ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳ ಪ್ರಚಾರದ ವಿಡಿಯೊಗಳನ್ನು ನಂಬಿ ಆನ್‌ಲೈನ್ ಮೂಲಕ ಖರೀದಿಸಿದ ಫೇರ್‌ನೆಸ್ ಕ್ರೀಮ್ ಬಳಸಿದ 17 ವರ್ಷದ ಬಾಲಕಿಯೊಬ್ಬಳ ಮೂತ್ರಪಿಂಡಕ್ಕೆ (ಕಿಡ್ನಿ) ಗಂಭೀರ ಹಾನಿಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕ್ರೀಮ್‌ನಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ (ಮರ್ಕ್ಯುರಿ) ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ಮಲಪ್ಪುರಂನ ‘ಆಸ್ಟರ್ ಮಿಮ್ಸ್ ಮದರ್ ಆಸ್ಪತ್ರೆ’ಯ ವೈದ್ಯರು ಶನಿವಾರ (ನ. 21) ತಿಳಿಸಿದ್ದಾರೆ.
ಮೊಡವೆ, ಕಪ್ಪು ಕಲೆಗಳು ಹಾಗೂ ಚರ್ಮದ ಬಣ್ಣದ ವ್ಯತ್ಯಾಸವನ್ನು (ಪಿಗ್ಮೆಂಟೇಶನ್) ನಿವಾರಿಸುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಕೆಲವರು ಮಾಡಿದ್ದ ಪ್ರಚಾರದ ವಿಡಿಯೊಗಳನ್ನು ನೋಡಿ ಬಾಲಕಿ ಆಕರ್ಷಿತಳಾಗಿದ್ದಳು. ಇನ್‌ಸ್ಟಾಗ್ರಾಂನಲ್ಲಿ ನೀಡಲಾಗಿದ್ದ ವಾಟ್ಸ್‌ಆ್ಯಪ್ ಸಂಖ್ಯೆಯ ಮೂಲಕ ಮಾರಾಟಗಾರರನ್ನು ಸಂಪರ್ಕಿಸಿ ಕ್ರೀಮ್ ತರಿಸಿಕೊಂಡಿದ್ದಳು. ಆರಂಭದಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದ್ದರಿಂದ, ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಬಾಟಲಿಗಳನ್ನು ಖರೀದಿಸಿ ಬಳಸಿದ್ದಳು ಎಂದು ಬಾಲಕಿ ಸುದ್ದಿಗಾರರಿಗೆ ತಿಳಿಸಿದ್ದಾಳೆ.
ಕ್ರೀಮ್ ಬಳಸಿದ ಕೆಲವು ಸಮಯದ ನಂತರ ಬಾಲಕಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದವು. ರಕ್ತದೊತ್ತಡದಲ್ಲಿ ದಿಢೀರ್ ಕುಸಿತ ಮತ್ತು ಮೂರ್ಛೆ ಹೋಗುವಂತಹ ಲಕ್ಷಣಗಳು ಎದುರಾದವು. ಅಲ್ಲದೆ, ಕಾಲುಗಳಲ್ಲಿ ತೀವ್ರ ಊತ ಕಾಣಿಸಿಕೊಂಡು ನಡೆಯಲು ಹಾಗೂ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾದಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ಮೂತ್ರಪಿಂಡ ತಜ್ಞೆ ಡಾ. ಎಸ್. ಗೌರಿ ಮಾತನಾಡಿ, ‘ವಿವರವಾದ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಬಾಲಕಿಯ ರಕ್ತ ಮತ್ತು ದೇಹದಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಪಾದರಸ ಪತ್ತೆಯಾಗಿದೆ. ಪಾದರಸವು ಮೂತ್ರಪಿಂಡದ ಶೋಧಕ ಘಟಕಗಳಿಗೆ ತೀವ್ರ ಹಾನಿಯುಂಟುಮಾಡುತ್ತದೆ. ಇದರಿಂದ ಬಾಲಕಿಗೆ ‘ಮೆಂಬ್ರೇನಸ್ ನೆಫ್ರೋಪತಿ’ ಎಂಬ ಗಂಭೀರ ಮೂತ್ರಪಿಂಡ ಕಾಯಿಲೆ ಕಾಣಿಸಿಕೊಂಡಿದೆ. ಸೂಕ್ತ ಚಿಕಿತ್ಸೆ ನೀಡದಿದ್ದರೆ ಇದು ಮತ್ತಷ್ಟು ಗಂಭೀರ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ’ ಎಂದು ವಿವರಿಸಿದರು.
ಬಾಲಕಿ ಬಳಸುತ್ತಿದ್ದ ಕ್ರೀಮ್ ಅನ್ನು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ 12,500 ಪಿಪಿಎಂ (ಪಾರ್ಟ್ಸ್ ಪರ್ ಮಿಲಿಯನ್) ನಷ್ಟು ಪಾದರಸ ಇರುವುದು ಕಂಡುಬಂದಿದೆ. ನಿಯಮಾವಳಿಗಳ ಪ್ರಕಾರ ಕ್ರೀಮ್‌ಗಳಲ್ಲಿ ಪಾದರಸದ ಪ್ರಮಾಣ 1 ಪಿಪಿಎಂಗಿಂತ ಕಡಿಮೆ ಇರಬೇಕು. ಪಾದರಸಯುಕ್ತ ಕ್ರೀಮ್ ಬಳಕೆಯೇ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ತ್ವರಿತ ಫಲಿತಾಂಶ ಅಥವಾ ಚರ್ಮದ ಬಣ್ಣ ಬದಲಿಸುವ ಭರವಸೆ ನೀಡುವ ಜಾಹೀರಾತುಗಳಿಗೆ ಮರುಳಾಗಬಾರದು. ಚರ್ಮದ ಸಮಸ್ಯೆಗಳಿದ್ದರೆ ಇಂತಹ ಉತ್ಪನ್ನಗಳ ಬದಲು ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಡಾ. ಗೌರಿ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.
ತನಗಾದ ಆರೋಗ್ಯ ಸಮಸ್ಯೆಯ ಕುರಿತು ಕ್ರೀಮ್ ತಯಾರಿಕಾ ಕಂಪನಿಗೆ ಮಾಹಿತಿ ನೀಡಿದರೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ ಎಂದು ಬಾಲಕಿ ದೂರಿದ್ದಾಳೆ. ಆರಂಭದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ ಕಂಪನಿಯ ಪ್ರತಿನಿಧಿಗಳು, ನಂತರ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಬಾಲಕಿಯ ಕುಟುಂಬ ನಿರ್ಧರಿಸಿದ್ದು, ಕಾನೂನು ಪ್ರಕ್ರಿಯೆ ಹಿನ್ನೆಲೆಯಲ್ಲಿ ಕ್ರೀಮ್‌ನ ಹೆಸರನ್ನು ಬಹಿರಂಗಪಡಿಸಿಲ್ಲ.



