ಎನ್ಯುಮರೇಶನ್ ಫಾರಂ (ಗಣತಿ ನಮೂನೆ) ಭರ್ತಿ ಮಾಡುವ ಮೂಲಕ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ತಾಲ್ಲೂಕು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಚಾಲನೆ ನೀಡಿದರು.
ಪಟ್ಟಣದಲ್ಲಿ ಶಾಸಕರ ನಿವಾಸದಲ್ಲಿ ಬಾಗೇಪಲ್ಲಿ ವಿಧಾನ ಸಭೆ ಕ್ಷೇತ್ರದ ಮತದಾರರ ನೊಂದಣಿ ಅಧಿಕಾರಿಗಳಾದ ಅತೀಕ್ ಭಾಷಾ,ತಹಶಿಲ್ದಾರ್ ಮನೀಷಾ ಎನ್ ಪತ್ರಿ ತಾಲ್ಲೂಕು ಕಾರ್ಯನಿರ್ವಾಣಾಧಿಕಾರಿಗಳಾದ ರಮೇಶ್,ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಹಾಗೂ ಬಿ.ಎಲ್.ಓ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗಣತಿ ನಮೂನೆ ತುಂಬಿದರು. ತದನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಆರಂಭವಾಗಿದ್ದು, ತಾಲ್ಲೂಕಿನ ನನ್ನ ಮನೆಯಿಂದಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನನ್ನ ಎನ್ಯುಮರೇಷನ್ ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಸಲ್ಲಿಕೆ ಮಾಡಿರುವೆ. ನೀವು ನಿಮ್ಮ ಹೆಸರಿನ ಜೊತೆಗೆ ಈ ಹಿಂದೆ ಮತದಾರ ಪಟ್ಟಿ ಸಮಯದಲ್ಲಿ ನೀಡಲಾಗಿದ್ದ ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಇಲ್ಲವಾದರೆ ಹೊಸ ಮೊಬೈಲ್ ಸಂಖ್ಯೆಯನ್ನು ಅಧಿಕಾರಿಗಳ ಮೂಲಕ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಯಾವ ಸಂಖ್ಯೆ ನೀಡಿರುತ್ತಿರೋ ಅದೇ ಸಂಖ್ಯೆಗೆ ಒಟಿಪಿ ಬರಲಿದೆ” ಎಂದು ಮಾಹಿತಿ ನೀಡಿದರು.
ಕೋಲಾರ : ರಾಜಕೀಯ ಪ್ರಮುಖರಿಗೆ ಎಸ್ಐಆರ್ ಆರ್ಜಿ ವಿತರಿಸಿದ ಅಧಿಕಾರಿಗಳು
ಇದನ್ನು ಓದಿದ್ದೀರಾ..?ಕುಟುಂಬದವರ ಪರವಾಗಿ ಒಬ್ಬರು ಸಹಿ ಮಾಡಿದರೂ ಅರ್ಜಿ ಸ್ವೀಕಾರ
“ನೀವು ನಿಮ್ಮ ಹೆಸರಿನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಬಿಎಲ್ಎ, ಬಿಎಲ್ಓ ಹಾಗೂ ಮೇಲ್ವಿಚಾರಕರು ಈಗಾಗಲೇ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಕುಟುಂಬದ ಸದಸ್ಯರ ಪೈಕಿ ಒಬ್ಬರು ಸಹಿ ಮಾಡಿದರೂ ಸಾಕು. ಕುಟುಂಬದವರ ಪರವಾಗಿ ಒಬ್ಬರೇ ಎಲ್ಲರ ಅರ್ಜಿ ತುಂಬಬಹುದು. ಅದನ್ನು ಸ್ವೀಕಾರ ಮಾಡಿಕೊಳ್ಳಲಾಗುವುದು. ನಿಮ್ಮ ಫೋಟೋ ಬದಲಾಯಿಸಿಕೊಳ್ಳಬೇಕಾದರೆ ಅರ್ಜಿಯಲ್ಲಿ ಹೊಸ ಫೋಟೋ ನೀಡಬಹುದು. ಹೊಸ ಮತದಾರರು ನಿವಾಸ ದೃಢೀಕರಣ ಪತ್ರ ನೀಡಬೇಕು. ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ಅಗತ್ಯ ಪ್ರಮಾಣಪತ್ರ ನೀಡಲು ಮುಂದಾಗಿದೆ. ಎಲ್ಲರೂ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಬೇಕು. ಉಳಿಸಿಕೊಳ್ಳದಿದ್ದರೆ ಸರ್ಕಾರ ಸೌಲಭ್ಯ, ಕಾರ್ಯಕ್ರಮಗಳನ್ನು ಪಡೆಯುವುದು ಕಷ್ಟವಾಗಲಿದೆ” ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣದ ಬಿ.ಎಲ್.ಓ ಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.




