ಕಂಪ್ಲಿ ತಾಲೂಕಿನ ಶ್ರೀರಾಮರಂಗಾಪುರ ಗ್ರಾಮದ 101 ದಲಿತ ಕುಟುಂಬಗಳಿಗೆ ಶೀಘ್ರ ವಸತಿ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಸಂದರ್ಭದಲ್ಲಿ “ಈ. ತುಕಾರಾಂ ಅವರು ಜಿಲ್ಲಾಧಿಕಾರಿಗಳಿಗೆ ನಡವಳಿಕೆ ಪ್ರಸ್ತಾವನೆ ಸಿದ್ಧಪಡಿಸಿ, ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ” ಎಂದು ಸಂಘಟನೆಯ ಮುಖಂಡರು ತಿಳಿಸಿದರು.
ಕರ್ನಾಟಕ ಜನಶಕ್ತಿ ಹಾಗೂ ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಬೆಂಬಲದೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
“2014-15ರಲ್ಲಿ ಗ್ರಾಮದ ಭೀಮನೇನಿ ಸೋಮಪ್ಪ ಅವರ ವಶದಲ್ಲಿದ್ದ 135 ಎಕರೆ ಜಮೀನನ್ನು ಹೋರಾಟದ ಮೂಲಕ ಕಂದಾಯ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಗ್ರಾಮದಲ್ಲಿನ ದಲಿತ ಸಮುದಾಯ ಆರ್ಥಿಕ ಬಹಿಷ್ಕಾರಕ್ಕೆ ಒಳಗಾಗಿದ್ದು, ಸರ್ಕಾರದಿಂದ ಆರ್ಥಿಕ ಭದ್ರತೆ, ನೇರ ಸಾಲ ಹಾಗೂ ವಸತಿ ನಿವೇಶನಕ್ಕಾಗಿ ಮನವಿ ಮಾಡಲಾಗಿತ್ತು” ಎಂದು ಮುಖಂಡರು ತಿಳಿಸಿದರು.
“ಈ ಹಿಂದೆ ಆದಿ ಜಾಂಬವ ನಿಗಮದಿಂದ 86 ಕುಟುಂಬಗಳಿಗೆ ತಲಾ ₹1 ಲಕ್ಷ ನೇರ ಸಾಲ ಮಂಜೂರಾಗಿದ್ದರೂ, ವಸತಿ ನಿವೇಶನ ಮಂಜೂರಿನ ವಿಚಾರದಲ್ಲಿ ಇದುವರೆಗೆ ಯಾವುದೇ ಪ್ರಗತಿ ಕಂಡಿಲ್ಲ ಎಂದು ಆರೋಪಿಸಿದರು. ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಅನೇಕ ಕುಟುಂಬಗಳು ಒಂದೇ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವಾಸಿಸಲು ಸೂಕ್ತ ಜಾಗದ ಕೊರತೆಯಿಂದ ಕುಟುಂಬಗಳು ದುಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
“ಗ್ರಾಮಸ್ಥರು ಡಾ. ಗುರುಮೂರ್ತಿ ಅವರ ಸುಮಾರು 3 ಎಕರೆ 94 ಸೆಂಟ್ಸ್ ಜಮೀನನ್ನು ವಸತಿ ನಿವೇಶನಕ್ಕಾಗಿ ಖರೀದಿಸಲು ಮಾತುಕತೆ ನಡೆಸಿದ್ದು, ಅದರ ಮೌಲ್ಯ ಸುಮಾರು ₹2.56 ಕೋಟಿ ಎಂದು ತಿಳಿಸಿದರು. ಇಷ್ಟು ದೊಡ್ಡ ಮೊತ್ತವನ್ನು ಬಡ ಕುಟುಂಬಗಳು ಭರಿಸಲು ಸಾಧ್ಯವಿಲ್ಲದ ಕಾರಣ ಸರ್ಕಾರವೇ ಮಧ್ಯಪ್ರವೇಶಿಸಿ ನಿವೇಶನ ಮಂಜೂರು ಮಾಡಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, “ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿ ಶೀಘ್ರ ವಸತಿ ನಿವೇಶನ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ, ನೀಲಪ್ಪ ಪೇಂಟರ್, ಸೋಮಯ್ಯ, ಈರಣ್ಣ, ವೆಂಕಟಸ್ವಾಮಿ, ಕೃಷ್ಣ, ಪೆದ್ದಣ್ಣ, ಮೋಹನ್ ರಾಜ್, ನವೀನ್ ಕುಮಾರ್, ಮಲ್ಲಮ್ಮ, ಲಕ್ಷ್ಮಿ, ಸರಸ್ವತಿ, ಸರೋಜಮ್ಮ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.




