ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಉಳಿದಿಬ್ಬರು ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿ, ಹಲವು ಪತ್ರಗಳನ್ನು ಬರೆದಿದ್ದದ್ದು ಇದೀಗ ಬಹಿರಂಗವಾಗಿದೆ. ಈ ಬೆಳವಣಿಗೆಯು ಚುನಾವಣಾ ಆಯೋಗದ ಸ್ವಾಯತ್ತತೆ ಕುರಿತು ಪ್ರಶ್ನಗಳನ್ನು ಎತ್ತಿದೆ. ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಕೂಡ ಆಯೋಗದ ಕಾರ್ಯಾಚರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ, ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ (AG) ಆರ್. ವೆಂಕಟರಮಣಿ ಅವರ ಲಿಖಿತ ಅನುಮತಿ ಕೋರಿ ಸುಪ್ರೀಂ ಕೋರ್ಟ್ ವಕೀಲ ಬ್ರಜೇಶ್ ಸಿಂಗ್ ಅವರು ಪತ್ರ ಬರೆದಿದ್ದಾರೆ.
ನಿಯಮಗಳ ಪ್ರಕಾರ, ಸುಪ್ರೀಂ ಕೋರ್ಟ್‌ನಲ್ಲಿ ಯಾರಾದರೂ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಮುನ್ನ ಅಟಾರ್ನಿ ಜನರಲ್ ಅಥವಾ ಸೊಲಿಸಿಟರ್ ಜನರಲ್‌ರಿಂದ ಪೂರ್ವಾಪರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಸಿಂಗ್ ಅವರು ಎಜಿಗೆ ಪತ್ರ ಬರೆದಿದ್ದಾರೆ.
ಬುಧವಾರ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಪ್ರಕಟಿಸಿದ ತನಿಖಾ ವರದಿ ಪ್ರಕಾರ, “ಮೂವರು ಆಯುಕ್ತರನ್ನು (ಬಹುಸದಸ್ಯ) ಹೊಂದಿರುವ ಚುನಾವಣಾ ಆಯೋಗವನ್ನು ಸಿಇಸಿ ಜ್ಞಾನೇಶ್ ಕುಮಾರ್ ಒಬ್ಬರೇ ಏಕಪಕ್ಷೀಯವಾಗಿ ನಡೆಸುತ್ತಿದ್ದಾರೆ. ಉಳಿದಿಬ್ಬರು ಆಯುಕ್ತರ ಸಲಹೆಗಳನ್ನು ಪಡೆಯುತ್ತಿಲ್ಲ, ಅವರ ಮಾತಿಗೆ ಕಿವಿಗೊಡುತ್ತಿಲ್ಲ” ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಆಯೋಗದ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಕೆಲಸದ ಶೈಲಿಗೆ ದಕ್ಕೆ ತರುವುದಲ್ಲದೆ. ಈ ಹಿಂದೆ, ಸುಪ್ರೀಂ ಕೋರ್ಟ್ ನೀಡಿದ ಸಾಂವಿಧಾನಿಕ ತೀರ್ಪುಗಳ ಉಲ್ಲಂಘನೆಯಾಗಿದೆ ಎಂದು ಬ್ರಜೇಶ್ ಸಿಂಗ್ ಆರೋಪಿಸಿದ್ದಾರೆ.
ವರದಿ ಪ್ರಕಾರ, ಕಳೆದ 10 ತಿಂಗಳುಗಳಲ್ಲಿ ಆಯೋಗದ ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಬಾರಿ ಲಿಖಿತ ರೂಪದಲ್ಲಿ ತಮ್ಮ ಆಕ್ಷೇಪಣೆಗಳನ್ನು ಅಧಿಕೃತವಾಗಿ ದಾಖಲಿಸಿದ್ದಾರೆ. ಮತದಾರರ ನೋಂದಣಿ ಸಾಫ್ಟ್‌ವೇರ್‌ನಲ್ಲಿ ತಂದ ಬದಲಾವಣೆಗಳು, ಫಾರ್ಮ್ 6 ರಲ್ಲಾದ ಏಕಪಕ್ಷೀಯ ಮಾರ್ಪಾಡುಗಳು ಹಾಗೂ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ಅಥವಾ ಆಯೋಗದ ಅನುಮೋದನೆಯಿಲ್ಲದೆ ಕಾನೂನುಬಾಹಿರವಾಗಿ ಜಾರಿಗೆ ತರಲಾಗಿದೆ ಎಂದು ಇಬ್ಬರೂ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು.
This video cannot be played in your browser. Open the video directly
ಈ ಲೇಖನ ಓದಿದ್ದೀರಾ?: ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ ತಂತ್ರವೋ?
ಸುಪ್ರೀಂ ಕೋರ್ಟ್‌ನ ಟಿ.ಎನ್. ಶೇಷನ್ ಮತ್ತು ಅನೂಪ್ ಬರಣ್ವಾಲ್ ಪ್ರಕರಣಗಳ ಪ್ರಮುಖ ತೀರ್ಪುಗಳ ಪ್ರಕಾರ, ಚುನಾವಣಾ ಆಯೋಗವು ಸರ್ವಸಮ್ಮತ ಆಡಳಿತಾತ್ಮಕ ಒಮ್ಮತದ ಆಧಾರದ ಮೇಲೆಯೇ ಕಾರ್ಯನಿರ್ವಹಿಸಬೇಕು. ಮುಖ್ಯ ಚುನಾವಣಾ ಆಯುಕ್ತರು ‘ಸಮಾನರಲ್ಲಿ ಮೊದಲಿಗ’ರೇ (primus inter pares) ಹೊರತು ಅವರು ಸರ್ವಾಧಿಕಾರಿಯಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಜ್ಞಾನೇಶ್ ಕುಮಾರ್ ಅವರು ತಮ್ಮ ಸಹೋದ್ಯೋಗಿ ಆಯುಕ್ತರನ್ನೇ ಬದಿಗೊತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸಾಂವಿಧಾನಿಕ ಸಂಸ್ಥೆಯ ಘನತೆ ಮತ್ತು ಪವಿತ್ರತೆಯನ್ನು ಕುಗ್ಗಿಸಿದ್ದಾರೆ ಎಂದು ಬ್ರಜೇಶ್ ಸಿಂಗ್ ದೂರಿನಲ್ಲಿ ಆರೋಪಿಸಿದ್ದಾರೆ.
ಮತದಾರರ ಕೇಂದ್ರೀಕೃತ ಡೇಟಾಬೇಸ್‌ನ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಿರುವುದು ಮತ್ತು ಶಾಸನಬದ್ಧ ಒಮ್ಮತವಿಲ್ಲದೆ ಕೈಗೊಂಡ ನಿರ್ಧಾರಗಳು ಪ್ರಜಾಪ್ರಭುತ್ವದ ಮೂಲಭೂತ ಚೌಕಟ್ಟಿಗೆ ಮಾರಕವಾಗಿವೆ ಎಂದು ಅವರು ಹೇಳಿದ್ದಾರೆ.




