ರಾಜ್ಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಬಾಗಲಕೋಟೆ ಜಿಲ್ಲೆಯಾದ್ಯಂತ ನಡೆದ ಮನೆ ಮನೆ ಭೇಟಿ ಪ್ರಕ್ರಿಯೆ ಪೂರ್ಣಗೊಂಡಿದ್ದು, 2,38,877 ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯಲಿವೆ. ಇದೇ ವೇಳೆ ವೈಪರೀತ್ಯಗಳ ಪಟ್ಟಿಯಲ್ಲಿದ್ದ ಸುಮಾರು 2.50 ಲಕ್ಷ ಮತದಾರರ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ದೋಷಗಳನ್ನು ಸರಿಪಡಿಸಲಾಗಿದೆ.
ಚುನಾವಣಾ ಆಯೋಗವು ಎಸ್‌ಐಆರ್ ಅಭಿಯಾನವನ್ನು ಆ.17ರವರೆಗೆ ವಿಸ್ತರಿಸಿತ್ತು. ಕಳೆದ ಎರಡು ತಿಂಗಳಿನಿಂದ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸಿ, ಮತದಾರರ ಮಾಹಿತಿಯನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ದಾಖಲಿಸಿದ್ದರು. ಅಕ್ಷರ ದೋಷ, ಮದುವೆಯ ನಂತರ ಹೆಸರು ಬದಲಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ದೋಷಪೂರಿತವಾಗಿದ್ದ ದಾಖಲೆಗಳನ್ನು ವೈಪರೀತ್ಯ ಎಂದು ಪರಿಗಣಿಸಲಾಗಿತ್ತು.
ಅಭಿಯಾನ ವಿಸ್ತರಣೆಯ ಬಳಿಕ ಬಿಎಲ್‌ಒಗಳು ಮತ್ತೊಮ್ಮೆ ಮನೆ ಮನೆಗೆ ಭೇಟಿ ನೀಡಿ ‘ರೋಲ್‌ಬ್ಯಾಕ್’ ಪ್ರಕ್ರಿಯೆಯಡಿ ದೋಷಗಳನ್ನು ಸರಿಪಡಿಸಿದ್ದಾರೆ. ಪರಿಣಾಮ, ವೈಪರೀತ್ಯ ವಿಭಾಗದಲ್ಲಿದ್ದ ಮತದಾರರ ಸಂಖ್ಯೆ ಸುಮಾರು 3.5 ಲಕ್ಷದಿಂದ 46 ಸಾವಿರಕ್ಕೆ ಇಳಿಕೆಯಾಗಿದೆ. ಇನ್ನೂ ಸುಮಾರು 3 ಲಕ್ಷ ಮತದಾರರಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅವಕಾಶವಿದೆ.
ಜಿಲ್ಲೆಯಲ್ಲಿ ಒಟ್ಟು 16,31,202 ಮತದಾರರಿದ್ದು, ಈ ಪೈಕಿ 13,92,325 ಮತದಾರರ ಹೆಸರುಗಳನ್ನು ಮ್ಯಾಪಿಂಗ್ ಮಾಡಿ ಡಿಜಿಟಲೀಕರಣಗೊಳಿಸಲಾಗಿದೆ. ಮ್ಯಾಪಿಂಗ್ ವ್ಯಾಪ್ತಿಗೆ ಒಳಪಡದ 17,679 ಹಾಗೂ ವೈಪರೀತ್ಯ ವಿಭಾಗದಲ್ಲಿರುವ ಸುಮಾರು 46 ಸಾವಿರ ಮತದಾರರು ಸೇರಿದಂತೆ ಒಟ್ಟು 63,679 ಮಂದಿಗೆ ಮುಂದಿನ ಹಂತದಲ್ಲಿ ನೋಟಿಸ್ ಜಾರಿಯಾಗಲಿದೆ.
ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ನೋಟಿಸ್ ಪಡೆದವರು ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಪರಿಶೀಲನೆ ನಡೆಸಿ ಹೆಸರುಗಳನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಅವಕಾಶವಿದೆ.
2.38 ಲಕ್ಷ ಹೆಸರು ಡಿಲೀಟ್
ಜಿಲ್ಲೆಯಲ್ಲಿ ಎಎಸ್‌ಡಿಡಿ (ಗೈರು, ಸ್ಥಳಾಂತರ, ನಿಧನ ಹಾಗೂ ನಕಲಿ ಮತದಾರರು) ವಿಭಾಗದಡಿ ಒಟ್ಟು 2,38,877 ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯಲಿವೆ. ಈ ಪೈಕಿ ಪ್ರಕ್ರಿಯೆ ವೇಳೆ ಸ್ಥಳದಲ್ಲಿ ಲಭ್ಯವಾಗದವರು 20,998, ವಿಧಾನಸಭಾ ಕ್ಷೇತ್ರಗಳಿಂದ ಸ್ಥಳಾಂತರಗೊಂಡವರು 1,46,477, ನಿಧನ ಹೊಂದಿದವರು 44,344 ಹಾಗೂ ಎರಡು ಕ್ಷೇತ್ರಗಳಲ್ಲಿ ಹೆಸರು ಹೊಂದಿರುವ ಡೂಪ್ಲಿಕೇಟ್ ಮತದಾರರು 26,005 ಮಂದಿ ಇದ್ದಾರೆ. ಇತರೆ ಕಾರಣಗಳಿಂದ 1,063 ಮತದಾರರು ಪಟ್ಟಿಯಿಂದ ಹೊರಗುಳಿಯಲಿದ್ದಾರೆ.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಡಿ ಮ್ಯಾಪಿಂಗ್ ಹಾಗೂ ಡಿಜಿಟಲೀಕರಣ ಪೂರ್ಣಗೊಂಡಿದೆ. ವೈಪರೀತ್ಯ ವಿಭಾಗದಲ್ಲಿರುವವರು ಮತ್ತು ಮ್ಯಾಪಿಂಗ್ ಆಗದವರಿಗೆ ನೋಟಿಸ್ ನೀಡಲಾಗುವುದು. ಸಂಬಂಧಿಸಿದವರು ಸೂಕ್ತ ದಾಖಲೆಗಳೊಂದಿಗೆ ಮಾಹಿತಿ ಒದಗಿಸಿದರೆ ಪರಿಶೀಲನೆ ನಡೆಸಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.




