“ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಿ, ಅವರ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು” ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗದಗ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನವೆಂಬರ್ 6 ಶುಕ್ರವಾರ ರಂದು ಜರುಗಿದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೀಟ ಮತ್ತು ರೋಗಗಳ ಬಾಧೆಯಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ಗ್ರಾಮ ಪಂಚಾಯಿತಿ ಅಥವಾ ಹೋಬಳಿ ಮಟ್ಟದಲ್ಲಿ ಕೈಗೊಳ್ಳುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಕೊರತೆಯನ್ನು ನಿರ್ಧರಿಸಲಾಗುತ್ತದೆ. ಅದರ ಅನುಗುಣವಾಗಿ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ವಿತರಿಸುವ ಮೂಲಕ ಆರ್ಥಿಕ ಭದ್ರತೆ ಒದಗಿಸಲಾಗುತ್ತದೆ” ಎಂದರು.
“ಅದೇ ರೀತಿ, ಪ್ರವಾಹ, ಆಲಿಕಲ್ಲು ಮಳೆ ಹಾಗೂ ಭೂಕುಸಿತದಂತಹ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ವೈಯಕ್ತಿಕವಾಗಿ ಬೆಳೆ ನಷ್ಟವನ್ನು ನಿರ್ಧರಿಸಿ, ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವ ವ್ಯವಸ್ಥೆಯೂ ಯೋಜನೆಯಲ್ಲಿದೆ. ಇದರಿಂದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರೈತರು ಎದುರಿಸುವ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ” ಎಂದು ತಿಳಿಸಿದರು.
“2026-27ನೇ ಸಾಲಿನಲ್ಲಿ ಗದಗ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಅನುಷ್ಠಾನ ವಿಮಾ ಸಂಸ್ಥೆಯಾಗಿ ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಕಾರ್ಯನಿರ್ವಹಿಸಲಿದೆ” ಎಂದು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, “2026-27ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆ ವಿಮೆ ಯೋಜನೆಯಡಿ ವಿವಿಧ ಬೆಳೆಗಳಿಗೆ ವಿಮೆ ಮಾಡಿಸಲು ಅಂತಿಮ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ರೈತರು ನಿಗದಿತ ಅವಧಿಯೊಳಗೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಪಡೆಯಬಹುದಾಗಿದೆ” ಎಂದರು.
“ಹಿಂಗಾರು ಹಂಗಾಮಿನಲ್ಲಿ ಜೋಳ (ನೀರಾವರಿ ಮತ್ತು ಮಳೆಯಾಶ್ರಿತ), ಹುರುಳಿ (ಮಳೆಯಾಶ್ರಿತ), ಸೂರ್ಯಕಾಂತಿ (ಮಳೆಯಾಶ್ರಿತ) ಹಾಗೂ ಕುಸುಬೆ (ಮಳೆಯಾಶ್ರಿತ) ಬೆಳೆಗಳಿಗೆ ನವೆಂಬರ್ 16, 2026 ಕೊನೆಯ ದಿನವಾಗಿದೆ. ಮುಸುಕಿನ ಜೋಳ (ನೀರಾವರಿ), ಕಡಲೆ (ಮಳೆಯಾಶ್ರಿತ) ಹಾಗೂ ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ ನವೆಂಬರ್ 30, 2026 ಕೊನೆಯ ದಿನವಾಗಿದೆ. ಗೋಧಿ (ನೀರಾವರಿ ಮತ್ತು ಮಳೆಯಾಶ್ರಿತ) ಹಾಗೂ ಕಡಲೆ (ನೀರಾವರಿ) ಬೆಳೆಗಳಿಗೆ ಡಿಸೆಂಬರ್ 15, 2026 ಕೊನೆಯ ದಿನಾಂಕವಾಗಿದೆ” ಎಂದು ತಿಳಿಸಿದರು.
*ಇನ್ನು 2026-27ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಭತ್ತ (ನೀರಾವರಿ) ಬೆಳೆಗೆ ಫೆಬ್ರವರಿ 26, 2027 ಹಾಗೂ ಶೇಂಗಾ (ನೀರಾವರಿ) ಬೆಳೆಗೆ ಮಾರ್ಚ್ 13, 2027 ಕೊನೆಯ ದಿನಾಂಕವಾಗಿದೆ” ಎಂದು ತಿಳಿಸಿದರು.
“ರೈತರು ತಮ್ಮ ಬೆಳೆಗಳಿಗೆ ನಿಗದಿಪಡಿಸಿರುವ ಕೊನೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ದಾಖಲೆಗಳೊಂದಿಗೆ ಮುಂಚಿತವಾಗಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು. ಕೊನೆಯ ದಿನಾಂಕದವರೆಗೆ ಕಾಯದೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವ ಮೂಲಕ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು” ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ರೈತ ಸಮುದಾಯಕ್ಕೆ ಮನವಿ ಮಾಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




