ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಶೋಷಣೆಮುಕ್ತ ಸಮಾಜದ ಆಶಯಗಳನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಪಟ್ಟಣದಲ್ಲಿ ಸೆ.27ರಂದು ‘ಬಸವ-ಭೀಮ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸತ್ಯ ಶೋಧಕ ಸಮಿತಿ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ತಿಳಿಸಿದರು.
ಬಾದಾಮಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಘಟಕ ಸತ್ಯ ಶೋಧಕ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
12ನೇ ಶತಮಾನದ ಬಸವಣ್ಣನವರ ಸಮಾನತೆಯ ಸಂದೇಶ ಹಾಗೂ ಆಧುನಿಕ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಜಾತಿ, ಅಸಮಾನತೆ ಹಾಗೂ ಸಾಮಾಜಿಕ ತಾರತಮ್ಯಗಳ ವಿರುದ್ಧ ಬಸವಣ್ಣ ಮತ್ತು ಅಂಬೇಡ್ಕರ್ ಅವರು ಪ್ರತಿಪಾದಿಸಿದ ವಿಚಾರಧಾರೆಗಳ ಕುರಿತು ಕಾರ್ಯಕ್ರಮದಲ್ಲಿ ಚಿಂತನ-ಮಂಥನ ನಡೆಯಲಿದೆ ಎಂದು ಹೇಳಿದರು.
This video cannot be played in your browser. Open the video directly
ಕಾರ್ಯಕ್ರಮದಲ್ಲಿ ಸಿದ್ದ-ನಕೊಳ್ಳದ ಶಿವಕುಮಾರ ಸ್ವಾಮೀಜಿ, ಶಿವಪೂಜಾ ಸ್ವಾಮೀಜಿ, ಸಚಿವ ಸತೀಶ ಜಾರಕಿಹೊಳಿ, ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಮರಡಿತೋಟ, ನಾಗಪ್ಪ ದೊಡಮನಿ, ವೆಂಕಟೇಶ ವಡ್ಡರ, ಲಾಲಸಾಬ್ ಬೇಪಾರಿ, ಮೈಬೂಬ ಬೈರಾಗಿ, ಆನಂದ ವಡ್ಡರ ಹಾಗೂ ಶರೀಫ್ ಬೈರಾಗಿ ಉಪಸ್ಥಿತರಿದ್ದರು.





