ಈಶಾನ್ಯ ಶಿಕ್ಷಕರ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರೇತರ ಸಿಬ್ಬಂದಿ ನಿಯೋಜನೆ ಹೆಸರಿನಲ್ಲಿ ವರ್ಗಾವಣೆ ಆದೇಶ ಹೊರಡಿಸಿದ್ದು ನೀತಿ ಸಂಹಿತೆಯ ಉಲ್ಲಂಘಟನೆ ಆರೋಪ ಕೇಳಿಬಂದಿದೆ.
ಸೆಪ್ಟಂಬರ್ 22ರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಸಹಾಯಕ ಕುಲಸಚಿವರ ಆಪ್ತ ಕಾರ್ಯದರ್ಶಿ ವಿರುಪಣ್ಣ ಕೆ.ಎಂ ಅವರನ್ನು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಿದ್ದು ಹಾಗೂ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಆಪ್ತ ಕಾರ್ಯದರ್ಶಿ ಈಶ್ವರಪ್ಪ ಕಟ್ಟಿಮನಿ
ಕೃಷಿ ವಿವಿಯ ಕುಲ ಸಚಿವರ ಕಚೇರಿಯ ಆಪ್ತ ಕಾರ್ಯದರ್ಶಿಯನ್ನಾಗಿ ನಿಯೋಜಿಸಿದ್ದು ಮಾಡಲಾಗಿದೆ.
ಇಬ್ಬರನ್ನು ಅಕ್ಟೋಬರ್ 05ರಂದು ವರ್ಗಾವಣೆ ಆದೇಶ ಹೊರಡಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್, ಬಸಲಿಂಗಪ್ಪ, ದಳ ಶಕ್ತಿ ಪಡೆಯ ಜಿಲ್ಲಾ ಉಪಾಧ್ಯಕ್ಷ ಸಿ.ದೀಪಕ್ ಭಂಡಾರಿ ಆರೋಪಿಸಿದ್ದಾರೆ. ಈ ಆದೇಶಕ್ಕೆ ಕುಲಪತಿ ಡಾ. ಎಂ. ಹನುಮಂತಪ್ಪ ಅವರು ಅನುಮೋದನೆ ನೀಡಿರುವುದರಿಂದ, ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಕುರಿತು ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಆಡಳಿತಾಧಿಕಾರಿ ಡಾ. ರಾಜಣ್ಣ ಹಾಗೂ ಕುಲಪತಿ ಡಾ. ಎಂ. ಹನುಮಂತಪ್ಪ ಅವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವರ್ಗಾವಣೆ ಆದೇಶವನ್ನು ಪರಿಶೀಲಿಸಿ ತಕ್ಷಣ ಹಿಂಪಡೆಯುವಂತೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಪಂ, ತಾಪಂ ಸ್ಥಾನಗಳಿಗೆ ಮೀಸಲಾತಿ ನಿಗದಿ
ವಿಶ್ವವಿದ್ಯಾಲಯದಲ್ಲಿ ಇಂತಹ ಯಾವುದೇ ಕಾನೂನುಬಾಹಿರ ಘಟನೆಗಳು ನಡೆದಿದ್ದರೆ, ಆಡಳಿತ ಮಂಡಳಿಯ ಸದಸ್ಯರು ಮೌನ ವಹಿಸದೆ, ಘಟನೆಗಳನ್ನು ಖಂಡಿಸಿ ವಿಶ್ವವಿದ್ಯಾಲಯದ ಹಂತದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ಸಂಬಂಧಿಸಿದ ವಿಷಯಗಳನ್ನು ಪ್ರಾದೇಶಿಕ ಚುನಾವಣಾಧಿಕಾರಿಗಳು, ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯಪಾಲರ ಗಮನಕ್ಕೆ ತರುವ ಅನಿವಾರ್ಯತೆ ಎದುರಾಗುತ್ತದೆ ಎಂದು ಹಿರಿಯ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ





