ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದ ನೇತ್ರತ್ವದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಪ್ರತಿಭಟನೆ ನಡೆಯಿತು.
ಬೀದರ್ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಛತ್ರಪತಿ ಶಿವಾಜಿ ವೃತ್ತದ ಮಾರ್ಗವಾಗಿ ಜನವಾಡ ರಸ್ತೆಯಲ್ಲಿರುವ ಸಹಾಯಕ ಆಯುಕ್ತರ ಕಚೇರಿವರೆಗೆ ಮೆರವಣಿಗೆ ಮುಖಾಂತರ ತೆರಳಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾಕಾರರು ʼಜ್ಞಾನೇಶಕುಮಾರ ಅವರನ್ನು ಕೂಡಲೇ ಬಂಧಿಸಿ?ʼ, ʼಕೇಂದ್ರ ಸರ್ಕಾರ ಸಿಇಸಿ ಜೊತೆ ಹಸ್ತಕ್ಷೇಪ ಮಾಡುವುದು ನಿಲ್ಲಿಸಿʼ ಎಂಬಿತ್ಯಾದ ಭಿತ್ತಿಪತ್ರಗಳನ್ನು ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ರಾಷ್ಟ್ರಪತಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬೀದರ್ ಸಹಾಯಕ ಆಯುಕ್ತ ಅಭಿನವ್ ಜೈನ್ ಅವರಿಗೆ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಮಾತನಾಡಿ, “ಪ್ರಜಾತಂತ್ರ ಉಳಿವಿಗಾಗಿ ನಡೆಯುತ್ತಿರುವ ಸಂಘರ್ಷ ಈಗ ಅಂತಿಮ ರೂಪ ಪಡೆದುಕೊಂಡಿದ್ದು, ಇದಕ್ಕಾಗಿ ಹೋರಾಡಲು ನಾವು ಸಿದ್ಧರಾಗಿದ್ದೇವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) (ಸಿಪಿಐ(ಎಂ)) ಪಕ್ಷಗಳ ನೇತ್ರತ್ವದಲ್ಲಿ ನಾವು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರಜಾತಂತ್ರ ವಿರೋಧಿ ಕೆಲಸ ಮಾಡುತ್ತಿರುವ ಸಿಇಸಿ ಜ್ಞಾನೇಶಕುಮಾರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಎಸ್‌ಐಆರ್ ನಂತರ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳನ್ನು ರದ್ದುಗೊಳಿಸಬೇಕು. ಇನ್ಮುಂದೆ ಎಲ್ಲ ಚುನಾವಣೆಗಳನ್ನು ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮುಖಾಂತರ ನಡೆಯಬೇಕು” ಎಂದು ಆಗ್ರಹಿಸಿದರು.
ಕಲಬುಗಿಯ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, “ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಿಂದ ಕೋಟ್ಯಂತರ ಮತದಾರರ ಹೆಸರುಗಳು ಪಟ್ಟಿಯಿಂದ ಅಳಿಸಲ್ಪಟ್ಟಿವೆ. ಇದು ನಾಗರಿಕರ ಸಾಂವಿಧಾನಿಕ ಮತದಾನದ ಹಕ್ಕಿನ ಮೇಲಿನ ನೇರ ಪರಿಣಾಮವಾಗಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ ಬಿಜೆಪಿ ಪಕ್ಷದ ಏಜೆಂಟ್ ಆಗಿ ಬಿಜೆಪಿಯ ಅಣತಿಯಂತೆ ಸರ್ವಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್‌ಐಆರ್ ಆರ್‌ಎಸ್‌ಎಸ್‌ನ ಅಜೆಂಡಾ, ಇದು ಸಿಎಎ, ಎನ್‌ಆರ್‌ಸಿ ಮುಂದುವರೆದ ಭಾಗವೇ ಆಗಿದೆ” ಎಂದು ಆರೋಪಿಸಿದರು.
“ದೇಶದಲ್ಲಿ ಎಸ್‌ಐಆರ್ ಹೆಸರಿನಲ್ಲಿ 13 ಕೋಟಿ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ. ದೆಹಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಯುವ ಹೋರಾಟಗಾರರು, ವಕೀಲರು, ಪತ್ರಕರ್ತರು, ಸಂಸದರೊಬ್ಬರ ಮೇಲೆ ಪೊಲೀಸರು ಹಿಂಸಾತ್ಮಕ ರೀತಿಯಲ್ಲಿ ನಡೆದುಕೊಂಡಿದ್ದು ಖಂಡನೀಯವಾಗಿದೆ. ಇದು ಎರಡನೇ ಸ್ವಾತಂತ್ರ್ಯ ಆಂದೋಲನ ಶುರುವಾಗಿದ್ದು, ಇದು ನಿಲ್ಲುವುದಿಲ್ಲ. ಕೂಡಲೇ ಮೋದಿ, ಅಮಿತ್ ಶಾ ಕುರ್ಚಿ ಬಿಟ್ಟು ತೊಲಗುವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆ ಕೊಡಬೇಕು. ಎಸ್‌ಐಆರ್ ಸಂಪೂರ್ಣವಾಗಿ ರದ್ದಾಗಬೇಕು” ಎಂದು ಒತ್ತಾಯಿಸಿದರು.
ಸಿಪಿಐ(ಎಂ) ಮುಖಂಡ ಬಾಬುರಾವ ಹೊನ್ನಾ ಮಾತನಾಡಿ, “ದೇಶದಲ್ಲಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದೆ. ದೇಶದ ಸಂಪತ್ತನ್ನು ಖಾಸಗಿಕರಣ ಮಾಡಲಾಗುತ್ತಿದೆ, ಜನರನ್ನು ಶೋಷಿತರನ್ನಾಗಿ ಮಾಡಲಾಗುತ್ತಿದೆ. ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ತೆರಳಿದ ಯುವ ಹೋರಾಟಗಾರರನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದ್ದು, ಇದು ಇಂಡಿಯಾ ಮೈತ್ರಿಕೂಟ ತೀವ್ರವಾಗಿ ಖಂಡಿಸುತ್ತದೆ. ದೇಶದಲ್ಲಿ ಕೋಮುವಾದಿ, ಫ್ಯಾಶಿಸ್ಟ್ ಶಕ್ತಿಗಳನ್ನು ಮಣಿಸಿ ಜಾತ್ಯತೀತ, ಸಮಾಜವಾದಿ ಸಿದ್ಧಾಂತದ ಸರ್ಕಾರ ಅಧಿಕಾರಕ್ಕೆ ತರಬೇಕಿದೆ” ಎಂದು ಹೇಳಿದರು.

ದೆಹಲಿಯಲ್ಲಿ ಎಸ್‌ಐಆರ್ ವಿರೋಧಿಸಿ ವಿದ್ಯಾರ್ಥಿಗಳು, ಯುವಜನರು ಹಾಗೂ ನಾಗರಿಕ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು ಪ್ರಜಾತಂತ್ರ ವಿರೋಧಿಯಾಗಿದೆ. ಶಾಂತಿಯುತವಾಗಿ ಪ್ರತಿಭಟಿಸುವ ನಾಗರಿಕರನ್ನು ಶತ್ರುಗಳಂತೆ ಪರಿಗಣಿಸುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ರಾಷ್ಟ್ರಪತಿಗಳು ತಕ್ಷಣ ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಶಾಂತಿಯುತ ಮತ್ತು ಸಂವಿಧಾನಬದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಇಂಡಿಯಾ ಮೈತ್ರಿಕೂಟ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ಸಮುದಾಯ ಶೌಚಾಲಯ | ಕೋಟಿ ಹಣ ಖರ್ಚಾದರೂ ಮುಗಿಯದ ಕಾಮಗಾರಿ, ತೆರೆಯದ ಬಾಗಿಲು!
ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಬಿಡಿಎ ಅಧ್ಯಕ್ಷ ವಿನೋದಕುಮಾರ ಅಪ್ಪೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಸೇರಿದಂತೆ ಪ್ರಮುಖರಾದ ರಾಜಶ್ರೀ ಶ್ರೀಕಾಂತ ಸ್ವಾಮಿ, ಸಂಜಯ ಜಾಗೀರದಾರ್, ದತ್ತಾತ್ರಿ ಮೂಲಗೆ, ಗೋವರ್ಧನ್ ರಾಠೋಡ್, ಡಾ.ಮಕ್ಸೂದ್ ಚಂದಾ, ಶಂಕರ ದೊಡ್ಡಿ, ವಿಠಲದಾಸ ಪ್ಯಾಗೆ, ಮುಹಮ್ಮದ್ ಸಮೀ, ರೇಷ್ಮಾ ಹಂಸರಾಜ, ಶಶಿಕಾಂತ ಡಾಂಗೆ, ಎಂ.ಡಿ.ಶಫಾಯತ್ ಅಲಿ, ನಜೀರ್ ಮಿಯ್ಯಾ ಸೇರಿದಂತೆ ಕಾಂಗ್ರೆಸ್, ಸಿಪಿಐ, (ಸಿಪಿಐ(ಎಂ)) ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.




