“ಪ್ರಸ್ತುತ ಆಧುನಿಕ ದಿನಗಳಲ್ಲಿ ಹಿರಿಯರು ತಪ್ಪು ಮಾಡುತ್ತಿದ್ದಾರೆ. ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಳುಹಿಸಿ ಮಮ್ಮಿ, ಡ್ಯಾಡಿ, ಅಂಕಲ್ ಸಂಸ್ಕೃತಿಗೆ ದೂಡುತ್ತಿದ್ದಾರೆ. ಇದು ನಿಲ್ಲಬೇಕು ನಮ್ಮ ನಮ್ಮ ಮನೆಯಿಂದಲೇ ಕನ್ನಡ ಉಳಿಸಿ, ಬೆಳೆಸುವ ಕಾರ್ಯವಾಗಬೇಕು. ನಮ್ಮ ಸುಮಧುರ ಹೃದಯದ ಕನ್ನಡ ಭಾಷೆ, ಸಂಸ್ಕೃತಿಗೆ ಒತ್ತು ನೀಡಬೇಕು ಅಂದಾಗ ಕನ್ನಡ ಉಳಿಯಲು, ಬೆಳೆಯಲು ಸಾಧ್ಯ” ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹುಬ್ಬಳ್ಳಿಯ ಲಿಂಗರಾಜ ಪಾಟೀಲ ಹೇಳಿದರು.
ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘವು ೭೧ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ, ನಾಡಹಬ್ಬ-೨೦೨೬ ರ ಪ್ರಯುಕ್ತ ಇಡೀ ತಿಂಗಳು ಆಯೋಜಿಸಿರುವ ವೈವಿಧ್ಯಮಯ ಕಾರ್ಯಕ್ರಮಗಳ ಏಳನೇ ದಿನಕ್ಕೆ ಚಾಲನೆ ನೀಡಿ ಮಾತನಾಡಿದರು.
“ಇನ್ನು ಮುಂದೆ ಕನ್ನಡ ಉಳಿಸಿ, ಬೆಳೆಸಿಕೊಂಡು ಹೋಗುವ ಹೆಚ್ಚಿನ ಜವಾಬ್ದಾರಿ ಯುವಕರ ಮೇಲಿದೆ. ಈ ಕುರಿತು ಸರಿಯಾದ ಮಾರ್ಗದರ್ಶನ ನೀಡುವಲ್ಲಿ, ಪ್ರಭಾವ ಬೀರುವಲ್ಲಿ ನಮ್ಮ ಹಿರಿಯರ ನಡೆ ತಪ್ಪುತ್ತಿದೆ. ಇಡೀ ರಾಜ್ಯದಲ್ಲಿಯೇ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡಪರ ಕಾರ್ಯಚಟುವಟಿಕೆಗಳನ್ನು ಕೇವಲ ನವೆಂಬರ್ ಒಂದನೇ ತಾರೀಖಿಗೆ ಸೀಮಿತಗೊಳಿಸದೇ ನಿರಂತರವಾಗಿ ಇಡೀ ತಿಂಗಳು ರಚನಾತ್ಮಕ, ವೈವಿಧ್ಯಮಯ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಶ್ಲಾಘನೀಯ” ಎಂದರು.
ತಬಲಾ ಸಾಧಕರಾದ ಧಾರವಾಡದ ಪಂ. ರಘುನಾಥ ನಾಕೋಡ ಅವರಿಗೆ ಪುರಸ್ಕಾರ ಫಲಕ ನೀಡಿ ಸಾಧಕರ ಸನ್ಮಾನ ಮಾಡಿ ಗೌರವಿಸಲಾಯಿತು, ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, “ಸಂಗೀತವು ನಿರಂತರ ಸಾಧನೆಯಿಂದ ಒಲಿಯುವಂಥ ಕಲೆಯಾಗಿದೆ. ಸಂಗೀತ ಎಂದರೆ ಸಮುದ್ರದಷ್ಟು ವಿಶಾಲವಾಗಿದೆ” ಎಂದು ತಮ್ಮ ಸಂಗೀತ ಪಯಣದ ಅನುಭವ ಹಂಚಿಕೊಂಡರು.
ಆರಂಭದಲ್ಲಿ ಧಾರವಾಡದ ಪಂಚಸಪ್ತಮಿ ಸಾಂಸ್ಕೃತಿಕ ಬಳಗದ ಸದಾನಂದ ತಾವಡೆ ಅವರಿಂದ ಸುಗಮ ಸಂಗೀತ, ವಿಜಯಪುರದ ಹಾಸ್ಯ ಭಾಷಣಕಾರ ಭಾಗೇಶ ಮುರಡಿ ಇವರಿಂದ ಹಾಸ್ಯ, ಕುಮಾರಿ ತನುಶ್ರೀ ಜುಮ್ಮನವರ ಇವರಿಂದ ನೃತ್ಯ ಹಾಗೂ ಕೊತಬಾಳದ ಅರುಣೋದಯ ಸಾಂಸ್ಕೃತಿಕ ಕಲಾ ತಂಡದದಿAದ ನಾಡುನುಡಿ ಗೀತಗಾಯನ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ ಹಾಗೂ ಚಂದ್ರಶೇಖರ ಅಮಿನಗಡ, ಯಕ್ಕೇರಪ್ಪ ನಡುವಿನಮನಿ, ನಾಗರಾಜ ಹೂಗಾರ, ಎಸ್.ಎಂ. ರಾಚಯ್ಯನವರ, ಎಂ.ಬಿ. ಹೆಗ್ಗೇರಿ, ಸುರೇಶ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ಸನ್ಮಾನಫಲಕ ವಾಚಿಸಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿ, ಡಾ. ಜಿನದತ್ತ ಹಡಗಲಿ ವಂದಿಸಿದರು.




