ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಬೀದರ್ ವಿಭಾಗೀಯ ಮಟ್ಟದಲ್ಲಿ ಟಿಕೆಟ್‌ಗೆ ನಗದು ಪಾವತಿ ಬದಲಿಗೆ UPI ಮುಖಾಂತರ ಆನ್‌ಲೈನ್ ಪಾವತಿ ವ್ಯವಸ್ಥೆ ಜಾರಿಗೆ ಬಂದಿದ್ದು, ಇದರಿಂದ ಪ್ರಯಾಣಿಕರು ಫುಲ್ ಖುಷಿಯಾಗಿದ್ದಾರೆ.
ಈ ಹಿಂದೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಬೇಕಾದರೆ ಕಡ್ಡಾಯವಾಗಿ ಜೇಬಿನಲ್ಲಿ ನಗದು ಹಣ ಇಟ್ಟುಕೊಳ್ಳಬೇಕಿತ್ತು. ಆದರೆ, ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಹಯೋಗದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಬಳಸಿ ಡಿಜಿಟಲ್ ಪೇಮೆಂಟ್ ಸಾಧನಗಳಾದ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುವ ಪ್ರಕ್ರಿಯೆ ಬೀದರ್ ವಿಭಾಗದ ಎಲ್ಲಾ ಬಸ್ಸಿನಲ್ಲೂ ಆರಂಭವಾಗಿದೆ.
ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ವಿಭಾಗಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಇದರಿಂದಾಗಿ ಪ್ರಯಾಣಿಕರಿಗೆ, ನಿರ್ವಾಹಕರಿಗೆ ಚಿಲ್ಲರೆ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.
“ಜಿಲ್ಲೆಯ 8 ತಾಲೂಕಿನಲ್ಲಿ 6 ಡಿಪೋಗಳಿದ್ದು, ಕೆಲ ದಿನಗಳ ಹಿಂದೆ ಪ್ರತಿ ಡಿಪೋದ 5 ಬಸ್‌ಗಳಲ್ಲಿ ಯುಪಿಐ ಮೂಲಕ ಟಿಕೆಟ್ ನೀಡುವ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಎಲ್ಲಿಂದಲೂ ಸಮಸ್ಯೆ ಕೇಳಿಬಂದಿಲ್ಲ, ಈ ಯಶಸ್ಸಿನಿಂದಾಗಿ ಇದೀಗ ಎಲ್ಲ ಬಸ್ಸಿನಲ್ಲಿ ಯುಪಿಐ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಗಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ” ಎಂದು ಕೆಕೆಆರ್‌ಟಿಸಿ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ್ ʼಈದಿನʼಕ್ಕೆ ತಿಳಿಸಿದರು.

ʼಬೀದರ್ ವಿಭಾಗದಲ್ಲಿ ಪ್ರತಿ ನಿತ್ಯ 600 ಸಾರಿಗೆ ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಸದ್ಯ 487 ಬಸ್ಸಿನಲ್ಲಿ ನಗದು ರಹಿತ ಡಿಜಿಟಲ್ ಪೇಮೆಂಟ್ ಜಾರಿಗೆ ಬಂದಿದೆ. ಹುಮನಾಬಾದ್ ವಿಭಾಗದ 113 ಬಸ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆ ಅಲ್ಲಿನ ಬಸ್ಸಿನಲ್ಲಿ ಆನ್‌ಲೈನ್ ಹಣ ಪಾವತಿಗೆ ವಿಳಂಬವಾಗುತ್ತಿದ್ದು, ಶೀಘ್ರದಲ್ಲಿಯೇ ಅಲ್ಲಿಯೂ ಜಾರಿಗೆ ಬರಲಿದೆʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಹೇಗೆ ಪಾವತಿಸಬೇಕು?
ಬಸ್ ಹತ್ತಿದ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಹೋಗಬೇಕು ಎಂದು ನಿರ್ವಾಹಕರಿಗೆ ತಿಳಿಸಬೇಕು. ಕಂಡಕ್ಟರ್ ಆ ಊರಿನ ಹೆಸರು ಹಾಗೂ ಎಷ್ಟು ಹಣ ಎಂದು ಮಶಿನ್‌ನಲ್ಲಿ ಒತ್ತಿದರೆ ಕ್ಯೂಆರ್ ಕೋಡ್ ಜನರೇಟ್ ಆಗುತ್ತದೆ. ಆಗ ಪ್ರಯಾಣಿಕರು ಕ್ಯೂಆರ್ ಕೋಡ್ ಮೇಲೆ ಗೂಗಲ್, ಪೋನ್ ಪೇ ಮುಖಾಂತರ ಸ್ಕ್ಯಾನ್ ಮಾಡಿ ಹಣ ಪಾವತಿಸಬೇಕು. ಡಿಜಿಟಲ್ ಪೇಮೆಂಟ್ ಯಶಸ್ವಿಯಾದ ತಕ್ಷಣವೇ ನಿರ್ವಾಹಕ ಮಶಿನ್‌ನಲ್ಲಿ ಒಂದು ಬಟನ್ ಒತ್ತಿ ಮುದ್ರಿತ ಟಿಕೆಟ್ ನೀಡುತ್ತಾರೆ.
ಚಿಲ್ಲರೆ ಹಣದ ಅಗತ್ಯವಿಲ್ಲ
ಈ ಮುಂಚೆ ಬಸ್ಸಿನಲ್ಲಿ ಎಲ್ಲೇ ಪ್ರಯಾಣಿಸಬೇಕಾದರೂ ನಗದು ಹಣ ಇರಲೇಬೇಕಿತ್ತು. ಪ್ರಯಾಣಿಕರು ₹100-500 ನೋಟು ಕೊಟ್ಟು ಟಿಕೆಟ್ ಕೊಡುವಂತೆ ಕೇಳುತ್ತಿದ್ದರು. ʼಆಗ ಕಂಡಕ್ಟರ್ ಟಿಕೆಟ್ ದರ ₹20 ಇದೆ, ನೀವು ₹500 ಕೊಟ್ರೆ ಚಿಲ್ಲರೆ ಎಲ್ಲಿಂದ ತರಲಿʼ ಎನ್ನುವುದು ಕಂಡಕ್ಟರ್‌ಗೆ ರೂಢಿಯಾಗಿತ್ತು. ಟಿಕೆಟ್ ಕೊಟ್ಟು ವಾಪಸ್ ಹಣ ಕೊಡಬೇಕಾದರೂ ಚಿಲ್ಲರೆ ಸಮಸ್ಯೆ ಕಾಡುತ್ತಿತ್ತು. ಅದಕ್ಕೆ ಎಷ್ಟು ಹಣ ವಾಪಸ್ ಕೊಡಬೇಕೆಂದು ಕಂಡಕ್ಟರ್ ಟಿಕೆಟ್ ಹಿಂಭಾಗ ಪೆನ್ನಿನಿಂದ ಬರೆದು ಕೊಡುವ ಪದ್ಧತಿ ಚಾಲ್ತಿಯಲ್ಲಿತ್ತು.
ಕೆಲವೊಮ್ಮೆ ಚಿಲ್ಲರೆ ವಾಪಸ್ ಬರದ ಪ್ರಯಾಣಿಕರು ಬಸ್ಸಿನ ಕಂಡಕ್ಟರ್, ಡ್ರೈವರ್‌ನಿಂದ ಹಿಡಿದು ಸರ್ಕಾರದವರೆಗೂ ಬೈಕೊಂಡು ಓಡಾಡುತ್ತಿದ್ದುದೂ ಉಂಟು. ಈಗ ಪ್ರಯಾಣಿಕರು ಟಿಕೆಟ್ ದರ ಎಷ್ಟಿದೆಯೋ ಅಷ್ಟೇ ಹಣವನ್ನು ಡಿಜಿಟಲ್ ಪೇಮೆಂಟ್ ಮೂಲಕ ಪಾವತಿಸುವ ಕಾರಣಕ್ಕೆ ಬಹುತೇಕರಿಗೆ ಚಿಲ್ಲರೆ ಸಮಸ್ಯೆ ಕಾಡುವುದಿಲ್ಲ.
ಈಗಾಗಲೇ ಇಟಿಎಂ ಮಶಿನ್‌ಗಳನ್ನು ಬದಲಾಯಿಸಿ ಅಂಡ್ರಾಯ್ಡ್ ಆಧಾರಿತ ಸಾಪ್ಟ್‌ವೇರ್ ಸೌಲಭ್ಯವುಳ್ಳ ಹೊಸ ಒಟಿಪಿಎಲ್ ʼಇಟಿಎಂʼ ಮಶಿನ್‌ಗಳನ್ನು ಎಲ್ಲ ನಿರ್ವಾಹಕರಿಗೆ ನೀಡಲಾಗಿದೆ. ಡಿಜಿಟಲ್ ಪೇಮೆಂಟ್ ಬಳಕೆ ಕುರಿತು ಎಲ್ಲ ಚಾಲಕ-ನಿರ್ವಾಹಕರಿಗೆ ತರಬೇತಿ ಸಹ ನೀಡಲಾಗಿದೆ. ಈ ಹಿಂದೆ ರಾಜ್ಯದ ಬೇರೆ ವಿಭಾಗದಲ್ಲಿ ಬಸ್ಸಿನಲ್ಲಿ ಯುಪಿಐ ಸೇವೆ ಜಾರಿಯಾಗಿತ್ತು. ಕಲ್ಯಾಣ ಕರ್ನಾಟಕ ವಿಭಾಗದ ಬಸ್ಸಿನಲ್ಲಿಯೂ ಇದೀಗ ಸ್ಮಾರ್ಟ್ ಸೇವೆ ಮಾಡಬೇಕೆಂಬ ಪ್ರಯಾಣಿಕರ ಬಹುಕಾಲದ ಬೇಡಿಕೆ ಇದೀಗ ಈಡೇರಿದೆ.
ಪ್ರಯಾಣಕರಿಂದ ಉತ್ತಮ ಸ್ಪಂದನೆ
ಬೀದರ್ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಸೇರಿದಂತೆ ಅನ್ಯ ರಾಜ್ಯ, ಜಿಲ್ಲೆಗಳ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎಲ್ಲ ಬಸ್‌ಗಳಿಂದ ಪ್ರತಿದಿನಕ್ಕೆ ಟಿಕೆಟ್ ಹಣ ಅಂದಾಜು ₹1 ಕೋಟಿ ಜಮೆಯಾಗುತ್ತದೆ. ಈಗ ಆರಂಭಿಸಲಾದ ಡಿಜಿಟಲ್ ಪೇಮೆಂಟ್ ಆಯಾ ವಿಭಾಗದ ಡಿಪೋ ವ್ಯವಸ್ಥಾಪಕರ ಹೆಸರಿನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
“ಒಂದು ಕೋಟಿ ಟೆಕೆಟ್ ಹಣದಲ್ಲಿ ಶೇ.50 ರಷ್ಟು ಶಕ್ತಿ ಯೋಜನೆಯ ಹಣ ಜಮೆಯಾಗುತ್ತದೆ. ಡಿಜಿಟಲ್ ಸೇವೆ ಆರಂಭಗೊಂಡ ಬಳಿಕ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ದಿನದಿಂದ ದಿನಕ್ಕೆ ಸ್ಕ್ಯಾನರ್ ಮುಖಾಂತರ ಹಣ ಪಾವತಿಸಿ ಟಿಕೆಟ್ ಪಡೆಯುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೀದರ್ ವಿಭಾಗದ ಬಸ್‌ಗಳಲ್ಲಿ ಚಾಲ್ತಿಯಲ್ಲಿರುವ ಡಿಜಿಟಲ್ ಪೇಮೆಂಟ್ ದಿನಕ್ಕೆ ಸರಾಸರಿ ₹1 ಲಕ್ಷ ಜಮೆಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಏರಿಕೆಯಾಗುತ್ತದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳಲ್ಲಿ ಯುಪಿಐ ಆಧಾರಿತ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಗೊಳಿಸಿದ್ದು ಪ್ರಯಾಣಿಕರಿಗೆ ಟಿಕೆಟ್ ಪಡೆಯಲು ಸುಲಭವಾಗಿದೆ. ಇದರಿಂದ ನಿರ್ವಾಹಕರಿಗೂ ಟಿಕೆಟ್ ಕೊಡುವುದು, ಚಿಲ್ಲರೆ ಹಣಕ್ಕಾಗಿ ಸಾಹಸಪಡುವುದು ತಪ್ಪಲಿದೆ. ಈ ಡಿಜಿಟಲ್ ಸೇವೆಯಿಂದ ಚಿಲ್ಲರೆ ಸಮಸ್ಯೆಗೆ ಮುಕ್ತಿ ಸಿಗಲಿದೆ” ಎಂದು ಪ್ರಯಾಣಿಕರೊಬ್ಬರು ಹೇಳಿದರು.
ಡಿಜಿಟಲ್ ಪಾವತಿ ಮೂಲಕ ಟಿಕೆಟ್ ಪಡೆಯುವ ಸೇವೆ ಸುಲಭವಾಗಿದೆ. ಆದರೆ, ಕೆಲವೊಂದು ಕಡೆ ನೆಟ್‌ವರ್ಕ್ ಸಮಸ್ಯೆ, ಸ್ಕ್ಯಾನರ್ ಮುಖಾಂತರ ಹಣ ಪಾವತಿಸಿದರೂ ಹಣ ವರ್ಗಾವಣೆ ಶೀಘ್ರ ಆಗದಿರುವುದು ಸೇರಿ ಇತರ ತಾಂತ್ರಿಕ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ಪ್ರಯಾಣಿಕ ಯಾವ ಊರಿಗೆ ಹೋಗಬೇಕೆಂದು ಹೇಳಿದ ನಂತರ ಕಂಡಕ್ಟರ್ ಮಶಿನ್‌ನಲ್ಲಿ ಊರಿನ ಹೆಸರು ಒತ್ತಿ, ಸ್ಕ್ಯಾನರ್ ಜನರೇಟ್ ಮಾಡಬೇಕು, ಬಳಿಕ ಪ್ರಯಾಣಿಕ ಮೊಬೈಲ್‌ದಿಂದ ಹಣ ಪಾವತಿಸಿ ಟಿಕೆಟ್ ಪಡೆಯುವುದು ಸೇರಿ ಎಲ್ಲ ಪ್ರಕ್ರಿಯೆ 90 ಸೆಕೆಂಡ್‌ಗಳಲ್ಲಿ ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ ಹಣ ಪಾವತಿಯಾದರೂ ಟಿಕೆಟ್ ಬರದೇ ಇರುವುದು, ಇತರೆ ಸಮಸ್ಯೆ ಎದುರಾಗುವ ಸಾಧ್ಯತೆಗಳು ಇವೆ.
ಇದನ್ನೂ ಓದಿ: ಬೀದರ್ | ಮೇ 22ರಂದು ನೇರ ಸಂದರ್ಶನ : ಹೆಸರು ನೋಂದಾಯಿಸಿಲು ಮನವಿ
ಸಾರಿಗೆ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ಡಿಜಿಟಲ್ ಸೇವೆ ಆರಂಭವಾಗಿದೆ. ಆದರೆ, ರಾಜ್ಯ ಸರ್ಕಾರದ ʼಶಕ್ತಿ ಯೋಜನೆʼ ಜಾರಿ ಹಿನ್ನೆಲೆ ಜಿಲ್ಲೆಯ ಎಲ್ಲ ಮಹಿಳೆಯರಿಗೆ ಸದ್ಯಕ್ಕೆ ಡಿಜಿಟಲ್ ಸೇವೆಯ ಅಗತ್ಯವಿಲ್ಲ. ಆಧಾರ್, ಚುನಾವಣಾ ಗುರುತಿನ ಚೀಟಿ ತೋರಿಸಿ ಟಿಕೆಟ್ ಪಡೆಯುತ್ತಿದ್ದಾರೆ. ಇನ್ನು ಗೂಗಲ್, ಫೋನ್ ಪೇ ಬಳಸದ ಪ್ರಯಾಣಿಕರು ಎಂದಿನಂತೆ ನಗದು ಹಣ ಕೊಟ್ಟು ಟಿಕೆಟ್ ಪಡೆಯುವುದು ಅನಿವಾರ್ಯ.
ಕೆಕೆಆರ್‌ಟಿಸಿ ಬೀದರ್ ವಿಭಾಗದಲ್ಲಿ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತಂದಿರುವುದು ತಾಂತ್ರಿಕ ಪ್ರಗತಿಯತ್ತ ಇಟ್ಟ ಮಹತ್ವದ ಹೆಜ್ಜೆ. ದಿನನಿತ್ಯದ ಪ್ರಯಾಣದಲ್ಲಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಉಂಟಾಗುತ್ತಿದ್ದ ಚಿಲ್ಲರೆ ಜಗಳಗಳಿಗೆ ಈಗ ಶಾಶ್ವತ ಪರಿಹಾರ ಸಿಕ್ಕಿದೆ. ಗ್ರಾಮೀಣ ಭಾಗಗಳಲ್ಲಿ ಎದುರಾಗಬಹುದಾದ ನೆಟ್‌ವರ್ಕ್ ಸಮಸ್ಯೆ ಹಾಗೂ 90 ಸೆಕೆಂಡ್‌ಗಳ ಒಳಗಿನ ತಾಂತ್ರಿಕ ಮಿತಿಯನ್ನು ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಿದರೆ, ಈ ವ್ಯವಸ್ಥೆ ಮತ್ತಷ್ಟು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ.

ಮಹಿಳೆಯರಿಗೆ ‘ಶಕ್ತಿ’ ಯೋಜನೆ ಹಾಗೂ ಸ್ಮಾರ್ಟ್‌ಫೋನ್ ಇಲ್ಲದವರಿಗೆ ನಗದು ಪಾವತಿ ಸೌಲಭ್ಯ ಮುಂದುವರಿದಿರುವುದರಿಂದ, ಈ ಹೊಸ ಡಿಜಿಟಲ್ ಬದಲಾವಣೆಯು ಎಲ್ಲ ವರ್ಗದ ಪ್ರಯಾಣಿಕರಿಗೂ ತಲುಪುವಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗಳಿಸುತ್ತಿದೆ. ʼಬಸ್ಸಿನಲ್ಲಿ ʼಟಿಕೆಟ್ ಕೇಳಿ ಪಡೆಯಿರಿʼ ಎಂಬ ಸೂಚನೆ ಜೊತೆಗೆ ʼಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಿರಿʼ ಎಂದು ಬದಲಾದರೂ ಅಚ್ಚರಿಯಿಲ್ಲ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



