ಸಂವಿಧಾನದ ಸಮಾನತೆಯ ಆಶಯವನ್ನು ಉಳಿಸುವ ನಿಟ್ಟಿನಲ್ಲಿ ಕಣ್ಮರೆಯಾಗಿರುವ ಅಲೆಮಾರಿ ಸಮುದಾಯಗಳನ್ನು ಗುರುತಿಸಿ ನಮೂನೆ 6ರ ಮೂಲಕವಾದರೂ ಅವರ ಮತದಾನದ ಹಕ್ಕನ್ನು ರಕ್ಷಿಸುವುದಕ್ಕಾಗಿ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಗಂಭೀರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ.
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ 41,07,000 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಈ ಪೈಕಿ 35,93,561 ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ. ಜಿಲ್ಲೆಯಲ್ಲಿ 36,476 ಮ್ಯಾಪಿಂಗ್ ಆಗದ ಮತದಾರರು, 1,34,903 ಮೃತ ಮತದಾರರು, 26,459 ಗೈರು ಮತದಾರರು ಹಾಗೂ 2,83,249 ಶಾಶ್ವತ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಗೈರು, ಮೃತ ಹಾಗೂ ಸ್ಥಳಾಂತರಗೊಂಡ ಮತದಾರರ ಮಾಹಿತಿಯನ್ನು ಸಂಬಂಧಿತ ಕಚೇರಿಗಳಿಗೆ ಸಲ್ಲಿಸಲಾಗಿದೆ. ಆಗಸ್ಟ್ 24ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನಮೂನೆ 6ರ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆದರೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೈರು ಹಾಗೂ ಸ್ಥಳಾಂತರಗೊಂಡ ಮತದಾರರಲ್ಲಿ ಯಾವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಪ್ರತ್ಯೇಕವಾಗಿ ಗುರುತಿಸಬೇಕಾಗಿದೆ. ವಿಶೇಷವಾಗಿ ಅಲೆಮಾರಿ, ಆದಿವಾಸಿ ಹಾಗೂ ಇತರೆ ಹಿಂದುಳಿದ ಸಮುದಾಯಗಳ ಜನರು ದಾಖಲೆಗಳ ಕೊರತೆಯಿಂದ ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.
ಅಲೆಮಾರಿ ಸಮುದಾಯದ ಜನರು ಜೀವನೋಪಾಯಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ವಲಸೆ ಹೋಗುವುದು ಸಾಮಾನ್ಯ. ಹೀಗಾಗಿ ಅವರು ಒಂದೇ ಸ್ಥಳದಲ್ಲಿ ನಿರಂತರವಾಗಿ ವಾಸಿಸುವುದಿಲ್ಲ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಬೇರೆ ಬೇರೆ ಊರುಗಳ ವಿಳಾಸ ಇರುವ ಸಾಧ್ಯತೆ ಹೆಚ್ಚಿದೆ.
ತವರು ಮನೆಯಿಂದ ಗಂಡನ ಮನೆಗೆ ಬಂದ ಅಲೆಮಾರಿ ಸಮುದಾಯದ ಮಹಿಳೆಯರ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ವಿಳಾಸ ಬದಲಾವಣೆಯಾಗದೆ ತವರು ಊರಿನ ಮತದಾರರ ಪಟ್ಟಿಯಲ್ಲೇ ಹೆಸರು ಉಳಿದಿರುವುದರಿಂದ ಪ್ರಸ್ತುತ ವಾಸಿಸುವ ಸ್ಥಳದಲ್ಲಿ ಎಸ್‌ಐಆರ್ ನಮೂನೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಬಹುದು.
ಯರಗಟ್ಟಿ ಪಟ್ಟಣದಲ್ಲಿ ವಾಸಿಸುತ್ತಿರುವ ದುರಗವ್ವ ಅವರ ಪ್ರಕರಣ ಇದಕ್ಕೆ ಉದಾಹರಣೆಯಾಗಿದೆ. ಅವರ ಹೆಸರು ಧಾರವಾಡದ ಮತದಾರರ ಪಟ್ಟಿಯಲ್ಲಿದೆ. ಪ್ರಸ್ತುತ ಯರಗಟ್ಟಿಯಲ್ಲಿ ವಾಸಿಸುತ್ತಿರುವುದರಿಂದ ಧಾರವಾಡಕ್ಕೆ ತೆರಳಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಧಾರವಾಡದಲ್ಲಿ ಅವರ ಹೆಸರನ್ನು ಗೈರು ಎಂದು ಗುರುತಿಸುವ ಸಾಧ್ಯತೆ ಇದ್ದು, ಯರಗಟ್ಟಿಯ ಮತದಾರರ ಪಟ್ಟಿಯಲ್ಲಿಯೂ ಹೆಸರು ಇಲ್ಲದ ಕಾರಣ ಎಸ್‌ಐಆರ್ ನಮೂನೆಯೂ ಸಿಗಲಿಲ್ಲ.
ಇದು ಕೇವಲ ಒಬ್ಬರ ಸಮಸ್ಯೆಯಲ್ಲ. ಇಂತಹ ಅನೇಕ ಅಲೆಮಾರಿ ಕುಟುಂಬಗಳು ದಾಖಲೆಗಳ ಗೊಂದಲ, ವಿಳಾಸ ಬದಲಾವಣೆಯ ಕೊರತೆ ಹಾಗೂ ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ಇಲ್ಲದ ಕಾರಣ ಮತದಾರರ ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ.
ಹಕ್ಕಿಪಿಕ್ಕಿ ಸಮುದಾಯದ ಬಗ್ಗೆ ಜಿಲ್ಲಾಧಿಕಾರಿ ಕಾಳಜಿ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹಕ್ಕಿಪಿಕ್ಕಿ ಸಮುದಾಯವನ್ನು ಎಸ್‌ಐಆರ್‌ನಲ್ಲಿ ಪರಿಗಣಿಸಲು ದಾಖಲೆಗಳ ಕೊರತೆ ಅಡ್ಡಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಹಕ್ಕಿಪಿಕ್ಕಿ ಸಮುದಾಯದವರು ಹಿಂದೆ ಎಲ್ಲಿದ್ದರು, ಯಾವ ಕಾಡು ಪ್ರದೇಶದಲ್ಲಿ ವಾಸಿಸುತ್ತಿದ್ದರು, ಕಾಡಿನಿಂದ ಯಾವಾಗ ಹೊರಬಂದರು, ಎಷ್ಟು ಕುಟುಂಬಗಳಿವೆ, ಜನಸಂಖ್ಯೆ ಎಷ್ಟಿದೆ ಹಾಗೂ ಸಂಬಂಧಿಕರು ಎಲ್ಲೆಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸ್ಥಳಕ್ಕೆ ತೆರಳಿ ಸಂಗ್ರಹಿಸುವಂತೆ ತಹಶೀಲ್ದಾರರಿಗೆ ಸೂಚಿಸಿದ್ದಾರೆ. ಒಂದು ವಾರದೊಳಗೆ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದ್ದಾರೆ.
2002ರ ಮತದಾನದ ದಾಖಲೆ ಲಭ್ಯವಿಲ್ಲದಿದ್ದರೂ, ಭಾರತೀಯ ನಾಗರಿಕರೆಂಬುದನ್ನು ದೃಢಪಡಿಸುವ ಪ್ರಮುಖ ದಾಖಲೆಗಳ ಕೊರತೆಯಿದ್ದರೂ, ಶಿವಮೊಗ್ಗ ಸೇರಿದಂತೆ ಇತರ ಕಡೆ ವಾಸಿಸುವ ಸಂಬಂಧಿಕರ ದಾಖಲೆಗಳನ್ನು ಪರಿಗಣಿಸಿ ಎಸ್‌ಐಆರ್‌ನಲ್ಲಿ ಅವರ ಹೆಸರು ಸೇರ್ಪಡೆಯಾಗಿದ್ದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.
ಇದೇ ರೀತಿಯ ಕಾಳಜಿಯನ್ನು ಜಿಲ್ಲೆಯ ಎಲ್ಲ ಅಲೆಮಾರಿ ಸಮುದಾಯಗಳ ಬಗ್ಗೆಯೂ ವಹಿಸಬೇಕಿದೆ. ಅವರು ಈ ಹಿಂದೆ ಯಾವ ಊರಿನ ಮತದಾರರ ಪಟ್ಟಿಯಲ್ಲಿದ್ದರು, ಪ್ರಸ್ತುತ ಎಲ್ಲಿ ವಾಸಿಸುತ್ತಿದ್ದಾರೆ, ದಾಖಲೆಗಳು ಇಲ್ಲದಿದ್ದರೆ ಯಾವ ಪರ್ಯಾಯ ದಾಖಲೆಗಳನ್ನು ಪರಿಗಣಿಸಬಹುದು ಎಂಬುದರ ಕುರಿತು ಅಧಿಕಾರಿಗಳು ಮನೆ ಬಾಗಿಲಿಗೆ ತೆರಳಿ ಪರಿಶೀಲಿಸಬೇಕು.
ಮನೆ ಬಾಗಿಲಿಗೆ ತಲುಪಲಿ ಚುನಾವಣಾ ವ್ಯವಸ್ಥೆ
ಶಿಕ್ಷಣ ಮತ್ತು ಸರ್ಕಾರಿ ವ್ಯವಸ್ಥೆಗಳ ಅರಿವಿನಿಂದ ವಂಚಿತರಾಗಿರುವ ಅಲೆಮಾರಿ ಸಮುದಾಯಗಳಿಗೆ ಎಸ್‌ಐಆರ್ ಪ್ರಕ್ರಿಯೆ, ನಮೂನೆ 6 ಹಾಗೂ ಅಗತ್ಯ ದಾಖಲೆಗಳ ಕುರಿತು ಸಂಪೂರ್ಣ ಮಾಹಿತಿ ಇರುವ ಸಾಧ್ಯತೆ ಕಡಿಮೆ. ಹೀಗಾಗಿ ಹೆಸರು ಇಲ್ಲದಿದ್ದರೆ ನಮೂನೆ 6 ಸಲ್ಲಿಸುವಂತೆ ಕಚೇರಿಯಲ್ಲಿ ಸೂಚಿಸುವುದಷ್ಟೇ ಸಾಕಾಗುವುದಿಲ್ಲ.
ಅಲೆಮಾರಿ ಸಮುದಾಯಗಳು ವಾಸಿಸುವ ಪ್ರದೇಶಗಳಿಗೆ ಚುನಾವಣಾಧಿಕಾರಿಗಳು ತೆರಳಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ, ಹಿಂದಿನ ಯಾವ ಊರಿನ ಪಟ್ಟಿಯಲ್ಲಿದೆ, ಎಸ್‌ಐಆರ್‌ನಲ್ಲಿ ಏಕೆ ಹೆಸರು ದಾಖಲಾಗಿಲ್ಲ ಮತ್ತು ಮುಂದಿನ ಹಂತದಲ್ಲಿ ಯಾವ ದಾಖಲೆ ಸಲ್ಲಿಸಬೇಕು ಎಂಬುದನ್ನು ಸ್ಥಳದಲ್ಲೇ ಪರಿಶೀಲಿಸಿ ನೆರವು ನೀಡಬೇಕು.
ಇದನ್ನೂ ಓದಿದ್ದೀರಾ? SIR: ಆಗಸ್ಟ್ 24ರ ಕರಡು ಪಟ್ಟಿಯ ಬಳಿಕವೇ ನಿಜವಾದ ಪರೀಕ್ಷೆ- ‘ಡಿಜಿಟಲ್ ಪ್ರಮಾಣಪತ್ರ’ ಯೋಜನೆ ಸಿದ್ಧವೇ?
ಮತದಾನದ ಹಕ್ಕು ಯಾವುದೇ ಸಮುದಾಯದವರಿಗೂ ದಾಖಲೆಗಳ ಗೊಂದಲದಿಂದ ಕಳೆದುಹೋಗಬಾರದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಅಲೆಮಾರಿ ಹಾಗೂ ಆದಿವಾಸಿ ಸಮುದಾಯಗಳಿಗೂ ಇತರ ನಾಗರಿಕರಂತೆ ಸಮಾನವಾದ ಮತದಾನದ ಹಕ್ಕು ದೊರೆಯಬೇಕು.
ಸಂವಿಧಾನದ ಸಮಾನತೆಯ ಆಶಯವನ್ನು ಉಳಿಸುವ ನಿಟ್ಟಿನಲ್ಲಿ ಕಣ್ಮರೆಯಾಗಿರುವ ಅಲೆಮಾರಿ ಸಮುದಾಯಗಳನ್ನು ಗುರುತಿಸಿ ನಮೂನೆ 6ರ ಮೂಲಕವಾದರೂ ಅವರ ಮತದಾನದ ಹಕ್ಕನ್ನು ರಕ್ಷಿಸುವುದಕ್ಕಾಗಿ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಗಂಭೀರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು



