ಕಾಲಮಾನ | ತಮಿಳುನಾಡು ವಿಧಾನಸಭೆಯ ಚುನಾವಣೆಯ ಕುತೂಹಲಕಾರಿ ಫಲಿತಾಂಶದ ಸುತ್ತಮುತ್ತ…

Date:

ಈ ಚುನಾವಣೆಯ ಫಲಿತಾಂಶದ ಹಿಂದೆ ತಮಿಳುನಾಡಿನ ಯುವಜನರು ಹಾಗೂ ಅವರ ಪ್ರಭಾವದಿಂದ ಅವರ ಕುಟುಂಬದವರು, ಬಳಗದವರು ಭಾವನಾತ್ಮಕವಾಗಿ ಸ್ಪಂದಿಸಿದ ಪರಿಣಾಮ ಕೆಲಸ ಮಾಡಿರುವ ಸಾಧ್ಯತೆಗಳು ಢಾಳಾಗಿರುವುದರಿಂದ ಇದನ್ನು ʼಸಿದ್ಧಾಂತೋತ್ತರ ಚುನಾವಣೆ ʼಎಂದು ವರ್ಣಿಸಬಹುದೇ?

- Advertisement -

ಇತ್ತೀಚೆಗೆ ಜರುಗಿದ ತಮಿಳುನಾಡು ವಿಧಾನಸಭೆಯ ಚುನಾವಣಾ ಫಲಿತಾಂಶವು ಅನೇಕ ರಾಜಕೀಯ ವಿಶ್ಲೇಷಕರು, ಮತಪ್ರವೃತ್ತಿಗಳ ಅಧ್ಯಯನ ತಜ್ಞರು ಹಾಗೂ ಈ ವಿಷಯಕ್ಕೆ ಸಂಬಂಧಿಸಿದ ಅನೇಕ ವಿಶೇಷಜ್ಞರನ್ನು ಅಚ್ಚರಿಯ ಕೂಪಕ್ಕೆ ತಳ್ಳಿತು. ಏಕೆಂದರೆ ಸುಮಾರು ಎರಡು ವರ್ಷಗಳ ಹಿಂದೆ ತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್ ವಿಜಯ್‌ ʼತಮಿಳಗ ವೆಟ್ರಿ ಕಳಗಂʼ(ಟಿವಿಕೆ) ಎಂಬ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಆಗ ಅದರ ಘೋಷಣೆ ʼ ಪಿರಪೊಕ್ಕುಂ ಎಲ್ಲ ಉಯಿರುಕ್ಕುಂʼ (ಹುಟ್ಟಿನಿಂದ ಎಲ್ಲರೂ ಸಮಾನರು- ಇದು ತಿರುಕ್ಕುರಳ್‌ನ ಒಂದು ಪದ್ಯದ ಸಾಲು) ಎಂಬುದಾಗಿತ್ತು. ತಮ್ಮ ಪಕ್ಷ ಸಮತಾವಾದ (ಇಗ್ಯಾಲಿಟೇರಿಅನಿಸಮ್)‌, ಮತಧರ್ಮ ನಿರಪೇಕ್ಷತೆ (ಸೆಕ್ಯುಲರಿಸಂ) ಮತ್ತು ಸಾಮಾಜಿಕ ನ್ಯಾಯದಂತಹ ಸೈದ್ಧಾಂತಿಕ ತತ್ವಗಳನ್ನು ಪಾಲಿಸುತ್ತದೆ ಎಂದು ತಿಳಿಸಲಾಗಿತ್ತು. ಈ ಪಕ್ಷ ಚುನಾವಣೆಯಲ್ಲಿ 108 ಸೀಟುಗಳನ್ನು ಪಡೆದು, ಕಾಂಗ್ರೆಸ್‌( 5 ಶಾಸಕರು), ಸಿಪಿಐ(2), ಸಿಪಿಎಂ(2), ವಿಸಿಕೆ (ವಿಡುದಲೈ ಚಿರತೈಗಳ್‌ ಕಕ್ಷಿ– 2), ಐಯುಎಂಎಲ್‌(2) ಪಕ್ಷಗಳ ಬೆಂಬಲವನ್ನು ಪಡೆದು ಸರ್ಕಾರವನ್ನು ರಚಿಸುವ ನಿಟ್ಟಿನಲ್ಲಿ ಸಫಲವಾಯಿತು. ಅದರ ನಾಯಕ ಜೋಸೆಫ್‌ ವಿಜಯ್‌ ಮುಖ್ಯಮಂತ್ರಿಯಾಗಿ ಮೇ 10ರಂದು ಪ್ರಮಾಣ ವಚನವನ್ನು ಸ್ವೀಕರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

2009ರ ಸಮಯದಲ್ಲಿ ತಮಿಳುನಾಡಿನಾದ್ಯಂತ ವಿಜಯ್‌ ಸುಮಾರು 85,000 ಫ್ಯಾನ್‌ ಕ್ಲಬ್‌ಗಳನ್ನು ʼವಿಜಯ್‌ ಮಕ್ಕಳ್‌ ಇಯಕ್ಕಂʼ (ವಿಜಯ್‌ ಜನ ಚಳವಳಿ) ಹೆಸರಿನಡಿ ಶುರುಮಾಡಿದರು. 2011ರ ವಿಧಾನಸಭೆಯ ಚುನಾವಣೆಯಲ್ಲಿ ಈ ಸಂಘಟನೆ ಎಐಎಡಿಎಂಕೆಗೆ ಬೆಂಬಲವನ್ನು ನೀಡಿತು. ನಂತರ ಸ್ವಲ್ಪ ವರ್ಷಗಳ ಕಾಲ ಸ್ತಬ್ಧವಾಯಿತು. 2021ರಲ್ಲಿ ಜರುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 169 ಸೀಟುಗಳಲ್ಲಿ ಸ್ಪರ್ಧಿಸಿತ್ತು. 115 ಸೀಟುಗಳಲ್ಲಿ ಜಯಶಾಲಿಯಾಯಿತು. ಆದರೆ, 2024ರಲ್ಲಿ ಜರುಗಿದ ಲೋಕಸಭೆಯ ಚುನಾವಣೆಯಲ್ಲಿ ಟಿವಿಕೆ ಸ್ಪರ್ಧಿಸಲಿಲ್ಲ. ಇದರ ನಡುವೆ ವಿಜಯ್‌ ಪೌರತ್ವ ತಿದ್ದುಪಡಿ ಕಾಯಿದೆ, ನೀಟ್‌, ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದರು. ಅವರ ಸಭೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಯುವಕ-ಯುವತಿಯರು ಭಾಗವಹಿಸುತ್ತಿದ್ದರು. ಅಂತಹ ಸಭೆಗಳಲ್ಲಿ ಡಾ ಅಂಬೇಡ್ಕರ್, ಪೆರಿಯಾರ್‌, ಕಾಮರಾಜ್, ವೇಲು ನಾಚಿಯಾರ್‌, ಅಂಜಲೈ ಅಮ್ಮಾಳ್‌ ಮುಂತಾದವರ ಪೋಟೋಗಳು ರಾರಾಜಿಸುತ್ತಿದ್ದವು. ವಿಜಯ್‌ ತಮ್ಮ ಪಕ್ಷಕ್ಕೆ ಬಿಜೆಪಿ ಸೈದ್ಧಾಂತಿಕ ವೈರಿ ಮತ್ತು ಡಿಎಂಕೆ ರಾಜಕೀಯ ಶತ್ರು ಎಂದು ಒಂದು ಬೃಹತ್‌ ಸಭೆಯಲ್ಲಿ ಸಾರಿದ್ದರು. ಆದರೆ ಅವರು ಡಿಎಂಕೆ ವಿರುದ್ಧ ಹೆಚ್ಚಾಗಿ ವಾಗ್ದಾಳಿ ನಡೆಸಿದ್ದೇ ಜಾಸ್ತಿ. ಸೆಪ್ಟಂಬರ್‌ 27, 2025ರಂದು ಕರೂರಿನಲ್ಲಿ ಜರುಗಿದ ದೊಡ್ಡ ಸಭೆಯಲ್ಲಿ ಭಾಗವಹಿಸಲು ವಿಜಯ್‌ 6-7 ಗಂಟೆ ತಡವಾಗಿ ಬಂದರು. ಅವರು ಆಗಮಿಸಿದ ತರುವಾಯ ನೂಕುನುಗ್ಗಲಿನಲ್ಲಿ 41 ಮಂದಿ ಅಸುನೀಗಿದರು ಮತ್ತು ಸುಮಾರು 80 ಜನ ಗಾಯಗೊಂಡರು. ವಿಜಯ್‌ ಆಸ್ಪತ್ರೆಗಳಲ್ಲಿದ್ದ ಗಾಯಾಳುಗಳನ್ನು ಭೇಟಿ ಮಾಡದೆ ಚೆನ್ನೈಗೆ ಹಿಂದಿರುಗಿದರು!

ಚುನಾವಣೆಗೆ ಸಂಬಂಧಿಸಿದ ಎಕ್ಸಿಟ್‌ ಪೋಲ್‌ನಲ್ಲಿ Axis My India ಮಾತ್ರ ಟಿವಿಕೆಗೆ 98-120 ಸೀಟುಗಳು ಬರಬಹುದೆಂದು ತಾನು ನಡೆಸಿದ ಸರ್ವೆಯ ಆಧಾರದಲ್ಲಿ ಭವಿಷ್ಯ ಹೇಳಿತ್ತು. ಅದು ನಿಜವಾಯಿತು! (ಮಿಕ್ಕ ಸಂಸ್ಥೆಗಳು ತುಂಬ ಕಡಿಮೆ ಸೀಟುಗಳನ್ನು ಘೋಷಿಸಿದ್ದವು). ಕೆಲವು ವಿಶೇಷಜ್ಞರು ಟಿವಿಕೆಗೆ ಶೇ 10-20ರಷ್ಟು ಮತಗಳು ದೊರಕಬಹುದು ಎಂದು ಅಂದಾಜಿಸಿದ್ದರು. ಆದರೆ, ಅನೇಕರ ನಿರೀಕ್ಷೆಗಳನ್ನು ಮೀರಿ ಅದು ಶೇ 35.09ರಷ್ಟು ಮತಗಳನ್ನು ಪಡೆಯಿತು. ಡಿಎಂಕೆ ನೇತೃತ್ವದ 26 ಪಕ್ಷಗಳ ಸೆಕ್ಯುಲರ್‌ ಪ್ರೊಗ್ರೆಸ್ಸಿವ್‌ ಅಲೆಯನ್ಸ್‌(ಎಸ್‌ಪಿಎ) ಶೇ 31.4 ಮತ್ತು ಎಐಎಡಿಎಂಕೆ ನಾಯಕತ್ವದ ಎನ್ ಡಿ ಎ ಶೇ 27.೨ರಷ್ಟು ಮತಗಳನ್ನು ಪಡೆದವು.

ಸುಮಾರು 20 ವರ್ಷಗಳ ಕಾಂಗ್ರೆಸ್‌ ಅಧಿಕಾರದ ನಂತರ 1967ರಲ್ಲಿ ಪ್ರಥಮ ಬಾರಿಗೆ ತಮಿಳುನಾಡಿನಲ್ಲಿ ಡಿಎಂಕೆ ಆಡಳಿತ ಶುರುವಾಯಿತು. 1972ರಲ್ಲಿ ಎಂಜಿಆರ್‌ ನೇತೃತ್ವದ ಎಐಎಡಿಎಂಕೆ ಅಸ್ತಿತ್ವಕ್ಕೆ ಬಂದಿತು. ಅದು ಮೊದಲನೆಯ ಬಾರಿಗೆ 1977ರಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಅಲ್ಲಿಂದ ಸತತವಾಗಿ ಎರಡು ದ್ರಾವಿಡ ಪಕ್ಷಗಳೇ ಅಧಿಕಾರವನ್ನು ನಡೆಸುತ್ತ ಬಂದಿವೆ.

ತಮಿಳುನಾಡು ನಮ್ಮ ದೇಶದಲ್ಲಿ ಎರಡನೇ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ. ರಾಜ್ಯದ ಜಿಡಿಪಿಗೆ ಸೇವಾ ವಲಯ ಶೇ 54, ಉತ್ಪಾದನಾರಂಗ ಶೇ 33 ಮತ್ತು ಕೃಷಿ ಶೇ 13ರಷ್ಟು ಕೊಡುಗೆಗಳನ್ನು ನೀಡಿವೆ. ಕೈಗಾರಿಕಾ ಮತ್ತು ಶಿಕ್ಷಣ ಕ್ಷೇತ್ರಗಳಲ್ಲೂ ಅದು ಮುಂದಿದೆ. 1956ರಲ್ಲೇ ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಈ ರಾಜ್ಯದಲ್ಲಿ ಸೌಲಭ್ಯವಂಚಿತ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯ ಯೋಜನೆಯನ್ನು ಅಂದಿನ ಮೂಖ್ಯಮಂತ್ರಿ ಕಾಮರಾಜ್‌ ಅವರು ಜಾರಿ ಮಾಡಿದ್ದರು. ನಂತರ 1982ರಲ್ಲಿ ಎಂಜಿಆರ್‌ ಈ ಯೋಜನೆಯನ್ನು ಇನ್ನು ಎತ್ತರದ ಹಂತಕ್ಕೆ ಕೊಂಡೊಯ್ದರು. ಪ್ರಸ್ತುತ ಸಹ ಮೇಲೆ ಪ್ರಸ್ತಾಪಿಸಿರುವ ಕ್ಷೇತ್ರಗಳಲ್ಲಿ ತಮಿಳುನಾಡು ಉನ್ನತ ಸ್ಥಾನವನ್ನೇ ಹೊಂದಿದೆ. ವಿವಿಧ ಕಲ್ಯಾಣ ಕಾರ್ಯಕ್ರಮಗಳ ಜಾರಿಯಲ್ಲಿ ಎರಡೂ ದ್ರಾವಿಡ ಪಕ್ಷಗಳ ಸರ್ಕಾರಗಳ ನಡುವೆ ಪೈಪೋಟಿ ಇತ್ತು. ಹೀಗಿದ್ದರೂ, ಕೇವಲ ಎರಡು ವರ್ಷಗಳ ಒಂದು ರಾಜಕೀಯ ಪಕ್ಷ ಅಧಿಕಾರದ ಗದ್ದುಗೆಯನ್ನು ಏರಿದ್ದು ಅಚ್ಚರಿಯ ವಿಷಯವೇ ಹೌದು. ಜನರ ಹೆಚ್ಚಿದ (?) ನಿರೀಕ್ಷೆಗಳನ್ನು ಸಾಕಾರಗೊಳಿಸುವುದರಲ್ಲಿ ಡಿಎಂಕೆ ಸರ್ಕಾರ ವಿಫಲವಾಯಿತೇ? ಅಥವಾ ವಿಜಯ್‌ ಘೋಷಿಸಿದ ಮಹತ್ವಾಕಾಂಕ್ಷೆಯ ಜನಪ್ರಿಯ ಯೋಜನೆಗಳು ಕಾರಣವಾಯಿತೇ?

ಟಿವಿಕೆ, ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಹೇಗೆ ಚುನಾವಣೆಯಲ್ಲಿ ಪ್ರಾಂತ್ಯವಾರು ಮತಗಳನ್ನು ಗಳಿಸಿದವು ಎಂಬುದನ್ನು ಸ್ಥೂಲವಾಗಿ ಗಮನಿಸೋಣ. ಟಿವಿಕೆ ಅಧಿಕ ನಗರೀಕರಣಗೊಂಡ ಪ್ರದೇಶಗಳಲ್ಲಿ ಶೇ 46.5, ಮಧ್ಯಮ ನಗರೀಕರಣಗೊಂಡ ಪ್ರದೇಶಗಳಲ್ಲಿ ಶೇ 38.7, ಮಧ್ಯಮ ಗ್ರಾಮೀಣ ಪ್ರದೇಶಗಳಲ್ಲಿ ಶೇ 31.4 ಮತ್ತು ದಟ್ಟ ಗ್ರಾಮೀಣ ಪ್ರದೇಶಗಳಲ್ಲಿ ಶೇ 30.5 ಮತಗಳನ್ನು ಪಡೆದುಕೊಂಡಿದೆ. ಎನ್‌ಡಿಎ ಗ್ರಾಮೀಣ ಪ್ರದೇಶಗಳಲ್ಲಿ ಶೇ 29-30ರಷ್ಟು ಮತಗಳನ್ನು ಪಡೆದು ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ ಎನ್ನಬಹುದು. ಆದರೆ ಅದು ಅತಿ ನಗರೀಕರಣಗೊಂಡ ಪ್ರದೇಶಗಳಲ್ಲಿ ಕೇವಲ ಶೇ 17.3ರಷ್ಟು ಮತಗಳನ್ನು ಮಾತ್ರ ಪಡೆದಿದೆ. ಡಿಎಂಕೆ ನೇತೃತ್ವದ ಎಸ್‌ಪಿಎ ಈ ನಾಲ್ಕು ಪ್ರದೇಶಗಳಲ್ಲಿ ಶೇ 31-32.5ರಷ್ಟು ಮತಗಳನ್ನು ಪಡೆದಿದೆ.

ಟಿವಿಕೆಗೆ 18 ರಿಂದ 25 ವರ್ಷದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.. ಒಂದು ಅಂದಾಜಿನಂತೆ 10 ಯುವಜನರ ಪೈಕಿ 6 ಮಂದಿ ಆ ಪಕ್ಷಕ್ಕೆ ಮತಗಳನ್ನು ನೀಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಯುವಕರು ಜಾಸ್ತಿಯಿದ್ದರೂ, ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಪ್ರಥಮ ಅಥವಾ ದ್ವಿತೀಯ ಬಾರಿಯ ಮತದಾರರಾಗಿದ್ದಾರೆ. ಹೀಗಾಗಿ ಇದು ನಮ್ಮ ದೇಶದ ಪ್ರಥಮ Gen – Z ಚುನಾವಣೆ ಎಂದು ಕೆಲವು ವಿಶ್ಲೇಷಕರು ಬಣ್ಣಿಸಿದ್ದಾರೆ. ಆದರೆ, 1985ರಲ್ಲಿ ಅಸ್ಸಾಂ ರಾಜ್ಯದ ವಿದ್ಯಾರ್ಥಿ ಚಳವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ, ಕೇವಲ ಎರಡು ತಿಂಗಳಲ್ಲಿ ಯುವಜನರಿಂದಲೇ ಕಟ್ಟಲ್ಪಟ್ಟ ಅಸೋಮ್‌ ಗಣ ಪರಿಷತ್‌ ವಿಧಾನಸಭೆಯ ಚುನಾವಣೆಯಲ್ಲಿ ವಿಜಯಿಯಾಯಿತು! ಅದರ ನಾಯಕ ಪ್ರಫುಲ್ಲ ಕುಮಾರ್‌ ಮಹಂತ ಮುಖ್ಯಮಂತ್ರಿಯಾದಾಗ ಅವರಿಗೆ ಸುಮಾರು 33 ವರ್ಷವಾಗಿತ್ತು! 2015 ಮತ್ತು 2020ರಲ್ಲಿ ದೆಹಲಿಯ ಚುನಾವಣೆಯಲ್ಲಿ ಎಎಪಿಯ ಗೆಲುವಿನ ಹಿಂದೆ ಯುವಜನರ ಪಾತ್ರವಿತ್ತು. ಹೀಗೆಯೇ, ಪಂಜಾಬಿನ ಚುನಾವಣೆಯಲ್ಲಿ (2022) ಈ ಅಂಶ ಕೆಲಸ ಮಾಡಿತೆಂದು, ಶೇಕಡವಾರು ಮತಗಳಲ್ಲಿ ವ್ಯತ್ಯಾಸವಿರಬಹುದು ಎಂದು ಕೆಲವು ರಾಜಕೀಯ ವಿಶೇಷಜ್ಞರು ಅಭಿಪ್ರಾಯಪಡುತ್ತಾರೆ.

ತಮಿಳುನಾಡಿನ ಚುನಾವಣೆಯ ಪ್ರಚಾರದ ಸಮಯದಲ್ಲಿ ಯುವಜನರನ್ನು ಟಿವಿ ಚಾನೆಲ್‌ಗಳ ವರದಿಗಾರರು ಸಂಪರ್ಕಿಸಿದಾಗ, ಹೆಚ್ಚಿನವರು ಬದಲಾವಣೆ ಬೇಕು ಎಂದು ನೇರವಾಗಿ ಟಿವಿಕೆಯ ಹೆಸರನ್ನು ಪ್ರಸ್ತಾಪಿಸುತ್ತಿದ್ದರು. ಆದರೆ ಯಾವ ತೆರನಾದ ಬದಲಾವಣೆ ಬೇಕು ಎಂಬುದರ ಬಗೆಗೆ ನಿಖರವಾದ ವಿವರಣೆಯನ್ನು ನೀಡಿದವರು ತುಂಬಾ ಕಡಿಮೆ ಇದ್ದರು! ಕೆಲವರು ಡಿಎಂಕೆ ಸರ್ಕಾರದ ಭ್ರಷ್ಟಾಚಾರ ಹಾಗೂ ವಂಶಪಾರಂಪರ್ಯ ಆಡಳಿತದ ಬಗೆಗೆ ಗಮನವನ್ನು ಸೆಳೆದಿದ್ದರು.

ಈ ಚುನಾವಣೆಯ ಫಲಿತಾಂಶದ ಹಿಂದೆ ತಮಿಳುನಾಡಿನ ಯುವಜನರ ಹಾಗೂ ಅವರ ಪ್ರಭಾವದಿಂದ ಅವರ ಕುಟುಂಬದವರು, ಬಳಗದವರು ಭಾವನಾತ್ಮಕವಾಗಿ ಸ್ಪಂದಿಸಿದ ಪರಿಣಾಮ ಕೆಲಸ ಮಾಡಿರುವ ಸಾಧ್ಯತೆಗಳು ಢಾಳಾಗಿರುವುದರಿಂದ ಇದನ್ನು ʼಸಿದ್ಧಾಂತೋತ್ತರ ಚುನಾವಣೆ ʼಎಂದು ವರ್ಣಿಸಬಹುದೇ?

ತೆಲುಗು ದೇಶಂ ಪಕ್ಷ ಸ್ಥಾಪನೆಯಾಗಿ ಸುಮಾರು ಏಳು ತಿಂಗಳ ತರುವಾಯ ಜನವರಿ 1983ರಲ್ಲಿ ಅದರ ನಾಯಕ ಎನ್‌ಟಿಆರ್‌ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು. ಇದೇ ಆಶಯದಿಂದ ಸೂಪರ್‌ಸ್ಟಾರ್‌ ಚಿರಂಜೀವಿ ರಾಜಕೀಯ ಪ್ರವೇಶವನ್ನು ಮಾಡಿದರು. ಅವರು ಸ್ಥಾಪಿಸಿದ ಪ್ರಜಾ ರಾಜ್ಯಂ ಪಕ್ಷ ವಿಧಾನಸಭೆಯ ಚುನಾವಣೆಯಲ್ಲಿ 18 ಸೀಟುಗಳನ್ನು ಮಾತ್ರ ಪಡೆಯಿತು. ಪ್ರಸ್ತುತ ತಮಿಳುನಾಡಿನಲ್ಲಿ ವಿಜಯ್‌ ಗೆಲುವಿನ ನಗೆ ಬೀರುತ್ತಿದ್ದಾರೆ. ಅವರು ಹೇಗೆ ಆಡಳಿತ ನಡೆಸಿದ್ದಾರೆ ಎಂದು ಕಾಲವೇ ತಿಳಿಸುತ್ತದೆ!

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...