“ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಏರಿದಾಗ 15 ಲಕ್ಷ ನಮ್ಮ ಖಾತೆಗೆ ಜಮೆ ಮಾಡುವುದಾಗಿ ಹೇಳಿದರು. ಆದರೆ 2026 ಆದರೂ ನಮ್ಮ ಖಾತೆಗೆ ಹಣ ಬಂದಿಲ್ಲ. ಅವರು ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ಎಂದು ಹೇಳಿಕೊಳ್ಳುತ್ತಾರೆ. ಆದರೆ ಎಲ್ಲಿದೆ ವಿಕಾಸ? ತಮ್ಮನ್ನು ತಾವು ಮೋದಿ ಅವರು ವಿಕಾಸ ಪುರುಷ ಎಂದು ಕರೆಸಿಕೊಳ್ಳುತ್ತಾರೆ. ಆದರೆ ಅವರು ವಿಕಾಸ ಪುರುಷ ಅಲ್ಲ. ವಿನಾಶ ಪುರುಷ” ಎಂದು ಕೇಂದ್ರ ಸರ್ಕಾರದ ವಿರುದ್ಧ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಷ್ಟ್ರೀಯ ನಾಯಕಿ, ಪಶ್ಚಿಮ ಬಂಗಾಳದ ಯುವಜನ ನಾಯಕಿ, ಹೋರಾಟಗಾರ್ತಿ ಧೀಪ್ಸಿತಾ ಧರ್ ವಾಗ್ದಾಳಿ ನಡೆಸಿದರು.
ಶಿಕ್ಷಣ ಉದ್ಯೋಗ ಆರೋಗ್ಯದ ಹಕ್ಕಿಗಾಗಿ ಯುವಜನತೆ ಭದ್ರತೆಯ ಬದುಕಿಗಾಗಿ ಭಾನುವಾರ ಮಂಗಳೂರು ನಗರದ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆದ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್‌ನ (ಡಿವೈಎಫ್‌ಐ) 15ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ದೀಪ್ಸಿತಾ ಧರ್ ಮಾತನಾಡಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆ ನಿರ್ಮಾಣಕ್ಕೆ ಸರ್ಕಾರ ಅಸ್ತು
“ಭಗತ್ ಸಿಂಗ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದಾಗ ಬ್ರಿಟೀಷರು ಅವರನ್ನು ಜೈಲಿಗಟ್ಟಿದರು. ದೇಶದ್ರೋಹದ ಪ್ರಕರಣ ದಾಖಲಿಸಿದರು. ಇಂದು ಸರ್ಕಾರಕ್ಕೆ ಸವಾಲೆಸೆಯುವವರನ್ನು, ಜನರ ಪರವಾಗಿ, ಕೋಮುವಾದದ ವಿರುದ್ಧವಾಗಿ ಮಾತನಾಡುವವರನ್ನು ದೇಶದ್ರೋಹಿಗಳೆಂದು ಈ ನರೇಂದ್ರ ಮೋದಿ ಸರ್ಕಾರ ಕರೆಯುತ್ತಿದೆ. ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿ ಯುವಜನರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ವಿವಿಧ ಶೈಕ್ಷಣಿಕ ಸಮಸ್ಯೆಗಳ ವಿರುದ್ಧವಾಗಿ ಹೋರಾಡಿದಾಗ ಆ ವಿದ್ಯಾರ್ಥಿಗಳನ್ನು ನೀವು ದೇಶದ್ರೋಹಿಗಳೆಂದು ಕರೆದಿರಿ. ಜನರ ಪರ ಮಾತನಾಡುವುದು ದೇಶದ್ರೋಹವೆಂದಾದರೆ ನಾವು ದೇಶದ್ರೋಹಿಗಳೆಂದೇ ಕರೆಸಿಕೊಳ್ಳಲು ಸಿದ್ಧರಾಗಿದ್ದೇವೆ” ಎಂದು ಹೇಳಿದರು.
This video cannot be played in your browser. Open the video directly
“ದಕ್ಷಿಣ ಕನ್ನಡ ಜಿಲ್ಲೆಯು ವೈವಿಧ್ಯತೆಯಿಂದ ಕೂಡಿದ ಜಿಲ್ಲೆ. ಈ ಸಣ್ಣ ಜಿಲ್ಲೆಯಲ್ಲೇ ಕನ್ನಡ, ತುಳು, ಬ್ಯಾರಿ, ಕೊಂಕಣಿ ಹೀಗೆ ಹಲವು ಭಾಷೆಗಳನ್ನು ಮಾತನಾಡುವವರಿದ್ದಾರೆ. ಹಲವು ಧರ್ಮ ಪಾಲಿಸುವವರಿದ್ದಾರೆ. ಇಲ್ಲಿ ನಮ್ಮ ಸಂಗಾತಿಗಳು ಘೋಷಣೆ ಕೂಗುವಾಗ ನಮ್ಮಲ್ಲಿ ಯಾವ ಧರ್ಮದ ರಕ್ತವೂ ಇಲ್ಲ. ನಮ್ಮಲ್ಲಿರುವುದು ಮಾನವ ರಕ್ತ ಎಂದರು. ಹೌದು, ನಮ್ಮಲ್ಲಿರುವುದು ಮಾನವ ರಕ್ತ, ಅದುವೇ ಕೆಂಪು ರಕ್ತ. ಆದರೆ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಈ ಒಗ್ಗಟ್ಟನ್ನು ಮುರಿಯುವ ಕುತಂತ್ರ ನಡೆಯುತ್ತಿದೆ. ನಮ್ಮ ಒಗ್ಗಟ್ಟು ಅಪಾಯದಲ್ಲಿದೆ. ಆದರೂ ನಾವು ಬೆನ್ನಿಗೆ ಬೆನ್ನು ಕೊಟ್ಟು ಈ ಕೋಮುವಾದದ ವಿರುದ್ಧ ಹೋರಾಡೋಣ” ಎಂದು ಕರೆ ನೀಡಿದರು.

“ಈಗ ಕೇಂದ್ರ ಸರ್ಕಾರವು ಹೊಸ ಕಾರ್ಮಿಕ ನೀತಿಯನ್ನು ಜಾರಿಗೊಳಿಸಿದೆ. ಈ ಕಾರ್ಮಿಕ ನೀತಿ ಪ್ರಕಾರ ಪ್ರತಿ ದಿನ 12 ಗಂಟೆ ನಾವು ದುಡಿಯಬೇಕಾಗುತ್ತದೆ. ಮಾತೃತ್ವ ರಜೆಯನ್ನೂ ಈ ನೀತಿಯಡಿ ತೆಗೆದು ಹಾಕಲಾಗಿದೆ. ಇನ್ನೊಂದೆಡೆ ನಮ್ಮ ದೇಶದಲ್ಲಿ ಪ್ರತಿದಿನ ರೈತರು ಸಾಲದ ಸುಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವ ದೇಶದಲ್ಲಿ ರೈತರು ಪ್ರತಿದಿನ ಸಾಯುತ್ತಾರೋ ಆ ದೇಶ ಬೆಳೆಯುವುದು ಹೇಗೆ? ಹುಟ್ಟಿದ ಮಕ್ಕಳು ಬಾಲ್ಯದಿಂದಲೇ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಮಕ್ಕಳನ್ನು ಹೆರುತ್ತಿದ್ದಾರೆ. ಯಾವ ದೇಶದಲ್ಲಿ ಹುಟ್ಟಿದ ಮಕ್ಕಳು ಆರೋಗ್ಯವಂತರಾಗಿರುವುದಿಲ್ಲವೋ ಆ ದೇಶ ಬೆಳೆಯುವುದು ಹೇಗೆ? ಎಂದು ಪ್ರಶ್ನಿಸಿದರು.
“ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ಬಿಜೆಪಿಗರು ಅಲ್ಲಲ್ಲಿ ದೀಪ ಬೆಳಗಿಸಿದರು. ಆದರೆ ಅದೇ ಭಾರತದಲ್ಲಿ ಲಕ್ಷಾಂತರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಹೀಗಿರುವಾಗ ನೀವು ಯಾವ ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದೀರಿ? ಎಲ್ಲರಿಗೂ ಶಿಕ್ಷಣ ಸಿಗುತ್ತಿದೆಯೇ ಎಂಬ ಆಲೋಚನೆ ನಿಮ್ಮಲ್ಲಿ ಎಂದಾದರೂ ಬಂದಿದ್ದೇಯಾ” ಎಂದರು.
“ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೂ ಈ ಸಂದರ್ಭದಲ್ಲಿ ಪ್ರಶ್ನೆ ಕೇಳಬೇಕಾಗುತ್ತದೆ. ನೀವು ಆರ್‌ಎಸ್‌ಎಸ್ ಸಿದ್ಧಾಂತವನ್ನು, ಜಾತಿವಾದಿ ನೀತಿಯ ವಿರುದ್ಧವಾಗಿ ನೀವು ಧ್ವನಿ ಎತ್ತುತ್ತೀರಾ? ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಯುವುದಕ್ಕೂ ಮುನ್ನ ನಮ್ಮ ಸಂಗಾತಿಗಳು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು, ಮನವಿ ಪತ್ರ ನೀಡಲು ಮುಂದಾದರು. ಈ ಕಾಂಗ್ರೆಸ್ ಸರ್ಕಾರ ನಮ್ಮ ಸಂಗಾತಿಗಳನ್ನು ಬಂಧಿಸಿದೆ. ಆದರೆ ಈವರೆಗೆ ಯಾವುದೇ ಜೈಲು ಶಿಕ್ಷೆಯು ನಮ್ಮ ಹೋರಾಟವನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದನ್ನು ಈ ದೇಶದ ಯುವ-ವಿದ್ಯಾರ್ಥಿ ಹೋರಾಟಗಾರರು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಮುಂದೆಯೂ ನಮ್ಮನ್ನು ತಡೆಯಲು ಸಾಧ್ಯವಾಗಲ್ಲ” ಎಂದರು.

ಹಾಗೆಯೇ ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿ ಮೆದುಳು ನಿಷ್ಕ್ರೀಯವಾದ ಬಳಿಕ ಕಿಡ್ನಿ, ಶ್ವಾಸಕೋಶ ಮೊದಲಾದ ಅಂಗಾಗಗಳನ್ನು ದಾನ ಮಾಡಿದ ಡಿವೈಎಫ್‌ಐ ಮುಖಂಡ ವರ್ಷಿತ್ ಕುತ್ತಾರ್ ಕುಟುಂಬವನ್ನೂ ದೀಪ್ಸಿತಾ ನೆನಪಿಸಿಕೊಂಡರು. “ಇಲ್ಲಿಗೆ ಬಂದ ಕೂಡಲೇ ನಾನು ವರ್ಷಿತ್ ಕುತ್ತಾರ್ ಮನೆಗೆ ಭೇಟಿ ನೀಡಿದೆ. ಅವರ ಊರಿನವರು, ಸ್ನೇಹಿತರು ಎಲ್ಲರೂ ವರ್ಷಿತ್ ಹಲವಾರು ಮಂದಿಗೆ ಸಹಾಯ ಮಾಡುತ್ತಿದ್ದರು ಎಂದು ಹೇಳಿದರು. ಇದು ನಮ್ಮ ಡಿವೈಎಫ್‌ಐ ಸಂಗಾತಿಗಳ ಗುಣ” ಎಂದರು.
ಇದನ್ನೂ ಓದಿ: ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?
“ನಮ್ಮದು ಸೌಹಾರ್ಧ, ವೈವಿಧ್ಯ ಸಂಸ್ಕೃತಿ. ಆದರೆ ಆರ್‌ಎಸ್‌ಎಸ್ ಬಿಜೆಪಿ ಈ ಸಂಸ್ಕೃತಿ ಮೇಲೆ ದಾಳಿ ಮಾಡುತ್ತಿದೆ. ಇಲ್ಲಿನ ಕಲೆ ಯಕ್ಷಗಾನವನ್ನೂ ಆರ್‌ಎಸ್‌ಎಸ್ ಸಿದ್ಧಾಂತ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ” ಎಂದು ದೂರಿದ ದೀಪ್ಸಿತಾ, “ನಾವು ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್, ಸಾವಿತ್ರಿಬಾಯಿ ಫುಲೆ, ನಾರಾಯಣ ಗುರು ವಿಚಾರಧಾರೆಗಳನ್ನು ಹೊತ್ತು ಮುಂದೆ ಸಾಗುವವರು. ನಮ್ಮನ್ನು ಎಂದಿಗೂ ಒಡೆಯಲು ಸಾಧ್ಯವಿಲ್ಲ. ಮನುಷ್ಯತ್ವ ಮೊದಲು ಅದಕ್ಕಿಂತ ದೊಡ್ಡ ಧರ್ಮವಿಲ್ಲ. ಹಲವು ವರ್ಷಗಳ ಹಿಂದೆ ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲು ಮುಂದಾದಾಗ ಬಿಜೆಪಿಗರು ತಡೆದರು. ಆದರೆ ನಾವು ಸಾವಿರಾರು ಮಂದಿ ಸೇರಿ ಬೃಹತ್ ಕಾರ್ಯಕ್ರಮ ನಡೆಸಿದೆವು. ಭಗತ್ ಸಿಂಗ್ ಎಂದಿಗೂ ತಲೆಬಾಗಿಸಿಲ್ಲ, ನಾವೂ ಹಾಗೆಯೇ ಎಂದಿಗೂ ತಲೆಬಾಗಿಸಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ. ನಾವು ಹೂವಿನಂತೆ, ನಮ್ಮನ್ನು ಕೀಳಿದಷ್ಟು ನಾವು ಚಿಗುರುತ್ತೇವೆ, ಹೋವಾಗಿ ನಿಮ್ಮ ಮುಂದೆ ನಿಲ್ಲುತ್ತೇವೆ” ಎಂದರು.
ಈ ಸಂದರ್ಭದಲ್ಲೇ ಮಾತನಾಡಿದ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, “ಇಂದು ದೇಶದಲ್ಲಿ ಅಲ್ಲಲ್ಲಿ ಶಿಕ್ಷಣ ಸಂಸ್ಥೆಗಳೆಲ್ಲವೂ ಮಾರಾಟವಾಗಿದೆ. ಸರ್ಕಾರಿ ಶಾಲೆಗಳಲ್ಲೂ ಹೊರಗುತ್ತಿಗೆ ಪದ್ಧತಿ ಇದೆ. ಅತಿಥಿ ಶಿಕ್ಷಕರನ್ನು ಮಾತ್ರ ನೇಮಿಸಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಯ ಮೇಲೆ ದಾಳಿ ನಡೆಯುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಗೆಯೇ, “ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು. ಅದರ ಲೆಕ್ಕದಂತೆ 21 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಈವರೆಗೆ ಉದ್ಯೋಗ ಸೃಷ್ಟಿಯಾಗಿಲ್ಲ. ಇನ್ನೊಂದೆಡೆ ಖಾಲಿ ಇರುವ ಎರಡು ಲಕ್ಷ ಹುದ್ದೆಯನ್ನು ಭರ್ತಿ ಮಾಡಲೂ ಈ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಎಷ್ಟು ಮಂದಿಗೆ ತರಬೇತಿ ನೀಡಿದ್ದಾರೆ? ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ. ಇದಕ್ಕೆ ಉತ್ತರವಿಲ್ಲ” ಎಂದರು.
“2024ರಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡುವ ನೀತಿಯನ್ನು ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ಅನುಮೋದನೆ ಮಾಡಿತು. ಆದರೆ ಅದಾದ ಮರುದಿನವೇ ಉದ್ಯಮಿಗಳ ಒತ್ತಡಕ್ಕೆ ಮಣಿದು ಈ ನೀತಿಯನ್ನು ವಾಪಸ್ ತೆಗೆದುಕೊಂಡರು. ಅಹಿಂದ ಎನಿಸಿಕೊಂಡಿರುವ ಸಿದ್ಧರಾಮಯ್ಯ ಅವರೇ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡಿಲ್ಲ. ಇನ್ನು ಡಿ ಕೆ ಶಿವಕುಮಾರ್ ನೀಡುತ್ತಾರಾ? ಡಿಕೆಶಿಗೂ ನರೇಂದ್ರ ಮೋದಿಗೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರ ಆರ್ಥಿಕ ನೀತಿಯೂ ಒಂದೇ” ಎಂದು ಆರೋಪಿಸಿದರು.
ಇನ್ನು ಅಧ್ಯಕ್ಷತಾ ಭಾಷಣ ಮಾಡಿದ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ ಕೆ ಇಮ್ತಿಯಾಜ್, “ಇತ್ತೀಚೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಲಾಗಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಬರುವಾಗ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಟ್ಟಿಲ್ಲ. ಬಂದರಿನಲ್ಲಿ ಮೀನು ಮಾರಾಟಗಾರರಿಗೆ, ಕಾರ್ಮಿಕರಿಗೆ ಕೆಲಸ ಮಾಡಲು ಬಿಟ್ಟಿಲ್ಲ. ಡಿಕೆಶಿ ವಿವಿಐಪಿ, ಅವರಿಗೆ ಮೀನು ಮಾರುವ ಕಾರ್ಮಿಕರ ವಾಸನೆ ಬರಬಾರದು ಎಂಬ ಕಾರಣಕ್ಕೆ ಅವರ ಎದುರು ಯಾರೂ ಕಾರ್ಮಿಕರು ಬರಬಾರದು ಎಂಬ ಅಘೋಷಿತ ತೀರ್ಮಾನವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ತೆಗೆದುಕೊಂಡಿತು. ಒಂದು ವೇಳೆ ಈ ಕಾರ್ಮಿಕರು ದುಡಿಯದಿದ್ದರೆ ಇಡೀ ಮಂಗಳೂರು ದುರ್ನಾತ ಹೊಡೆಯುತ್ತದೆ” ಎಂದರು.

“ತುಳು ಭಾಷೆಗೆ ಮಾನ್ಯತೆ ಸಿಕ್ಕಿದೆ. ಆದರೆ ಇಲ್ಲಿನ ತುಳು ತಾಯ ಮಕ್ಕಳಿಗೆ ಇಲ್ಲಿಯೇ ಉದ್ಯೋಗ ಸಿಕ್ಕಿದೆಯೇ? ಈಗ ಎಲ್ಲಿ ಹೋದರೂ ಇಂಗ್ಲೀಷ್, ಹಿಂದಿ ಮಾತ್ರ ಮಾತನಾಡುವವರು ಇರುತ್ತಾರೆ. ಯಾವ ಕಚೇರಿಯಲ್ಲೂ ತುಳುನಾಡಿನ ಮಕ್ಕಳಿಗೆ ಉದ್ಯೋಗವಿಲ್ಲ. ತುಳು ಭಾಷೆಗೆ ನಿಜವಾಗಿಯೂ ನ್ಯಾಯ ನೀಡುವುದೆಂದರೆ ತುಳು ಮಕ್ಕಳಿಗೆ ಉದ್ಯೋಗ ನೀಡುವುದು. ಅವರು ಇಲ್ಲೇ ತಮ್ಮ ಪೋಷಕರೊಂದಿಗೆ ಇದ್ದು ದುಡಿಯುವಂತೆ ಮಾಡುವುದು. ಈ ಸವಾಲನ್ನು ಮುಂದಿಟ್ಟು ಡಿವೈಎಫ್‌ಐ ಸಾಗುತ್ತಿದೆ” ಎಂದರು.
“ಇಂದು ಜಯದೇವ, ಕಿದ್ವಾಯಿ ಆಸ್ಪತ್ರೆಯ ಘಟಕೆ ಸ್ಥಾಪನೆಗೆ ಸರ್ಕಾರ ಒಪ್ಪಿರುವುದು ಡಿವೈಎಫ್‌ಐ ಹೋರಾಟದ ಫಲ. ಈ ಪ್ರಕ್ರಿಯೆಯನ್ನು ಶೀಘ್ರ ಮುಕ್ತಾಯಗೊಳಿಸಬೇಕು. ಶೀಘ್ರ ಕಾರ್ಯ ಆರಂಭವಾಗಬೇಕು” ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾ ನಾಯಕಿ ಮಾಧುರಿ ಬೋಳಾರ್, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನಾಯಕರಾದ ವಿನಾಯಕ್ ಮಂಗಳೂರು, ಅಝ್ಲಾನ್ ಬೆಂಗ್ರೆ ಉಪಸ್ಥಿತರಿದ್ದರು. ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅತಿಥಿಗಳನ್ನು ಸ್ವಾಗತಿಸಿದರು. ಡಿವೈಎಫ್‌ಐ ಮಂಗಳೂರು ನಗರ ಕಾರ್ಯದರ್ಶಿ ತೈಯೂಬ್ ಬೆಂಗ್ರೆ ಧನ್ಯವಾದ ಸಲ್ಲಿಸಿದರು. ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.





