ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರ ಮೇಲಿನ ಹೂಡಿಕೆಯಾಗಿದ್ದು, ಅವು ಜನರ ಹಕ್ಕುಗಳೇ ಹೊರತು ಹಂಗಲ್ಲ ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರೊ. ಟಿ.ಆರ್. ಚಂದ್ರಶೇಖರ್ ಹೇಳಿದರು.
ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ. ಅಂಬೇಡ್ಕರ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಜನರ ಸಾಮಾಜಿಕ ಮತ್ತು ಆರ್ಥಿಕ ಬದುಕಿನ ಮೇಲೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ’ ಕುರಿತ ರಾಷ್ಟ್ರೀಯ ಸೆಮಿನಾರ್‌ನಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
‘2023ರಿಂದ 2026ರವರೆಗೆ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ₹50 ಸಾವಿರ ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದೆ. ಆದರೆ ಈ ಯೋಜನೆಗಳಿಂದ ಕರ್ನಾಟಕದ ಆರ್ಥಿಕತೆ ಕುಸಿದಿಲ್ಲ. ಕಾರ್ಮಿಕರು ಹಾಗೂ ರೈತರು ಸೋಮಾರಿಗಳಾಗಿಲ್ಲ. ಅಭಿವೃದ್ಧಿ ಕುಂಠಿತವಾಗಿಲ್ಲ. ಕುಟುಂಬಗಳು ಒಡೆಯುತ್ತಿವೆ ಅಥವಾ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಆರೋಪಗಳಿಗೂ ವಾಸ್ತವಾಂಶಗಳ ಬೆಂಬಲವಿಲ್ಲ’ ಎಂದು ಹೇಳಿದರು.

‘ಕರ್ನಾಟಕದ ಜಿಎಸ್‌ಡಿಪಿ 2023-24ರಲ್ಲಿ ಶೇ.10.2, 2024-25ರಲ್ಲಿ ಶೇ.13.79 ಹಾಗೂ 2025-26ರಲ್ಲಿ ಶೇ.8.12ರಷ್ಟು ಬೆಳವಣಿಗೆ ದಾಖಲಿಸಿದೆ. ಇದೇ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಕ್ರಮವಾಗಿ ಶೇ.7.3, ಶೇ.7.2 ಹಾಗೂ ಶೇ.7.8ರಷ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಆರ್ಥಿಕ ಬೆಳವಣಿಗೆ ದೇಶದ ಆರ್ಥಿಕ ಬೆಳವಣಿಗೆಗಿಂತ ಉತ್ತಮವಾಗಿದೆ’ ಎಂದು ಅಂಕಿ-ಅಂಶಗಳ ಮೂಲಕ ವಿವರಿಸಿದರು.
‘ಬಡವರು, ಶೂದ್ರರು ಹಾಗೂ ದಲಿತರಿಗೆ ಸಬ್ಸಿಡಿ, ಸಾಲ ಮತ್ತು ಆಹಾರದಂತಹ ಸೌಲಭ್ಯಗಳನ್ನು ನೀಡಿದರೆ ಅದನ್ನು ‘ಅನುತ್ಪಾದಕ ವೆಚ್ಚ’ ಎಂದು ಬಿಂಬಿಸಲಾಗುತ್ತದೆ. ಆದರೆ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಹಾಗೂ ಬಂಡವಾಳ ಹೂಡಿಕೆದಾರರಿಗೆ ನೀಡುವ ಸೌಲಭ್ಯಗಳನ್ನು ‘ಉತ್ಪಾದಕ ಹೂಡಿಕೆ’ ಎಂದು ಕರೆಯಲಾಗುತ್ತದೆ. ಇಂತಹ ವಾದಕ್ಕೆ ಅರ್ಥಶಾಸ್ತ್ರದ ಯಾವುದೇ ಸಿದ್ಧಾಂತ ಸಮರ್ಥನೆ ನೀಡುವುದಿಲ್ಲ’ ಎಂದು ಹೇಳಿದರು.
‘ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕಾರ್ಪೊರೇಟ್ ವಲಯದ ಸುಮಾರು ₹10 ಲಕ್ಷ ಕೋಟಿ ಸಾಲವನ್ನು ಮನ್ನಾ ಅಥವಾ ರೈಟ್‌ಆಫ್ ಮಾಡಿದೆ ಎಂದು ಉಲ್ಲೇಖಿಸಿದ ಅವರು, ಇದೇ ಮೊತ್ತ ಕರ್ನಾಟಕಕ್ಕೆ ದೊರೆತಿದ್ದರೆ ಸುಮಾರು 20 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದಿತ್ತು’ ಎಂದರು.
‘ಜನರ ಕಲ್ಯಾಣಕ್ಕಾಗಿ ₹51 ಸಾವಿರ ಕೋಟಿ ವೆಚ್ಚ ಮಾಡಿದಾಗ ಅದನ್ನು ‘ದುಂದು ವೆಚ್ಚ’ ಎಂದು ಟೀಕಿಸಲಾಗುತ್ತದೆ. ಆದರೆ ಕಾರ್ಪೊರೇಟ್ ವಲಯದ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾವನ್ನು ‘ಉತ್ಪಾದಕ ಹೂಡಿಕೆ’ ಎಂದು ಕರೆಯಲಾಗುತ್ತದೆ. ಜನರ ಮೇಲಿನ ಹೂಡಿಕೆಯನ್ನು ಮಾತ್ರ ದುಂದು ವೆಚ್ಚ ಎಂದು ಬಿಂಬಿಸುವುದು ಸರಿಯಲ್ಲ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಪಿಇ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಮಾತನಾಡಿ, ‘ಗ್ಯಾರಂಟಿ ಯೋಜನೆಗಳ ಕುರಿತು ಇರುವ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸಲು ಮುಕ್ತ ಚರ್ಚೆ ಅಗತ್ಯವಿದೆ. ಜನರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಈ ಯೋಜನೆಗಳ ಪಾತ್ರವೇನು ಎಂಬುದನ್ನು ಅಧ್ಯಯನ ಮಾಡಬೇಕು’ ಎಂದರು.
ಕಲಬುರಗಿ ಜಿಲ್ಲಾ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್ ಮಾತನಾಡಿ, ‘ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆಗಿರುವ ಅನುಕೂಲ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುವ ದುರುಪಯೋಗದ ಕುರಿತು’ ವಿವರಿಸಿದರು.
‘ಸೆಮಿನಾರ್‌ನ ಪ್ರಧಾನ ಸಂಯೋಜಕಿ ಡಾ. ನಿರ್ಮಲಾ ಶಿರಗಾಪುರ ಮಾತನಾಡಿ, ಕರ್ನಾಟಕದ ಜನರ ಆರ್ಥಿಕ ಸ್ಥಿರತೆಯನ್ನು ಕಾಪಾಡುವಲ್ಲಿ ಗ್ಯಾರಂಟಿ ಯೋಜನೆಗಳ ಪಾತ್ರದ ಕುರಿತು ಚರ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.
ಇದನ್ನು ಓದಿದ್ದೀರಾ? ಟಿ ನರಸೀಪುರದಲ್ಲಿ ಪ್ರಚೋದನಕಾರಿ ಭಾಷಣ; ಪ್ರತಾಪ್ ಸಿಂಹ ವಿರುದ್ಧ FIR ದಾಖಲು
ಸಹಾಯಕ ಪ್ರಾಧ್ಯಾಪಕ ಡಾ. ಗಾಂಧೀಜಿ ಮೊಳಕೇರಿ ಕಾರ್ಯಕ್ರಮ ನಿರ್ವಹಿಸಿದರು. ಐಕ್ಯೂಎಸಿ ನಿರ್ದೇಶಕ ಡಾ. ಸಿದ್ದಾರ್ಥ ಮದನಕರ್ ವಂದಿಸಿದರು. ವೇದಿಕೆಯಲ್ಲಿ ಕೆಪಿಇ ಸೊಸೈಟಿಯ ಆಡಳಿತಾಧಿಕಾರಿ ಡಾ. ಚಂದ್ರಶೇಖರ ಶೀಲವಂತರ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಪ್ಪ ಎಸ್. ಕಾಂತ ಉಪಸ್ಥಿತರಿದ್ದರು.
ಕಾಲೇಜಿನ ಅಧ್ಯಾಪಕರು, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





