ಗಾಜಾದಲ್ಲಿ ಇಸ್ರೇಲ್‌ನ ಭೀಕರ ದಾಳಿ, ಕ್ರೌರ್ಯಗಳು ಆರಂಭವಾಗಿ ಸುಮಾರು ಮೂರು ವರ್ಷಗಳು ಕಳೆದಿವೆ. ಹಲವು ಬಾರಿ ಕದನ ವಿರಾಮವನ್ನು ಜಾರಿಗೊಳಿಸಿದರೂ, ಇಸ್ರೇಲ್‌ನ ಕ್ರೌರ್ಯಕ್ಕೆ ಕಡಿವಾಣ ಬಿದ್ದಿಲ್ಲ. ಶಾಶ್ವತ ಕದನ ವಿರಾಮವೂ ಜಾರಿಗೆ ಬಂದಿರಲಿಲ್ಲ. ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆದ ಅನೇಕ ಸುತ್ತಿನ ಚರ್ಚೆಗಳು ನಡೆದಿದ್ದರೂ, ಮಾತುಕತೆಗಳು ಮುರಿದುಬಿದ್ದಿದ್ದವು. ಇದೀಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಶಾಂತಿ ಒಪ್ಪಂದವನ್ನು ಘೋಷಿಸಿದ್ದಾರೆ. ಗಾಜಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, “ತಮ್ಮ ನೇತೃತ್ವದಲ್ಲಿ ರಚಿಸಲಾದ ‘ಶಾಂತಿ ಮಂಡಳಿ’ಯು (ಬೋರ್ಡ್ ಆಫ್ ಪೀಸ್) ಹಮಾಸ್ ಮತ್ತು ಗಾಜಾದಲ್ಲಿರುವ ಎಲ್ಲ ಸಶಸ್ತ್ರ ಸಂಘಟನೆಗಳ ಸಂಪೂರ್ಣ ನಿಶ್ಶಸ್ತ್ರೀಕರಣಕ್ಕೆ ಸಂಬಂಧಿಸಿದ ಐತಿಹಾಸಿಕ ಒಪ್ಪಂದವನ್ನು ಸಾಧಿಸಿದೆ” ಎಂದು ಘೋಷಿಸಿದ್ದಾರೆ. ಇದು ಗಾಜಾದಲ್ಲಿ ಶಾಶ್ವತ ಶಾಂತಿ ಮತ್ತು ಇಸ್ರೇಲ್‌ನ ಭದ್ರತೆಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಇದಾದ ಬಳಿಕ ಹಮಾಸ್‌ನ ಹಿರಿಯ ಅಧಿಕಾರಿಗಳೂ ನಿಶ್ಶಸ್ತ್ರೀಕರಣ ಕುರಿತ ಒಪ್ಪಂದಕ್ಕೆ ತಲುಪಿರುವುದನ್ನು ದೃಢಪಡಿಸಿದ್ದಾರೆ. ಆದರೆ, ಇಸ್ರೇಲ್ ಸರ್ಕಾರದಿಂದ ಇದುವರೆಗೆ ಅಧಿಕೃತ ಒಪ್ಪಿಗೆಯ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಹೀಗಾಗಿ ಟ್ರಂಪ್ ಘೋಷಿಸಿದ ಒಪ್ಪಂದವು ವಾಸ್ತವದಲ್ಲಿ ಅನುಷ್ಟಾನಕ್ಕೆ ಬರುವುದೇ ಎಂಬ ಪ್ರಶ್ನೆ ಹಾಗೆಯೂ ಉಳಿದಿದೆ.
ಟ್ರಂಪ್ ಅವರ 20 ಅಂಶಗಳ ಶಾಂತಿ ಯೋಜನೆ ಏನು?
ಹಮಾಸ್ ನಿಶ್ಶಸ್ತ್ರೀಕರಣದ ಒಪ್ಪಂದವು ಟ್ರಂಪ್ ರೂಪಿಸಿರುವ ‘20 ಅಂಶಗಳ ಗಾಜಾ ಶಾಂತಿ ಯೋಜನೆ’ಯ ಒಂದು ಭಾಗವಾಗಿದೆ ಎಂದು ಹೇಳಲಾಗಿದೆ. ಈ ಯೋಜನೆಯ ಉದ್ದೇಶ ಕೇವಲ ಯುದ್ಧ ನಿಲ್ಲಿಸುವುದಲ್ಲ; ಗಾಜಾದ ಆಡಳಿತ ವ್ಯವಸ್ಥೆ, ಭದ್ರತೆ ಹಾಗೂ ಪುನರ್‌ನಿರ್ಮಾಣವನ್ನು ಸಂಪೂರ್ಣವಾಗಿ ಮರುಸಂಘಟಿಸುವುದು. ಅರ್ಥಾಥ್, ಗಾಜಾವನ್ನು ಸಂಪೂರ್ಣವಾಗಿ ಅಮೆರಿಕದ ರಿಯಲ್ ಎಸ್ಟೇಟ್ ಉದ್ಯಮವಾಗಿ ಮಾಡಿಕೊಳ್ಳುವುದು ಮತ್ತು ಅಮೆರಿಕದ ಸುಪರ್ದಿಗೆ ತೆಗೆದುಕೊಳ್ಳುವ ಹುನ್ನಾರದ ಭಾಗವಾಗಿದೆ.
ಈ ಯೋಜನೆಯ ಪ್ರಕಾರ, ಹಮಾಸ್ ತನ್ನ ಎಲ್ಲ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕು. ಗಾಜಾದಾದ್ಯಂತ ನಿರ್ಮಿಸಿರುವ ವಿಶಾಲ ಸುರಂಗ ಜಾಲವನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಬಳಿಕ, ಇಸ್ರೇಲ್ ತನ್ನ ಸೇನೆಯನ್ನು ಹಂತ ಹಂತವಾಗಿ ಗಾಜಾದಿಂದ ಹಿಂಪಡೆಯಬೇಕು. ಗಾಜಾದ ಆಡಳಿತವನ್ನು ಹೊಸ ತಾಂತ್ರಿಕ ಪರಿಣಿತರನ್ನೊಳಗೊಂಡ ಪ್ಯಾಲೆಸ್ತೀನ್ ಸರ್ಕಾರಕ್ಕೆ ವರ್ಗಾಯಿಸಬೇಕು. ಈ ಸರ್ಕಾರದ ಜೊತೆಗೆ ಅಂತಾರಾಷ್ಟ್ರೀಯ ಶಾಂತಿಪಡೆಯು ಭದ್ರತೆಯ ಹೊಣೆ ಹೊತ್ತು ಗಾಜಾದ ಪುನರ್‌ನಿರ್ಮಾಣ ಪ್ರಕ್ರಿಯೆಯನ್ನು ಮುನ್ನಡೆಸಬೇಕು ಎಂಬುದು ಯೋಜನೆಯ ಪ್ರಮುಖ ಅಂಶವಾಗಿದೆ.
ಇದರಿಂದ ಗಾಜಾ ಮತ್ತೊಮ್ಮೆ ಇಸ್ರೇಲ್ ವಿರುದ್ಧದ ದಾಳಿಗಳಿಗೆ ನೆಲೆಯಾಗದಂತೆ ತಡೆಯಲಾಗುತ್ತದೆ. ಅದೇ ವೇಳೆ, ಪ್ಯಾಲೆಸ್ತೀನ್‌ನ ನಾಗರಿಕರಿಗೂ ಸುರಕ್ಷಿತ ಜೀವನ ಕಲ್ಪಿಸುವುದು ಸಾಧ್ಯವಾಗಲಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ
ಹಮಾಸ್ ನಿಶ್ಶಸ್ತ್ರೀಕರಣಕ್ಕೆ ಹೇಗೆ ಒಪ್ಪಿತು?
ಇದುವರೆಗೂ ನಡೆದ ಎಲ್ಲ ಮಾತುಕತೆಗಳಲ್ಲಿ ಅತಿ ದೊಡ್ಡ ಅಡ್ಡಿಯಾಗಿದ್ದ ವಿಷಯವೇ ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನಿರಾಕರಿಸುತ್ತಿದ್ದದ್ದು. ಸಶಸ್ತ್ರ ಹೋರಾಟವೇ ತನ್ನ ಅಸ್ತಿತ್ವದ ಆಧಾರ ಎಂದು ಹಮಾಸ್ ಪ್ರತಿಪಾದಿಸುತ್ತಿತ್ತು. ಅದರ ಸ್ಥಾಪನಾ ಘೋಷಣೆಯಲ್ಲಿಯೂ ಇಸ್ರೇಲ್ ವಿರುದ್ಧದ ಸಶಸ್ತ್ರ ಪ್ರತಿರೋಧಕ್ಕೆ ಬೆಂಬಲ ನೀಡಲಾಗಿದೆ.
ಆದರೆ, ಈ ಬಾರಿ ಕತಾರ್, ಟರ್ಕಿ ಹಾಗೂ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಬಳಿಕ ಹಮಾಸ್ ನಿಶ್ಶಸ್ತ್ರೀಕರಣದ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿದೆ ಎಂದು ವರದಿಗಳು ತಿಳಿಸಿವೆ. ಈ ಒಪ್ಪಂದದಂತೆ ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ‘ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆ’ಗೆ (International Stabilisation Force) ಹಸ್ತಾಂತರಿಸಬೇಕು.
ಹಂತ ಹಂತವಾಗಿ ಜಾರಿಯಾಗುವ ಯೋಜನೆ
ಈ ಶಾಂತಿ ಒಪ್ಪಂದವನ್ನು ಒಂದೇ ಬಾರಿ ಜಾರಿಗೆ ತರಲಾಗುವುದಿಲ್ಲ. ನಿಗದಿತ ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಮೊದಲ ಹಂತದಲ್ಲಿ ಗಾಜಾ ಪೊಲೀಸ್ ಪಡೆಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಹೊಸ ಆಡಳಿತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಲಿದೆ. ಇದು ಎರಡು ವಾರಗಳೊಳಗೆ ನಡೆಯಬಹುದು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಪೊಲೀಸ್ ಪಡೆ ಹಮಾಸ್‌ನ ಬಹುಪಾಲು ಯೋಧರನ್ನು ಒಳಗೊಂಡಿಲ್ಲ. ಆದಾಗ್ಯೂ ಈ ಪಡೆಯು ಗಾಜಾದಲ್ಲಿರುವ ಭಾರೀ ಶಸ್ತ್ರಾಸ್ತ್ರಗಳು ಮತ್ತು ಹಮಾಸ್‌ನ ಸುರಂಗ ಜಾಲವನ್ನು ನಿಷ್ಕ್ರಿಯಗೊಳಿಸಬೇಕೆಂದು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.
ಅಧಿಕಾರಿಗಳ ಅಂದಾಜಿನ ಪ್ರಕಾರ, ಭಾರೀ ಶಸ್ತ್ರಾಸ್ತ್ರಗಳ ಶರಣಾಗತಿ, ಸುರಂಗಗಳ ಧ್ವಂಸ ಹಾಗೂ ಹಮಾಸ್‌ನ ಸೈನಿಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸುವ ಪ್ರಕ್ರಿಯೆಗೆ 200ರಿಂದ 350 ದಿನಗಳವರೆಗೆ ಸಮಯ ಬೇಕಾಗಬಹುದು.
ಈ ಲೇಖನ ಓದಿದ್ದೀರಾ?: ಬಿಜೆಪಿ ಸರ್ಕಾರಗಳಿಂದ ಸಂವಿಧಾನದ ಬಹುತ್ವಕ್ಕೆ ‘ಕೇಸರೀಕರಣ’ದ ಲೇಪನ!
ಈ ಪ್ರಕ್ರಿಯೆ ಪೂರ್ಣಗೊಂಡಂತೆ ಇಸ್ರೇಲ್ ಸೇನೆ ಹಂತ ಹಂತವಾಗಿ ಗಾಜಾದಿಂದ ಹಿಂದೆ ಸರಿಯಲಿದೆ. ಅದರ ನಂತರ ಅಂತಾರಾಷ್ಟ್ರೀಯ ಶಾಂತಿಪಡೆ ಮತ್ತು ಹೊಸ ಪ್ಯಾಲೆಸ್ತೀನ್ ಪೊಲೀಸ್ ವ್ಯವಸ್ಥೆ ಗಾಜಾದ ಭದ್ರತೆಯ ಹೊಣೆ ಹೊತ್ತುಕೊಳ್ಳಲಿವೆ.
ಇಸ್ರೇಲ್‌ಗೆ ಇನ್ನೂ ಅನುಮಾನ
ಅಮೆರಿಕದ ಅಧಿಕಾರಿಗಳ ಪ್ರಕಾರ, ಮಾತುಕತೆಯ ಪ್ರತಿಯೊಂದು ಹಂತದಲ್ಲೂ ಇಸ್ರೇಲ್ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಆದರೆ, ಹಮಾಸ್ ನಿಜವಾಗಿಯೂ ತನ್ನ ಶಸ್ತ್ರಾಸ್ತ್ರಗಳನ್ನು ಒಪ್ಪಿಸುತ್ತದೆಯೇ ಎಂಬ ಬಗ್ಗೆ ಇಸ್ರೇಲ್‌ಗೆ ಇನ್ನೂ ತೀವ್ರ ಅನುಮಾನವಿದೆ.
ಅಲ್ಲದೆ, ಹಮಾಸ್ ಸಂಪೂರ್ಣವಾಗಿ ತನ್ನ ಸಶಸ್ತ್ರ ಸಾಮರ್ಥ್ಯವನ್ನು ಕಳೆದುಕೊಳ್ಳಬೇಕು. ಗಾಜಾದ ಮೇಲಿನ ತನ್ನ ಪ್ರಭಾವವನ್ನೂ ತ್ಯಜಿಸಬೇಕು ಎಂಬ ಷರತ್ತುಗಳನ್ನೂ ಇಸ್ರೇಲ್ ಮುಂದಿಟ್ಟಿದೆ.
ಅಮೆರಿಕದ ಅಧಿಕಾರಿಯೊಬ್ಬರ ಪ್ರಕಾರ, ಟ್ರಂಪ್ ರೂಪಿಸಿರುವ 20 ಅಂಶಗಳ ಯೋಜನೆಗೆ ಇಸ್ರೇಲ್ ಈಗಾಗಲೇ ಒಪ್ಪಿಗೆ ಸೂಚಿಸಿದ್ದ ಮೂಲಭೂತ ಅಂಶಗಳಿಗಿಂತ ಹೆಚ್ಚೇನನ್ನೂ ಕೇಳಲಾಗುತ್ತಿಲ್ಲ. ಗಾಜಾದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ವೈಮಾನಿಕ ದಾಳಿಗಳನ್ನು ನಿಲ್ಲಿಸುವುದೇ ಅದರ ಮುಖ್ಯ ಬದ್ಧತೆಯಾಗಿದೆ. ಈ ಒಪ್ಪಂದವನ್ನು ಇಸ್ರೇಲ್ ಪಾಲಿಸದಿದ್ದರೆ ಟ್ರಂಪ್ ತೀವ್ರ ನಿರಾಶೆಗೊಳ್ಳಲಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಯುದ್ಧದ ಕರಾಳ ಹಿನ್ನೆಲೆ
2023ರ ಅಕ್ಟೋಬರ್ 7ರಂದು ಹಮಾಸ್ ಮತ್ತು ಇಸ್ರೇಲ್ ನಡೆಯುವೆ ಸಂಘರ್ಷ ಆರಂಭವಾಯಿತು. ಗಾಜಾ ಮೇಲೆ ಇಸ್ರೇಲ್ ಭೀಕರವಾಗಿ ದಾಳಿಗಳನ್ನು ನಡೆಸಿತು. ಹಮಾಸ್ ಆಡಳಿತದ ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್‌ನ ಕ್ರೌರ್ಯದಿಂದಾಗಿ ಗಾಜಾದಲ್ಲಿ ಈವರೆಗೆ 73 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಇವರಲ್ಲಿ 21 ಸಾವಿರಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. ಕದನ ವಿರಾಮದ ಅವಧಿಯಲ್ಲಿಯೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಬಂದಿದೆ.
ಇದೀಗ ಗಾಜಾದ ಅರ್ಧಕ್ಕಿಂತ ಹೆಚ್ಚು ಪ್ರದೇಶ ಇಸ್ರೇಲ್ ಸೇನೆಯ ನಿಯಂತ್ರಣದಲ್ಲಿದೆ. ಲಕ್ಷಾಂತರ ಪ್ಯಾಲೆಸ್ತೀನಿಯರು ತಾತ್ಕಾಲಿಕ ಬಿಡಾರಗಳಲ್ಲಿ ಅಥವಾ ಸಂಪೂರ್ಣವಾಗಿ ಧ್ವಂಸಗೊಂಡ ನಗರ ಪ್ರದೇಶಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಗುರುವಾರ ನಡೆದ ಇಸ್ರೇಲ್ ವೈಮಾನಿಕ ದಾಳಿಗಳಲ್ಲಿಯೂ ಇಬ್ಬರು ಮಕ್ಕಳನ್ನು ಒಳಗೊಂಡಂತೆ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.



