ಕಾಂಗ್ರೆಸ್ ಪಕ್ಷವನ್ನು ಕೇಡರ್ ಆಧಾರಿತವಾಗಿ ಮರುಸಂಘಟಿಸುವ ಉದ್ದೇಶದಿಂದ ಜಿಲ್ಲಾ ಘಟಕಗಳ ಪುನರ್ರಚನೆಗೆ ಚಾಲನೆ ನೀಡಲಾಗಿದ್ದು, ಯುವಕರು, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಎಐಸಿಸಿ ಆದಿವಾಸಿ ವಿಭಾಗದ ಉಪಾಧ್ಯಕ್ಷ ಬೆಳ್ಳಯ್ಯ ನಾಯಕ ತೇಜವಂತ ಹೇಳಿದರು.
ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಂತೆ 50 ವರ್ಷದೊಳಗಿನ ಯುವ ನಾಯಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ 50 ವರ್ಷದೊಳಗಿನವರಿಗೆ ಶೇ.50ರಷ್ಟು ಆದ್ಯತೆ ನೀಡಲಾಗುವುದು. ಜೊತೆಗೆ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯಗಳಿಗೆ ಶೇ.50ರಷ್ಟು ಅವಕಾಶ ಮತ್ತು ಮಹಿಳೆಯರಿಗೆ ಶೇ.33ರಷ್ಟು ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
“ಜಿಲ್ಲಾ ಕಾಂಗ್ರೆಸ್ ಘಟಕದ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜುಲೈ 27ರವರೆಗೆ ಅರ್ಜಿ ವಿತರಣೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಪಕ್ಷಕ್ಕಾಗಿ ದುಡಿಯುವ ಆಸಕ್ತಿ ಇರುವ ಯಾವುದೇ ಕಾರ್ಯಕರ್ತರು ಅರ್ಜಿ ಸಲ್ಲಿಸಲು ಅವಕಾಶವಿದೆ” ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬ್ಲಾಕ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಪಕ್ಷದ ಸದಸ್ಯರಷ್ಟೇ ಅಲ್ಲದೆ ಸಾರ್ವಜನಿಕರು, ಸಾಹಿತಿಗಳು ಸೇರಿದಂತೆ ಯಾರೇ ಆಗಿದ್ದರೂ ಸೂಕ್ತ ಅಭ್ಯರ್ಥಿಗಳ ಕುರಿತು ಸಲಹೆ ನೀಡಬಹುದಾಗಿದೆ. ಬಂದ ಸಲಹೆಗಳನ್ನು ಗೌಪ್ಯವಾಗಿಯೇ ಪರಿಗಣಿಸಲಾಗುವುದು ಎಂದು ಹೇಳಿದರು.
ಪಕ್ಷದ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಬಹುದಾಗಿದ್ದು, ಕಚೇರಿಗೆ ಬರಲು ಸಾಧ್ಯವಾಗದವರು ಮೊಬೈಲ್ ಸಂಖ್ಯೆ 98480 48504 ಮೂಲಕವೂ ತಮ್ಮ ಸಲಹೆ ಹಾಗೂ ಮಾಹಿತಿ ಹಂಚಿಕೊಳ್ಳಬಹುದು ಎಂದು ತಿಳಿಸಿದರು.
ಕೆಲವು ಸಂಘಟನಾ ದೋಷಗಳಿಂದ ಕಾಂಗ್ರೆಸ್ ಕೇಂದ್ರದ ಅಧಿಕಾರದಿಂದ ದೂರ ಉಳಿದಿದ್ದರೂ, ಪಕ್ಷ ಉತ್ತಮ ಕಾರ್ಯಗಳನ್ನೂ ಮಾಡಿದೆ. ಇದೀಗ ದೇಶಾದ್ಯಂತ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಮರುಸಂಘಟನೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆಗೆ ಜಿಲ್ಲಾ ಘಟಕದ ಪದಾಧಿಕಾರಿಗಳನ್ನೂ ಹೊಸದಾಗಿ ನೇಮಕ ಮಾಡಲಾಗುವುದು. ಹೈಕಮಾಂಡ್ಗೆ ಎಂಟು ಹೆಸರುಗಳನ್ನು ಶಿಫಾರಸು ಮಾಡಲಾಗುತ್ತಿದ್ದು, ಸುಮಾರು ಒಂದು ತಿಂಗಳೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಬೆಳ್ಳಯ್ಯ ನಾಯಕ ತೇಜವಂತ ತಿಳಿಸಿದರು.





