ರಾಜಸ್ಥಾನದ ಬುಡಕಟ್ಟು (ಆದಿವಾಸಿ) ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳ ಶೋಚನೀಯ ಸ್ಥಿತಿಯನ್ನು ಖಂಡಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನಾಯಕರು ರಾಜಸ್ಥಾನ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿಜೆಪಿಯ ‘ಆದಿವಾಸಿ ಸ್ಕೂಲ್ ಠೀಕ್ ಕರೋ’ (ಆದಿವಾಸಿ ಶಾಲೆಗಳನ್ನು ಸರಿಪಡಿಸಿ) ಅಭಿಯಾನದ ಭಾಗವಾಗಿ, ಸಿಜೆಪಿ ಸಹ-ಸಂಚಾಲಕ ಅಶುತೋಷ್ ರಾಂಕಾ ಅವರ ನೇತೃತ್ವದ ಏಳು ಸದಸ್ಯರ ತಂಡವು ಉದಯಪುರ ವಿಭಾಗದ ಖೇರ್ವಾರಾ ವಿಧಾನಸಭಾ ಕ್ಷೇತ್ರದ ಡೆಮಾಟ್, ಪೋಂಗ್ಲಿ ಮತ್ತು ಬಾಬರಿ ಸೇರಿದಂತೆ ಹಲವು ಬುಡಕಟ್ಟು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಇದನ್ನೂ ಓದಿ: ಸಿಜೆಪಿ ಬೆನ್ನತ್ತಿದ ಕಾಂಗ್ರೆಸ್; ‘ಎಎಪಿ ಆಡಳಿತದ ಪಂಜಾಬ್‌ನಲ್ಲೂ ಅದೇ ಧೈರ್ಯ ತೋರಿಸಿ’: ಸಚಿನ್ ಪೈಲಟ್ ಸವಾಲು
ಸಿಜೆಪಿ ತಂಡವು ನೀಡಿರುವ ವರದಿಯ ಪ್ರಕಾರ, ಕಾಗದದ ಮೇಲೆ ಶಾಲೆಗಳ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಾಯ್ದಿರಿಸಲಾಗಿದೆಯಾದರೂ, ಸ್ಥಳದಲ್ಲಿ ಯಾವುದೇ ಶಾಲಾ ಕಟ್ಟಡಗಳೇ ನಿರ್ಮಾಣವಾಗಿಲ್ಲ. ಇನ್ನು ಕಾರ್ಯಾಚರಿಸುತ್ತಿರುವ ಶಾಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ, ತರಗತಿ ಕೊಠಡಿಗಳು ಹಾಗೂ ಕನಿಷ್ಠ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
This video cannot be played in your browser. Open the video directly
ಆದಿವಾಸಿ ಏಕತಾ ಪರಿಷತ್ ಜೊತೆಗೂಡಿ ಪ್ರತಿಭಟನೆ ನಡೆಸಿದ ಸಿಜೆಪಿ ನಾಯಕರು, ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ (ಟಿಎಡಿ) ಮೀಸಲಿಟ್ಟಿದ್ದ ಸುಮಾರು ₹1,500 ಕೋಟಿ ರೂಪಾಯಿಗಳ ಅನುದಾನ ಬಳಕೆಯಾಗದೆ ಲ್ಯಾಪ್ಸ್ (ವಜಾ) ಆಗಿದೆ ಎಂದು ಆರೋಪಿಸಿದ್ದಾರೆ. ಬುಡಕಟ್ಟು ಮಕ್ಕಳ ಶಿಕ್ಷಣ ಮತ್ತು ಕಲ್ಯಾಣಕ್ಕೆ ಬಳಕೆ ಮಾಡಬೇಕಿದ್ದ ಈ ಭಾರಿ ಪ್ರಮಾಣದ ಹಣ ಎಲ್ಲಿಗೆ ಹೋಯಿತು ಎಂದು ಸರ್ಕಾರ ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ.
ಖಾಲಿ ಇರುವ ಶಾಲಾ ಜಾಗಗಳಲ್ಲಿ ತಕ್ಷಣವೇ ಕಟ್ಟಡ ನಿರ್ಮಿಸಬೇಕು, ಮೂಲಸೌಕರ್ಯಗಳನ್ನು ಒದಗಿಸಬೇಕು ಮತ್ತು ಅನುದಾನದ ಸಂಪೂರ್ಣ ಪಾರದರ್ಶಕ ಬಳಕೆಯನ್ನು ಖಾತರಿಪಡಿಸಬೇಕು ಎಂದು ಸಿಜೆಪಿ ಒತ್ತಾಯಿಸಿದೆ. ಈ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ, ಜಾರ್ಖಂಡ್, ಒಡಿಶಾ ಮತ್ತು ಗುಜರಾತ್‌ನ ಬುಡಕಟ್ಟು ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದು ಸಿಜೆಪಿ ತಿಳಿಸಿದೆ.





