ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ಹನುಮಂತ ತಂದೆ ವೆಂಕಟ್ ಭೋವಿ ಅವರ ಕುಟುಂಬಕ್ಕೆ ಭೀಮರಾಜ್ ಸೇನಾ ಸಂಘಟನೆಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಕಾಂಬಳೆ ಅವರ ವತಿಯಿಂದ ₹3,000 ಆರ್ಥಿಕ ನೆರವು ನೀಡಲಾಯಿತು.
ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದ ಹನುಮಂತ ಅವರು ನ.20ರಂದು ಢಾಬಾದಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಾಲೆಪುರ ಕ್ರಾಸ್ ಮತ್ತು ಹಲಬರ್ಗಾ ನಡುವಿನ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು.
ಮೃತ ಹನುಮಂತ ಅವರಿಗೆ ಮೂವರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗು ಇದ್ದಾರೆ. ಪತ್ನಿ, ಅನಾರೋಗ್ಯದಿಂದ ಬಳಲುತ್ತಿರುವ ತಂದೆ ಸೇರಿದಂತೆ ಕುಟುಂಬದ ಸಂಪೂರ್ಣ ಜವಾಬ್ದಾರಿ ಅವರ ಮೇಲಿತ್ತು. ಯಾವುದೇ ಆಸ್ತಿ ಹೊಂದಿರದ ಈ ಕುಟುಂಬಕ್ಕೆ ಹನುಮಂತ ಅವರ ಸಾವು ದೊಡ್ಡ ಆಘಾತ ತಂದಿದೆ. ಭೀಮರಾಜ್ ಸೇನಾ ಸಂಘಟನೆಯ ವತಿಯಿಂದ ಕುಟುಂಬಕ್ಕೆ ತಕ್ಷಣದ ಆರ್ಥಿಕ ನೆರವು ನೀಡುವುದರ ಜತೆಗೆ, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಲಾಯಿತು. ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ಯಾವುದೇ ಸಮಸ್ಯೆ ಎದುರಾದರೂ ಭೀಮರಾಜ್ ಸೇನಾ ಸಂಘಟನೆ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಬೀದರ್ | ಟನ್ ಕಬ್ಬಿಗೆ ₹4,000 ಬೆಲೆ ಘೋಷಣೆಗೆ ಪಟ್ಟು: ರೈತರ ಧರಣಿ 11ನೇ ದಿನಕ್ಕೆ
ಭೀಮರಾಜ್ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ಶಿವಕುಮಾರ್ ಕಣಜಿ, ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ್ ಭೈರನಳ್ಳಿ, ಮಾಜಿ ಪಂಚಾಯಿತಿ ಅಧ್ಯಕ್ಷ ಶ್ರೀಮಂತ ಕಂಟೆ ಸೇರಿದಂತೆ ಸಾಯಿಕುಮಾರ್, ಪ್ರೇಮಕುಮಾರ ದೊಡ್ಡೆ, ಆಕಾಶ್ ಕಂಟೆ, ಅಭಿಷೇಕ್ ಮಾಸಲ್ದಾರ್, ದಯಾನಂದ ಚಿಂಚೋಳಿ, ಗುರು ದೊಡ್ಡ, ದೀಪಕ್ ಕಂಟೆ ಸೇರಿದಂತೆ ಕಣಜಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



