ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಿರಲು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪುರಸಭೆ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಆರಂಭಿಸಿದೆ.
“ಬಾಲಾಜಿ ಗುಡಿ ಸಮೀಪದ ಗಚ್ಚಿನಕಟ್ಟೆ, ಕಂಠಿಪೇಟ, ಭಂಡಾರಿ ಕಾಲೇಜ್ ಹತ್ತಿರ ಅಟೋ ಸ್ಟ್ಯಾಂಡ್, ಹರದೊಳ್ಳಿ ಹಣಮಂತ ದೇವರ ಗುಡಿಕಟ್ಟಿಗಳಲ್ಲಿ ಅರವಟ್ಟಿಗೆ ಆರಂಭಿಸಿದ್ದು, ನಾಳೆಯಿಂದ ಪಟ್ಟಣದ ಬಸ್ ನಿಲ್ದಾಣ, ಭಾರತ ಮಾರ್ಕೆಟ್ ಹಾಗೂ ಪುರಸಭೆ ಆವರಣದಲ್ಲಿ ಆರಂಭಿಸಲಾಗುವುದು” ಎಂದು ಪುರಸಭೆ ಕುಡಿಯುವ ನೀರಿನ ಸರಬರಾಜು ಮೇಲ್ವಿಚಾರಕ ಮುಸ್ತಾಫ್ ಕೊತ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ> ವಿಜಯಪುರ | ಕಾರ್ಮಿಕ ವಿರೋಧಿ ನೀತಿಗಳ ಮೂಲಕ ಗುಲಾಮಗಿರಿಗೆ ತಳ್ಳಲಾಗುತ್ತಿದೆ: ಎನ್ ವೀರೇಶ್
ಈ ಮಹತ್ವದ ಕಾರ್ಯಕ್ಕೆ ಪುರಸಭೆಯಿಂದ ಓರ್ವ ಸಿಬ್ಬಂದಿಯನ್ನು ನೇಮಿಸಿದ್ದು, ಅರವಟ್ಟಗೆಯಲ್ಲಿ ಫಿಲ್ಟರ್ ನೀರನ್ನು ಪೂರೈಸಲಾಗುತ್ತದೆ. ಪ್ರತಿದಿನ ಗಂಟೆಗೊಮ್ಮೆ ನೀರು ಪೂರೈಸಲಾಗುತ್ತದೆ. ನೀರಿನ ಅರವಟ್ಟಿಗೆಯ ಮಣ್ಣಿನ ಗಡಿಗೆಯಲ್ಲಿ ನೀರು ಖಾಲಿಯಾಗದಂತೆ ಕ್ರಮವಹಿಸಲಾಗುತ್ತದೆ. ಇದಕ್ಕಾಗಿಯೇ ಸಿಬ್ಬಂದಿಗಳಾದ ಕುಮಾರ ತಟ್ಟಿಮಠ, ಮುರಳಿ, ಗಣೇಶ ಮಾದರ, ದುರ್ಗಪ್ಪ ಮಾದರ ಬಾಯಾರಿ ಬಂದವರಿಗೆ ನೀರೊದಗಿಸುವ ಕಾರ್ಯ ನಿರ್ವಹಿಸಲಿದ್ದಾರೆ.

ಪಟ್ಟಣದ ಹಾಗೂ ಸುತ್ತಲ ಸಿಬ್ಬಂದಿ ಗ್ರಾಮಗಳಿಂದ ಬರುವ ಸಾರ್ವಜನಿಕರಿಗೆ ಕುಡಿಯಲು ಶುದ್ದ ನೀರು ಒದಗಿಸುವ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್ ಮುಜಾವರ ಕೋರಿದ್ದಾರೆ.




