ರಸ್ತೆ ಸಂಪರ್ಕ ಕಡಿತ, ಕೊಳಚೆ ನೀರು, ಸೊಳ್ಳೆಗಳ ಕಾಟ, ವಿಷಜಂತುಗಳ ಭೀತಿ, ವಿದ್ಯುತ್ ಸಮಸ್ಯೆ ಹಾಗೂ ಭದ್ರತೆಯ ಕೊರತೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಬಾಗಲಕೋಟೆ ಪಟ್ಟಣದ ಮುಳುಗಡೆ ಸಂತ್ರಸ್ತರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪಾದಯಾತ್ರೆ ನಡೆಸಿದರು.
ಬಾಗಲಕೋಟೆ ಪಟ್ಟಣದ ವಾರ್ಡ್ ನಂ. 1, 2, 3, 6, 7 ಹಾಗೂ 9ರ ರಸ್ತೆ ಸಂಪರ್ಕ ಕಳೆದುಕೊಂಡ ಪ್ರದೇಶಗಳು ಮತ್ತು ನಡುಗಡ್ಡೆಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು, ತಮ್ಮ ಬದುಕಿನ ಸಂಕಷ್ಟಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲು ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದರು.
ನರಕಸದೃಶ ವಾತಾವರಣದಲ್ಲಿ ಬದುಕುವಂತಾಗಿದೆ!
ಮುಳುಗಡೆ ಪ್ರದೇಶದಲ್ಲಿ ನಿಂತಿರುವ ಹಿನ್ನೀರು ಸೊಳ್ಳೆಗಳ ಉತ್ಪತ್ತಿ, ವಿಷಜಂತುಗಳ ಕಾಟ, ಕೊಳಚೆ ನೀರು ಹಾಗೂ ದುರ್ವಾಸನೆಗೆ ಕಾರಣವಾಗಿದೆ. ಇದರೊಂದಿಗೆ ರಸ್ತೆ ಸಂಪರ್ಕ ಕಡಿತ ಮತ್ತು ವಿದ್ಯುತ್ ಸಮಸ್ಯೆಗಳು ಜನರ ದೈನಂದಿನ ಬದುಕನ್ನು ದುಸ್ತರಗೊಳಿಸಿವೆ. ಇಂತಹ ಪರಿಸ್ಥಿತಿಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದ್ದು, ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಸಂತ್ರಸ್ತರು ಒತ್ತಾಯಿಸಿದರು.
ಕಳ್ಳತನ, ಕುಡುಕರ ಹಾವಳಿ; ಮಹಿಳೆಯರಲ್ಲಿ ಆತಂಕ
ಯೂನಿಟ್-02ರ ವ್ಯಾಪ್ತಿಯಲ್ಲಿ ಮನೆಗಳ ಕಳ್ಳತನ ಪ್ರಕರಣಗಳು ನಡೆದಿದ್ದು, ಅನೈತಿಕ ಚಟುವಟಿಕೆಗಳು ಹಾಗೂ ಕುಡುಕರ ಹಾವಳಿಯಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ವಿಶೇಷವಾಗಿ ಒಂಟಿಯಾಗಿ ವಾಸಿಸುವ ಮಹಿಳೆಯರು ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ. ಹೀಗಾಗಿ ತಕ್ಷಣ ಪೊಲೀಸ್ ಠಾಣೆ ಸ್ಥಾಪಿಸುವುದು ಅಥವಾ ಅಗತ್ಯ ಪೊಲೀಸ್ ವ್ಯವಸ್ಥೆ ಕಲ್ಪಿಸುವುದು, ಪೊಲೀಸ್ ಗಸ್ತು ಹೆಚ್ಚಿಸುವುದು ಸೇರಿದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಟ್ಟಡಗಳ ಭೂಸ್ವಾಧೀನ, ಪರಿಹಾರಕ್ಕೆ ಒತ್ತಾಯ
ನಡುಗಡ್ಡೆ ಪ್ರದೇಶದಲ್ಲಿರುವ ಕಟ್ಟಡಗಳನ್ನು ಭೂಸ್ವಾಧೀನಪಡಿಸಿಕೊಂಡು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಅಗತ್ಯ ಮೂಲಸೌಕರ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾವಿರಾರು ಸಂತ್ರಸ್ತರು ಒತ್ತಾಯಿಸಿದರು.
ಈ ಸಂಬಂಧ ಬಾಗಲಕೋಟೆ ಪಟ್ಟಣಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಸಂತ್ರಸ್ತರ ಮನವಿ ಸ್ವೀಕರಿಸಿದ ಪ್ರಕಾಶ ತಪಶೆಟ್ಟಿ ಅವರು, ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವರ್ಷಗಳಿಂದ ಸಂಕಷ್ಟ ಎದುರಿಸುತ್ತಿರುವ ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಭರವಸೆಗಳಷ್ಟೇ ಸಾಲದು; ಜನರ ಆರೋಗ್ಯ, ಸುರಕ್ಷತೆ ಹಾಗೂ ಬದುಕಿನ ಹಕ್ಕನ್ನು ಕಾಪಾಡಲು ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ತುರ್ತಾಗಿ ಕಾರ್ಯಪ್ರವೃತ್ತರಾಗಬೇಕಿದೆ ಎಂಬುದು ನಿವಾಸಿಗಳ ಒತ್ತಾಯವಾಗಿದೆ.
ಸಂಗಯ್ಯ ಗಣಾಚಾರಿ, ಶ್ರೀಕಾಂತ ಪತ್ತಾರ, ಸುರೇಶ ಮಜ್ಜಿಗಿ, ಶ್ರೀನಾಥ್ ಸಜ್ಜನ, ಜಿ.ಬಿ. ಶಿಂದೆ, ಅಶೋಕ ಲಿಂಬಾವಳಿ, ಕಾವ್ಯಶ್ರೀ ಸಜ್ಜನ, ಮುನೀರಾ ಸೌದಾಗರ, ವೀಣಾ ಕಾಗಲ್, ಪುಷ್ಪಾ ಕರಡಿಗುಡ್ಡ, ಗುಂಡೂರಾವ್ ಶಿಂದೆ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.





