ಎಲ್‌ನಿನೋ ಪರಿಣಾಮದಿಂದ ಈ ಬಾರಿ ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಬೇಸಿಗೆ ಆರಂಭಕ್ಕೂ ಮುನ್ನವೇ ತಲೆದೋರುವ ಸಾಧ್ಯತೆಯಿದೆ. ಜನವರಿಯಿಂದಲೇ ನೀರಿನ ಅಭಾವ ಎದುರಾಗುವ ಅಪಾಯವಿದ್ದು, ಈಗಿನಿಂದಲೇ ನೀರಿನ ಮಿತ ಬಳಕೆ ಹಾಗೂ ಕೃಷಿ ಬೆಳೆಗಳ ಸೂಕ್ತ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಭೂಮಿಕಾ ಎಚ್.ಆರ್. ಎಚ್ಚರಿಸಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಘದ ‘ಸನ್ಮತಿ’ ಮಾಸಿಕ ಸಂಚಿಕೆ ಬಿಡುಗಡೆ ಹಾಗೂ ‘ತಿಂಗಳ ಅಂಗಳ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹವಾಮಾನದಲ್ಲಿನ ಏರುಪೇರು ಹಾಗೂ ತಾಪಮಾನ ಹೆಚ್ಚಳದಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ವಾತಾವರಣದ ಬದಲಾವಣೆಯಿಂದ ರಸ ಹೀರುವ ಕೀಟಗಳ ಹಾವಳಿ ಹೆಚ್ಚಾಗಿದ್ದು, ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾದಾಗ ಕೀಟ ಹಾಗೂ ರೋಗಬಾಧೆಯಿಂದ ಗಿಡಮರಗಳು ಒತ್ತಡಕ್ಕೆ ಒಳಗಾಗುತ್ತವೆ. ಇದರಿಂದ ಕಾಯಿಗಳು ಅವಧಿಗೂ ಮುನ್ನವೇ ಹಣ್ಣಾಗಿ ಉದುರುತ್ತಿವೆ ಎಂದು ವಿವರಿಸಿದರು.
ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಶೇ.27ರಷ್ಟು ಕೊರತೆಯಾಗಿದ್ದು, ಇದರಿಂದ ಕೀಟ ಹಾಗೂ ರೋಗಬಾಧೆ ಹೆಚ್ಚಾಗಿದೆ. ತೆಂಗಿನ ಬೆಳೆಯಲ್ಲಿ ಕಪ್ಪು ತಲೆ ಹುಳದ ಬಾಧೆ ಪತ್ತೆಯಾಗಿದ್ದು, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹವಾಮಾನ ವೈಪರೀತ್ಯದಿಂದ ಬೆಳೆ ನಿರ್ವಹಣೆ ಹಾಗೂ ಉತ್ಪಾದಕತೆಯ ಮೇಲೆ ದೀರ್ಘಕಾಲೀನ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದರು.
ಅಡಕೆ ಕಾಯಿಗಳು ಬೇಗನೆ ಹಣ್ಣಾಗುತ್ತಿದ್ದು, ಉದುರುವುದರ ಜೊತೆಗೆ ಗಾತ್ರದಲ್ಲಿಯೂ ಕುಂಠಿತವಾಗುತ್ತಿವೆ. ಮಳೆಯ ಕೊರತೆಯಿಂದ ಅಂತರ್ಜಲ ಮರುಪೂರಣ ಕಡಿಮೆಯಾಗಿದ್ದು, ನೀರಿನ ಆವಿಯಾಗುವ ಪ್ರಮಾಣ ಹೆಚ್ಚಾಗಿದೆ. ರೈತರಿಗೆ ಹವಾಮಾನ ಬದಲಾವಣೆ ಮತ್ತು ಬೆಳೆ ನಿರ್ವಹಣೆ ಕುರಿತು ಸೂಕ್ತ ತಿಳುವಳಿಕೆ ನೀಡದಿದ್ದರೆ ಪರಿಣಾಮ ಮತ್ತಷ್ಟು ತೀವ್ರವಾಗಲಿದೆ. ಆದ್ದರಿಂದ ನೀರನ್ನು ಮಿತವಾಗಿ ಬಳಸುವುದು ಅತ್ಯಗತ್ಯ ಎಂದು ಹೇಳಿದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಕೆ.ಎಂ. ಪ್ರವೀಣ್ ಮಾತನಾಡಿ, 2027ರ ಜನವರಿ ಮತ್ತು ಫೆಬ್ರವರಿ ತಿಂಗಳವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಕಡಲ ಮೇಲ್ಮೈ ತಾಪಮಾನದಲ್ಲಿಯೂ ಹೆಚ್ಚಳ ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ನೀರಿನ ಮಿತ ಬಳಕೆ, ಮಲ್ಚಿಂಗ್ (ಮಣ್ಣಿನ ಹೊದಿಕೆ) ಹಾಗೂ ಅಂತರ ಬೆಳೆ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೇಮಂತ್ ಕುಮಾರ್ ಎಲ್. ಮಾತನಾಡಿ, ತುಂತುರು ಹಾಗೂ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶೇ.90ರಷ್ಟು ಸಹಾಯಧನ ಲಭ್ಯವಿದೆ. ಎಲ್‌ನಿನೋ ಪರಿಣಾಮದಿಂದ ಜನವರಿಯಿಂದಲೇ ನೀರಿನ ಅಭಾವ ಎದುರಾಗುವ ಸಾಧ್ಯತೆಯಿದೆ. ಮಣ್ಣಿನ ರಸಸಾರ ನಿರ್ವಹಣೆಯೂ ಸವಾಲಾಗಿದ್ದು, ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ, ಅಗತ್ಯ ಪೋಷಕಾಂಶಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್, ಉಡುಪಿ ಪತ್ರಿಕಾ ಭವನ ಸಮಿತಿ ಸಹ ಸಂಚಾಲಕ ಗಣೇಶ್ ಕಲ್ಯಾಣಪುರ ಹಾಗೂ ಸಹಾಯಕ ತೋಟಗಾರಿಕಾ ನಿರ್ದೇಶಕ ನೀಶ್ ಹೊಳ್ಳ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಪುಂಡಲೀಕ ಮರಾಠೆ ಕಾರ್ಯಕ್ರಮ ನಿರೂಪಿಸಿದರು.






