ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಡಿರುವ ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಹೇಳಿಕೆಯನ್ನು ಖಂಡಿಸಿ, ತಕ್ಷಣ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ನಿರ್ದೇಶನದಂತೆ ನಡೆದ ಪ್ರತಿಭಟನೆಯ ಬಳಿಕ ಕಾರ್ಯಕರ್ತರು ನವನಗರ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ನಾಗರಾಜ್ ಎಸ್. ಹದ್ಲಿ, “ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿದ ಜನಪ್ರತಿನಿಧಿಯೊಬ್ಬರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಚೋದನಕಾರಿ, ಬೆದರಿಕೆಯ ಭಾಷೆ ಬಳಸಿರುವುದು ಖಂಡನೀಯ” ಎಂದು ಆರೋಪಿಸಿದರು.
“ಇದು ಕೇವಲ ಒಬ್ಬ ವ್ಯಕ್ತಿಯ ವಿರುದ್ಧದ ಹೇಳಿಕೆಯಾಗದೆ, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ವಿರೋಧ ಪಕ್ಷದ ಸ್ಥಾನಮಾನದ ಮೇಲಿನ ದಾಳಿಯಾಗಿದೆ” ಎಂದು ಹೇಳಿದರು.
“ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ ಬಿಜೆಪಿ ನಾಯಕರು ದ್ವೇಷ, ಬೆದರಿಕೆ ಮತ್ತು ಹಿಂಸೆಯ ಭಾಷೆಯನ್ನು ಬಳಸುತ್ತಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿದ್ದರೆ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಬಿಜೆಪಿ ಈ ಹೇಳಿಕೆಯನ್ನು ಖಂಡಿಸದಿದ್ದರೆ, ಅದು ಇಂತಹ ದ್ವೇಷ ರಾಜಕಾರಣಕ್ಕೆ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಮುಲ್ಲಾ, ಎಸ್.ಎನ್. ರಾಂಪೂರ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಶ್ರೀಧರ ನೀಲನಾಯಕ, ಬ್ಲಾಕ್ ಅಧ್ಯಕ್ಷ ಜಟ್ಟೆಪ್ಪ ಮಾದಾಪೂರ, ಸುನಿಲ್ ಬಾಲಗಾವಿ, ಹಾಜೀಸಾಬ್ ದಂಡಿನ, ಇಲಿಯಾಸ್ ಮದರಖಂಡಿ, ತಿಪ್ಪಣ್ಣ ನೀಲನಾಯಕ, ಸಿದ್ದಣ್ಣ ಗೋಡಿ, ಫಕೀರಪ್ಪ ಮಾದರ, ಜಯಚಂದ್ರ ಪೂಜಾರಿ, ಅಜೇಯ್ ಕಪಾಟೆ, ಪ್ರದೀಪ್ ಪಾಡಮುಖಿ, ಬಂದೇನವಾಜ ಬದಾಮಿ, ಕೃಷ್ಣ ಬದಾಮಿ, ಶಿವಾನಂದ ಬಸರಕೋಡ, ರಾಜೇಶ್ ವೈದ್ಯ, ಕೇಶವ ಕುಲಕರ್ಣಿ, ಶಿವಾನಂದ ಮಲ್ಲಾಪುರ, ಮಲ್ಲು ಚಲವಾದಿ, ಶಿವಕುಮಾರ ಪೂಜಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.




