್ಣಯ್ಯ, ಬೆಟ್ಟಯ್ಯಕೋಟೆ, ವೆಂಕಟರಮಣಸ್ವಾಮಿ (ಪಾಪು), ದೇವನೂರು ಬಸವರಾಜ್, ತುಕಾರಾಂ, ಸೋಮಶೇಖರ್ ಹಾಗೂ ನರೇಂದ್ರ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರಾದ ದೇವಗಳ್ಳಿ ಸೋಮಶೇಖರ್, ಶಂಭುಲಿಂಗ ಸ್ವಾಮಿ, ಆಲಗೂಡು ಶಿವಕುಮಾರ್, ಚುಂಚನಹಳ್ಳಿ ಮಲ್ಲೇಶ್, ಕಾರ್ಯಬಸವಣ್ಣ, ಚೋರನಹಳ್ಳಿ ಶಿವಣ್ಣ, ಮಲ್ಲಹಳ್ಳಿ ನಾರಾಯಣ, ದೊಡ್ಡಿಂದವಾಡಿ ಸಿದ್ದರಾಜು, ಶಿವಣ್ಣ ಮತ್ತಿತರರು ಇದ್ದರು.





