ಚುನಾವಣಾ ಆಯೋಗದ ‘ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಹಾಗೂ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ನಾಯಕರು ಸೋಮವಾರ (ಅ. 12) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಸ್ವತಂತ್ರ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವಿಪಕ್ಷ ನಾಯಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್‌ನ ಸೌಗತ ರಾಯ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಆರ್‌ಜೆಡಿಯ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖ ನಾಯಕರು ಈ ಅರ್ಜಿಗೆ ಸಹಿ ಹಾಕಿದ್ದಾರೆ. ‘ಎಸ್‌ಐಆರ್’ ಪ್ರಕ್ರಿಯೆ ಮತ್ತು ಆಯೋಗದ ಆನ್‌ಲೈನ್ ಮತದಾರರ ನೋಂದಣಿ ವ್ಯವಸ್ಥೆಯ ಕುರಿತು ಸಂಪೂರ್ಣ ಮಾಹಿತಿ ತರಿಸಿಕೊಂಡು ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಲಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ‘ಇಂಡಿಯಾ’ ಒಕ್ಕೂಟದ ನಾಯಕರು ಹಾಗೂ ನೂರಾರು ಬೆಂಬಲಿಗರು ದೆಹಲಿಯ ಬಾರಾಖಂಬಾ ರಸ್ತೆಯಿಂದ ಸುಪ್ರೀಂ ಕೋರ್ಟ್ ಕಡೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ (ಸುಪ್ರೀಂ ಚಲೋ) ನಡೆಸಿದರು. ಸಂವಿಧಾನ ಉಳಿಸಲು ‘ಇಂಡಿಯಾ’ ಒಕ್ಕೂಟದ ಹೋರಾಟವನ್ನು ಬೆಂಬಲಿಸುವಂತೆ ರಾಹುಲ್ ಗಾಂಧಿ ಯುವಕರಿಗೆ ಕರೆ ನೀಡಿದರು. “ಇದು ನಮ್ಮ ದೇಶದ ಭವಿಷ್ಯದ ಹೋರಾಟ. ನಾವು ರಸ್ತೆಗಾಗಿ ಹೋರಾಡುತ್ತಿಲ್ಲ, ಭಾರತದ ಜನರ ಹೃದಯಕ್ಕಾಗಿ ಹೋರಾಡುತ್ತಿದ್ದೇವೆ” ಎಂದು ಅವರು ಹೇಳಿದರು.
ಇದಕ್ಕೂ ಮೊದಲು, ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿಯಾಗಲು ರಾಹುಲ್ ಗಾಂಧಿ ಮತ್ತು ಖರ್ಗೆ ಸಮಯಾವಕಾಶ ಕೇಳಿದ್ದರು. ಆದರೆ, ಈ ವಿಚಾರ ಈಗಾಗಲೇ ನ್ಯಾಯಾಲಯದ ಮುಂದಿರುವುದರಿಂದ (Sub judice) ಭೇಟಿ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಭಾನುವಾರ ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಸಿಜೆಐ ಭೇಟಿಗೆ ಅವಕಾಶ ನೀಡದಿರುವುದು ಮುಖ್ಯವಲ್ಲ; ನಮ್ಮ ಹೋರಾಟ ಮುಖ್ಯ. ನಾವೇ ಖುದ್ದಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದೇವೆ” ಎಂದರು.
ಈ ನಡುವೆ, ಸಿಜೆಐ ಸೂರ್ಯಕಾಂತ್ ಅವರು ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, “ಪ್ರಜಾಸತ್ತಾತ್ಮಕ ಮತ್ತು ರಾಜಕೀಯ ಪ್ರತಿಭಟನೆಗಳು ನಡೆಯಬೇಕು. ಆದರೆ, ಸುಪ್ರೀಂ ಕೋರ್ಟ್ ಅನ್ನು ಅದರಲ್ಲಿ ಎಳೆದು ತರಬಾರದು. ಕಕ್ಷಿದಾರರು, ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ಇದರಿಂದ ಯಾವುದೇ ತೊಂದರೆಯಾಗಬಾರದು” ಎಂದು ತಿಳಿಸಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ದೆಹಲಿ ಪೊಲೀಸರು ವ್ಯಾಪಕ ಬಿಗಿ ಭದ್ರತೆ ಕೈಗೊಂಡಿದ್ದರು. ಭಗವಾನ್ ದಾಸ್ ರಸ್ತೆ ಮತ್ತು ಕೊಪರ್ನಿಕಸ್ ಮಾರ್ಗ ಸೇರಿದಂತೆ ಹಲವೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಕೆಲವು ಕಾಲ ಭದ್ರತಾ ದೃಷ್ಟಿಯಿಂದ ಮುಚ್ಚಲಾಗಿದ್ದ ರಾಜೀವ್ ಚೌಕ್, ಮಂಡಿ ಹೌಸ್ ಸೇರಿದಂತೆ 6 ಮೆಟ್ರೋ ನಿಲ್ದಾಣಗಳನ್ನು ಸಂಜೆ 5 ಗಂಟೆಯ ಸುಮಾರಿಗೆ ಸಾರ್ವಜನಿಕ ಮುಕ್ತ ಸಂಚಾರಕ್ಕಾಗಿ ತೆರೆಯಲಾಯಿತು ಎಂದು ಡಿಎಂಆರ್‌ಸಿ (DMRC) ಮಾಹಿತಿ ನೀಡಿದೆ.




