ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಬುಧವಾರ ಸಂಜೆಯಿಂದ ಭಾರೀ ಬಿರುಗಾಳಿ ಬೀಸುತ್ತಿದ್ದು, ಗುಡುಗು ಸಹಿತ ಮಳೆಯಾಗುತ್ತಿದೆ. ಪರಿಣಾಮ, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ-ಬಿರುಗಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 50 ದಾಟಿದೆ. ನೂರಾರು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಳೆಯ ಆರ್ಭಟಕ್ಕೆ ರಾಜ್ಯದ ಐದಕ್ಕೂ ಹೆಚ್ಚು ಜಿಲ್ಲೆಗಳು ತತ್ತರಿಸಿವೆ. ಪ್ರಯಾಗ್‌ರಾಜ್ ಮತ್ತು ಭದೋಹಿ ಜಿಲ್ಲೆಗಳಲ್ಲಿ ತಲಾ 16 ಮಂದಿ ಸಾವನ್ನಪ್ಪಿದ್ದಾರೆ. ಭದೋಹಿಯಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದು ಸಾವಿಗೆ ಪ್ರಮುಖ ಕಾರಣವಾಗಿದೆ.
ಬದೌನ್ ಜಿಲ್ಲೆಯಲ್ಲಿ ಮಳೆ ಮತ್ತು ಬಿರುಗಾಳಿಯ ರಭಸಕ್ಕೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಯುವತಿ ಸೇರಿದಂತೆ ಹಲವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ, ಒಟ್ಟು ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಫತೇಪುರ್ ಜಿಲ್ಲೆಯಲ್ಲಿ ಐವರು ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿದ್ದು, 16ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಅವನೀಶ್ ತ್ರಿಪಾಠಿ ತಿಳಿಸಿದ್ದಾರೆ.
ಉಳಿದಂತೆ, ಉನ್ನಾವೊದಲ್ಲಿ 4, ಕಾನ್ಪುರ ದೇಹತ್‌ನಲ್ಲಿ 3, ಚಂದೌಲಿಯಲ್ಲಿ 2 ಹಾಗೂ ಸೋನಭದ್ರ ಜಿಲ್ಲೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ.
ಬಿರುಗಾಳಿಯ ರಭಸಕ್ಕೆ ಸಾವಿರಾರು ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ನೆಲಸಮಗೊಂಡಿದ್ದರಿಂದ ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಭದೋಹಿ, ಬದೌನ್ ಹಾಗೂ ಫತೇಪುರ್ ಜಿಲ್ಲೆಗಳಲ್ಲಿ ಮನೆಗಳು, ಶಾಲಾ ಕಟ್ಟಡಗಳು ಹಾಗೂ ಸೇತುವೆಗಳು ಕುಸಿದು ಬಿದ್ದಿವೆ.
ಈ ಲೇಖನ ಓದಿದ್ದೀರಾ?: ಮೋದಿ VS ಇಂದಿರಾ ; ಯಾವುದು ಸತ್ಯ, ಯಾವುದು ಸುಳ್ಳು?
“ಮೊಬೈಲ್ ಟವರ್‌ಗಳು ಹಾನಿಗೊಳಗಾಗಿರುವುದರಿಂದ ಸಂವಹನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ” ಎಂದು ಭದೋಹಿ ಜಿಲ್ಲೆಯ ಹವಾಮಾನ ಅಧಿಕಾರಿ ಕುನ್ವರ್ ವೀರೇಂದ್ರ ಕುಮಾರ್ ಮೌರ್ಯ ತಿಳಿಸಿದ್ದಾರೆ.
ಅಕಾಲಿಕ ಮಳೆ ಮತ್ತು ಸಿಡಿಲಿನಿಂದ ಉಂಟಾದ ಸಾವುಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೃತಪಟ್ಟವರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಮುಂದಿನ 24 ಗಂಟೆಗಳ ಒಳಗೆ ಪರಿಹಾರ ಹಣ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಜಿಲ್ಲಾಡಳಿತ, ಪೊಲೀಸ್ ಮತ್ತು ತಹಶೀಲ್ದಾರರ ತಂಡಗಳು ಹಾನಿಗೊಳಗಾದ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಗಳಲ್ಲಿ ನಿರತವಾಗಿವೆ.



