ಲಿಂಗಾಯತ ಮಠಾಧೀಶರ ಒಕ್ಕೂಟದ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿ, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕುವಂತೆ ಸಂಘಟಿತ ಹೋರಾಟ ನಡೆಸಬೇಕು ಎಂದು ಮನಗೂಳಿ ವಿರಕ್ತಮಠದ ವೀರಾಧೀಶನಂದ ಸ್ವಾಮೀಜಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಬಸವ ಧರ್ಮಪೀಠದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಬಸವದಳದ ಮಹಾಧಿವೇಶನ ಹಾಗೂ ಲಿಂಗಾನಂದ ಸ್ವಾಮೀಜಿ–ಮಾತೆ ಮಹಾದೇವಿ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ತತ್ವನಿಷ್ಠೆಯಿಲ್ಲದ ವ್ಯಕ್ತಿಗಳನ್ನು ಭಕ್ತರು ದೂರವಿಡಬೇಕು. ಅಂತಹವರನ್ನು ಹತ್ತಿರ ಸೇರಿಸಿಕೊಳ್ಳದೇ ತಿರಸ್ಕರಿಸಬೇಕು. ಬಸವ ತತ್ವದ ಆಧಾರದ ಮೇಲೆ ಸಮಾಜ ಸಂಘಟಿತವಾದಾಗ ಮಾತ್ರ ಧಾರ್ಮಿಕ ಹಕ್ಕುಗಳಿಗಾಗಿ ಪರಿಣಾಮಕಾರಿ ಹೋರಾಟ ಸಾಧ್ಯವಾಗುತ್ತದೆ” ಎಂದು ಹೇಳಿದರು.
ಬೇಲೂರು ನಿಜಗುಣಾನಂದ ಸ್ವಾಮೀಜಿ ಮಾತನಾಡಿ, “ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ತಾವು ನಂಬಿದ ತತ್ವಕ್ಕೆ ಎಂದಿಗೂ ದ್ರೋಹ ಮಾಡಲಿಲ್ಲ. ಬದುಕಿನುದ್ದಕ್ಕೂ ಬಸವ ತತ್ವವನ್ನೇ ಆಚರಿಸಿ, ಅದೇ ಸಿದ್ಧಾಂತದ ಮೇಲೆ ಬಸವ ಧರ್ಮಪೀಠವನ್ನು ಕಟ್ಟಿದರು” ಎಂದು ಹೇಳಿದರು.
“ಇಂದು ನಾವು ಕೇವಲ ಅಭಿಮಾನಿಗಳಾಗುತ್ತಿದ್ದೇವೆ, ಅನುಭಾವಿಗಳಾಗುತ್ತಿಲ್ಲ. ಸಿಟ್ಟು ಒಂದು ಪುಟವಾದರೆ, ಸಂಬಂಧ ದೊಡ್ಡ ಪುಸ್ತಕ. ಒಂದು ಪುಟ ಹರಿದುಹೋದರೂ ಪುಸ್ತಕ ಉಳಿಸಿಕೊಳ್ಳುವಂತೆ ಸಂಬಂಧಗಳನ್ನು ಕಾಪಾಡಬೇಕು. ನಕಾರಾತ್ಮಕ ಚಿಂತನೆ ಬಿಟ್ಟು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಪಾಂಡುಮಟ್ಟಿ ವಿರಕ್ತಾನಂದ ಮಠದ ಗುರುಬಸವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ದೂರದೃಷ್ಟಿಯ ನಾಯಕರಾಗಿದ್ದರು. ಬಸವಣ್ಣನ ವಿದ್ಯಾಭೂಮಿ ಕೂಡಲಸಂಗಮ ಮತ್ತು ಕಾರ್ಯಭೂಮಿ ಬಸವಕಲ್ಯಾಣವನ್ನು ಪರಿಚಯಿಸಿ ಅಭಿವೃದ್ಧಿಪಡಿಸುವಲ್ಲಿ ಬಸವ ಧರ್ಮಪೀಠದ ಪಾತ್ರ ಅನನ್ಯವಾಗಿದೆ. ಶರಣಮೇಳ ಹಾಗೂ ಕಲ್ಯಾಣ ಪರ್ವಗಳ ಮೂಲಕ ಬಸವ ತತ್ವವನ್ನು ವಿಶ್ವದಾದ್ಯಂತ ಪರಿಚಯಿಸಿದರು” ಎಂದರು.
ಇಳಕಳ್ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, “ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಬಸವ ತತ್ವದ ಸಾಧಕರ ದೊಡ್ಡ ಬಳಗವನ್ನೇ ನಿರ್ಮಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾವಿರಾರು ಸಾಧಕರು ತತ್ವ ಪ್ರಚಾರದಲ್ಲಿ ತೊಡಗಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಬಸವ ಧರ್ಮಪೀಠದ ಮಹಾದೇಶ್ವರ ಸ್ವಾಮೀಜಿ, ಧಾರವಾಡದ ಅಕ್ಕಮಹಾದೇವಿ ಅನುಭವ ಪೀಠದ ಮಾತೆ ಜ್ಞಾನೇಶ್ವರಿ, ಉಳವಿಯ ಅಕ್ಕ ನಾಗಲಾಂಬಿಕ ಪೀಠದ ಮಾತೆ ದಾನೇಶ್ವರಿ, ಬಸವಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ, ಹೈದರಾಬಾದ್ ಬಸವ ಮಂಟಪದ ಅನಿಮಿಷಾನಂದ ಸ್ವಾಮೀಜಿ, ಮಾತೆ ಬಸವರತ್ನದೇವಿ, ಮಾತೆ ಅಕ್ಕ ನಾಗಲಾಂಬಿಕೆ, ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಕೆ.ವಿ. ವೀರೇಶ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ ಸೇರಿದಂತೆ ಹಲವು ಮಠಾಧೀಶರು, ಗಣ್ಯರಿದ್ದರು.





