ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದ ರೌದ್ರನರ್ತನಕ್ಕೆ ನೂರಾರು ಜೀವಗಳು ಬಲಿಯಾಗಿವೆ. ಸುಮಾರು ಒಂದೂವರೆ ಸಾವಿರ ಮಂದಿ ಕಾಣೆಯಾಗಿದ್ದಾರೆ. ಇದೇ ಪ್ರವಾಹದಲ್ಲಿ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲ್ಯಾಕ್ಸ್ ಗೋಪಿಸೆಟ್ಟಿ ಕೂಡ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇನ್ಫೋಸಿಸ್ ಸಂಸ್ಥೆ ಅಧಿಕೃತವಾಗಿ ಖಚಿತಪಡಿಸಿದೆ. ಗೋಪಿಸೆಟ್ಟಿ ಅವರ ಸುರಕ್ಷತೆ ಮತ್ತು ಕ್ಷೇಮವನ್ನು ಖಚಿತಪಡಿಸಿಕೊಳ್ಳುವುದೇ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದೆ.
ಇನ್ಫೋಸಿಸ್ನ ಪ್ರಮುಖ ಅಂಗಸಂಸ್ಥೆಯಾದ ‘ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್’ನ ಮುಖ್ಯಸ್ಥರಾಗಿ ಗೋಪಿಸೆಟ್ಟಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಇತ್ತೀಚೆಗೆ ವೈಯಕ್ತಿಕ ಪ್ರವಾಸಕ್ಕಾಗಿ ನೇಪಾಳಕ್ಕೆ ತೆರಳಿದ್ದರು. ಈ ವೇಳೆ ಸಂಭವಿಸಿದ ಹಠಾತ್ ಜಲಪ್ರಳಯದ ನಂತರ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.
“ವೈಯಕ್ತಿಕ ಪ್ರವಾಸದಲ್ಲಿದ್ದ ನಮ್ಮ ಹಿರಿಯ ಸಹೋದ್ಯೋಗಿ ಲ್ಯಾಕ್ಸ್ ಗೋಪಿಸೆಟ್ಟಿ ಅವರ ಸುಳಿವು ಸಿಗುತ್ತಿಲ್ಲ. ಅವರ ಕುಟುಂಬದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಈ ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಿದ್ದೇವೆ” ಎಂದು ಇನ್ಫೋಸಿಸ್ ಹೇಳಿದೆ.
ಲ್ಯಾಕ್ಸ್ ಗೋಪಿಸೆಟ್ಟಿ ಅವರಿದ್ದ ಸ್ಥಳದ ನಿಖರ ಮಾಹಿತಿ ಪಡೆಯಲು ಮತ್ತು ಅವರನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಇನ್ಫೋಸಿಸ್ ಸಂಸ್ಥೆಯು ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಸ್ಥಳೀಯ ರಕ್ಷಣಾ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದೆ. ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಭೀಕರ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಪ್ರತಿಯೊಬ್ಬರ ಪರವಾಗಿಯೂ ನಮ್ಮ ಪ್ರಾರ್ಥನೆಗಳಿವೆ ಎಂದು ಇನ್ಫೋಸಿಸ್ ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ನೇಪಾಳ ಪ್ರವಾಹದ ನಂತರ ಕನಿಷ್ಠ 370 ಭಾರತೀಯರು ನಾಪತ್ತೆಯಾಗಿದ್ದಾರೆ. ಚೀನಾ ಗಡಿ ಭಾಗದಲ್ಲೂ ಸುಮಾರು 400 ಮಂದಿ ಸಿಲುಕಿಕೊಂಡಿದ್ದಾರೆ. ಸದ್ಯ ಭಾರತ ಸರ್ಕಾರವು ನೇಪಾಳದಲ್ಲಿ ಬೃಹತ್ ಮಟ್ಟದ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡುತ್ತಿದ್ದು, ಗೋಪಿಸೆಟ್ಟಿ ಸೇರಿದಂತೆ ನಾಪತ್ತೆಯಾದ ಪ್ರಜೆಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದೆ.



