ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯಲ್ಲಿ ಚಳಿಗಾಲದಲ್ಲೇ ನೀರಿನ ಹರಿವು ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳ ಲಕ್ಷಾಂತರ ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಇಳಿಕೆಯಾಗಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ನ ಮಹಾರಾಷ್ಟ್ರದ ಕೊಯ್ನ್ ಜಲಾಶಯದಿಂದ 2 ಟಿಎಂಸಿ ನೀರನ್ನು ತಕ್ಷಣ ಬಿಡುಗಡೆಗೊಳಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ಆಗ್ರಹಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿನ ನೀರಿನ ಸಂಗ್ರಹ ಪ್ರಮಾಣವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಬ್ಯಾರೇಜ್‌ನಲ್ಲಿ ಸದ್ಯ ಕೇವಲ 3.5 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಈಗಾಗಲೇ ಮಳೆ ಕೊರತೆಯಿಂದ ರಾಜ್ಯದಲ್ಲಿ ಬರದ ಆತಂಕ ಎದುರಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಜನವರಿ ಅಂತ್ಯದ ವೇಳೆಗೆ ಉತ್ತರ ಕರ್ನಾಟಕ ತೀವ್ರ ಜಲಕ್ಷಾಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.
ಹಿಪ್ಪರಗಿ ಬ್ಯಾರೇಜ್ ಕೇವಲ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವ ಜಲಮೂಲವಲ್ಲ. ಈ ಭಾಗದ ಲಕ್ಷಾಂತರ ಜನರ ಕುಡಿಯುವ ನೀರಿನ ಅಗತ್ಯವನ್ನೂ ಪೂರೈಸುವ ಪ್ರಮುಖ ಆಧಾರವಾಗಿದೆ. ಹೀಗಾಗಿ ಪರಿಸ್ಥಿತಿ ಕೈಮೀರುವವರೆಗೆ ಕಾಯದೆ ರಾಜ್ಯ ಸರಕಾರ ಮಹಾರಾಷ್ಟ್ರ ಸರಕಾರದೊಂದಿಗೆ ತಕ್ಷಣ ಮಾತುಕತೆ ನಡೆಸಿ ಕೊಯ್ತಾ ಜಲಾಶಯದಿಂದ 2 ಟಿಎಂಸಿ ನೀರು ಬಿಡುಗಡೆಗೆ ಒಪ್ಪಿಗೆ ಪಡೆಯಬೇಕು ಎಂದು ಒತ್ತಾಯಿಸಿದರು.
ಮಳೆ ಕೊರತೆ ಹಾಗೂ ಸಮರ್ಪಕ ನೀರಿನ ಲಭ್ಯತೆಯಿಲ್ಲದೆ ಈಗಾಗಲೇ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಜಮೀನುಗಳಲ್ಲಿ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನೀರಿನ ವ್ಯವಸ್ಥೆ ಕಲ್ಪಿಸುವುದು ಸರಕಾರದ ಆದ್ಯತೆಯಾಗಬೇಕು. ಬರದ ತೀವ್ರತೆ ಹೆಚ್ಚಾದ ನಂತರ ಪರಿಹಾರ ಘೋಷಿಸುವುದಕ್ಕಿಂತ ಮೊದಲೇ ಸಮಸ್ಯೆ ತಡೆಗಟ್ಟಲು ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದರು.ಕುಡಿಯುವ ನೀರು ಮತ್ತು ಕೃಷಿ ಎರಡಕ್ಕೂ ಹಿಪ್ಪರಗಿ ಬ್ಯಾರೇಜ್ ನಿರ್ಣಾಯಕವಾಗಿರುವುದರಿಂದ ಉತ್ತರ ಕರ್ನಾಟಕದ ಜನರ ಹಿತದೃಷ್ಟಿಯಿಂದ ಸರಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಮಹಾರಾಷ್ಟ್ರದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ನೀರು ಹರಿಸುವ ಮೂಲಕ ರೈತರು ಹಾಗೂ ಜನಸಾಮಾನ್ಯರಿಗೆ ಎದುರಾಗಬಹುದಾದ ಜಲಸಂಕಷ್ಟವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.




