ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಒಂದೂ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಿಡದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬೀದರ್ ದಕ್ಷಿಣ ಕ್ಷೇತ್ರದ ಎಸ್‌ಸಿ ಜಿಲ್ಲಾ ಪಂಚಾಯಿತಿ ಹೋರಾಟ ಸಮಿತಿ, ಅಕ್ಟೋಬರ್ 16ರೊಳಗೆ ಮೀಸಲಾತಿ ಬದಲಾವಣೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಚಾರ ಸಮಿತಿ ಸಲಹೆಗಾರ ರಾಜಕುಮಾರ ಸಿಂಧೆ, “ಮೀಸಲಾತಿ ಹಂಚಿಕೆಯಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯವಾಗಿದೆ. ಬೀದರ್ ಜಿಲ್ಲೆಯಲ್ಲಿ ಒಟ್ಟು 34 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು, ಈ ಹಿಂದೆ 12ರಷ್ಟಿದ್ದ ಎಸ್‌ಸಿ ಮೀಸಲು ಕ್ಷೇತ್ರಗಳ ಸಂಖ್ಯೆಯನ್ನು ಯಾವುದೇ ಸ್ಪಷ್ಟ ಕಾರಣ ನೀಡದೆ ಒಂಬತ್ತಕ್ಕೆ ಇಳಿಸಲಾಗಿದೆ” ಎಂದು ದೂರಿದರು.
“ಬೀದರ್ ದಕ್ಷಿಣ ಕ್ಷೇತ್ರದಲ್ಲಿ 80 ಸಾವಿರಕ್ಕೂ ಅಧಿಕ ದಲಿತ ಮತದಾರರಿದ್ದು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಜನಸಂಖ್ಯೆ ಶೇ. 42.96ರಷ್ಟಿದೆ. ಆದರೂ ಕ್ಷೇತ್ರದ ವ್ಯಾಪ್ತಿಯ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಒಂದನ್ನೂ ಎಸ್‌ಸಿಗೆ ಮೀಸಲಿಟ್ಟಿಲ್ಲ. ಬೇಮಳಖೇಡ ಮತ್ತು ಔರಾದ್ (ಎಸ್) ಕ್ಷೇತ್ರಗಳನ್ನು ಈ ಹಿಂದೆಯೂ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿತ್ತು. ಪ್ರಸ್ತುತವೂ ಅದೇ ಮೀಸಲಾತಿ ಮುಂದುವರಿಸಲಾಗಿದೆ. ಬಗದಲ್, ಕಮಠಾಣ ಮತ್ತು ಮನ್ನಳ್ಳಿ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ. ಜನಸಂಖ್ಯೆಯ ಅನುಪಾತದ ಆಧಾರದ ಮೇಲೆ, ಹಿಂದುಳಿದ ಪ್ರದೇಶಗಳನ್ನೂ ಪರಿಗಣಿಸಿ ಕನಿಷ್ಠ 2-3 ಕ್ಷೇತ್ರಗಳನ್ನು ಎಸ್‌ಸಿ ಸಮುದಾಯಕ್ಕೆ ಮೀಸಲಿಡಬೇಕಿತ್ತು” ಎಂದು ಅಭಿಪ್ರಾಯಪಟ್ಟರು.

ಸಮಿತಿಯ ಉಪಾಧ್ಯಕ್ಷ ವೀರಶೆಟ್ಟಿ ಬಂಬುಳಗಿ ಮಾತನಾಡಿ, “ಸ್ವಾಭಿಮಾನಿ ದಲಿತ ಹೋರಾಟಗಾರರು ಹಾಗೂ ರಾಜಕೀಯ ಆಕಾಂಕ್ಷಿಗಳು ಬೆಳೆಯಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ನಾಯಕರು ಷಡ್ಯಂತ್ರ ನಡೆಸಿದ್ದಾರೆ. ಒಳಮೀಸಲಾತಿಯ ಹೆಸರಿನಲ್ಲಿ ಹೊಲೆಯ ಮತ್ತು ಮಾದಿಗ ಸಮುದಾಯಗಳನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ ಅವರು, ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು” ಎಂದು ಎಚ್ಚರಿಸಿದರು.
ಪ್ರಚಾರ ಸಮಿತಿಯ ಪ್ರಮುಖ ಗೌತಮ ಬಗದಲಕರ್ ಮಾತನಾಡಿ, “ದಲಿತರ ಮತ ಪಡೆದು ಗೆದ್ದಿರುವ ಹಾಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ ಶಾಸಕ ಅಶೋಕ ಖೇಣಿ ಅವರು ಮೀಸಲಾತಿ ಅನ್ಯಾಯದ ಕುರಿತು ಮೌನವಹಿಸಿದ್ದಾರೆ. ಜಿಲ್ಲಾಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆ ಮತ್ತು ಜನಪ್ರತಿನಿಧಿಗಳು ಸಲ್ಲಿಸುವ ವರದಿಗಳ ಆಧಾರದ ಮೇಲೆ ಮೀಸಲಾತಿ ಪ್ರಕಟವಾಗುವುದರಿಂದ ಈ ಅನ್ಯಾಯಕ್ಕೆ ಇವರೇ ನೇರ ಹೊಣೆ” ಎಂದು ಆರೋಪಿಸಿದರು.
ಭಾರತೀಯ ನ್ಯಾಷನಲ್ ಭೀಮ್ ಆರ್ಮಿ ಸಂಸ್ಥಾಪಕ ರಾಜ್ಯಾಧ್ಯಕ್ಷ ದಿಲೀಪಕುಮಾರ ವರ್ಮಾ ಮಾತನಾಡಿ, “ಪ್ರಸ್ತುತ ಪ್ರಕಟಿಸಿರುವುದು ತಾತ್ಕಾಲಿಕ ಮೀಸಲಾತಿ ಪಟ್ಟಿಯಾಗಿದ್ದು, ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಸಂವಿಧಾನದ 243(ಡಿ) ವಿಧಿ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ, 1993ರ ಅನ್ವಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

“ಅ.16ರೊಳಗೆ ಮೀಸಲಾತಿ ಪಟ್ಟಿಯಲ್ಲಿ ಅಗತ್ಯ ತಿದ್ದುಪಡಿ ಮಾಡಿ ಎಸ್‌ಸಿ ಮೀಸಲಾತಿ ಘೋಷಿಸದಿದ್ದರೆ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲಾಗುವುದು. ಅಲ್ಲದೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುವುದರ ಜತೆಗೆ ನ್ಯಾಯಕ್ಕಾಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು” ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | SIR ರದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಸಮಿತಿಯ ಸಲಹೆಗಾರ ರಾಜಕುಮಾರ ಜ್ಯೋತಿ, ಜಿಲ್ಲಾಧ್ಯಕ್ಷ ರಾಘವೇಂದ್ರ ಕಿರಣ, ಸಲಹೆಗಾರರಾದ ಪ್ರಕಾಶ, ಶಿವಕುಮಾರ ಮುತ್ತಂಗಿಕರ್, ಶಿವಕಾಂತ ಹಾರುರಗೇರಿಕರ್, ವೈಜಿನಾಥ ಕಟ್ಟಿಮನಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




