ಜಿಲ್ಲೆಯ ವಿವಿಧೆಡೆ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಂದಾಗಿ ಕೈಗೆ ಬಂದಿದ್ದ ಕಬ್ಬು ಸುಟ್ಟು ಹೋಗಿ, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾಲ್ಕಿ ತಾಲೂಕಿನ ಭಾತಂಬ್ರಾ ಮತ್ತು ಜೋಳದಾಪಕಾ ಗ್ರಾಮಗಳಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಭಾತಂಬ್ರಾ ಗ್ರಾಮದ ರೈತ ಮಹೇಶ ರಾಚೋಟೆ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಮಳೆಯ ಕೊರತೆಯ ನಡುವೆಯೂ ಉತ್ತಮವಾಗಿ ಬೆಳೆಸಿದ್ದ ಕಬ್ಬು ಕಟಾವಿನ ಹಂತಕ್ಕೆ ಬಂದಿತ್ತು. ಆದರೆ, ಭಾನುವಾರ ಕಬ್ಬಿನ ಹೊಲದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಗಳು ಪರಸ್ಪರ ಘರ್ಷಣೆಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡು ಬೆಳೆ ಸಂಪೂರ್ಣ ನಾಶವಾಗಿದೆ.
ಇದೇ ರೀತಿ ಜೋಳದಾಪಕಾ ಗ್ರಾಮದ ರೈತ ಬಸವರಾಜ ಶಿವರಾಜ ಪಾಟೀಲ್ ಅವರಿಗೆ ಸೇರಿದ ಸುಮಾರು ಎರಡೂವರೆ ಎಕರೆ ಕಬ್ಬಿನ ಬೆಳೆಗೆ ಬೆಂಕಿ ತಗುಲಿದೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಎರಡು ಎಕರೆಗೂ ಅಧಿಕ ಪ್ರದೇಶದ ಕಬ್ಬು ಸುಟ್ಟು ಭಸ್ಮವಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಕಮಲನಗರ ತಾಲೂಕಿನ ಹಾಲಹಳ್ಳಿ ಗ್ರಾಮದ ರೈತ ಬಾಪುರಾವ ಪಾಟೀಲ್ ಎಂಬುವವರು ಮೂರು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸೋಮವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿಗಾಹುತಿಯಾಗಿದೆ.
ರೈತ ಬಾಪುರಾವ್ ಅವರು ಒಂದೇ ಕಡೆ ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಕಟಾವಿನ ಹಂತದಲ್ಲಿದ್ದು, ಐಪಿ ಸೆಟ್ ಟಿಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಅವಘಡದಿಂದ ಸುಮಾರು 3 ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಪರಿಹಾರಕ್ಕೆ ರೈತರ ಆಗ್ರಹ: ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಬೆಳೆ ನಷ್ಟದ ಮೌಲ್ಯಮಾಪನ ಮಾಡಬೇಕು. ಸರ್ಕಾರ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೀದರ್ | ಸೋಯಾಬೀನ್: ತಗ್ಗಿದ ಇಳುವರಿ, ಧಾರಣೆ ಏರಿಕೆ






