ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ನಾಳೆ (ಅ.27) ಬೆಳಿಗ್ಗೆ 8 ಗಂಟೆಯಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ತಿಳಿಸಿದರು.
ಸೋಮವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮತ ಎಣಿಕೆಗಾಗಿ ಒಟ್ಟು 14 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ನಲ್ಲಿ ಓರ್ವ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಇಬ್ಬರು ಸಹಾಯಕ ಅಧಿಕಾರಿಗಳು ಮತ ಎಣಿಕೆ ಕಾರ್ಯ ನಿರ್ವಹಿಸಲಿದ್ದಾರೆ. ಮತಪೆಟ್ಟಿಗೆಗಳನ್ನು ತರಲು ಗ್ರೂಪ್ ‘ಡಿ’ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಣದಲ್ಲಿರುವ 13 ಅಭ್ಯರ್ಥಿಗಳಿಗೆ ಪ್ರತ್ಯೇಕ ಟ್ರೇಗಳನ್ನು ಹಾಗೂ ತಿರಸ್ಕೃತ ಮತ್ತು ಸಂಶಯಾಸ್ಪದ ಮತಗಳಿಗೆ ಹೆಚ್ಚುವರಿ ಟ್ರೇಗಳನ್ನು ಇರಿಸಲಾಗುವುದು” ಎಂದರು.
ಬೆಳಿಗ್ಗೆ 8 ಗಂಟೆಗೆ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟ್‌ಗಳು ಹಾಗೂ ಚುನಾವಣಾ ವೀಕ್ಷಕರ ಸಮಕ್ಷಮ ಸ್ಟ್ರಾಂಗ್ ರೂಮ್ ತೆರೆಯಲಾಗುವುದು. ಮತ ಎಣಿಕೆ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈಗಾಗಲೇ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಅ.23ರಂದು ನಡೆದ ಚುನಾವಣೆಯಲ್ಲಿ ಒಟ್ಟು 34,784 ಮತದಾರರ ಪೈಕಿ 30,250 ಮಂದಿ ಮತ ಚಲಾಯಿಸಿದ್ದು, ಶೇ.86.97ರಷ್ಟು ಮತದಾನವಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಬರುವ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಲಿದ್ದು, ಪ್ರತಿ ಎರಡು ಟೇಬಲ್‌ಗಳಿಗೆ ಒಬ್ಬ ಜಿಲ್ಲಾಧಿಕಾರಿ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತ ಪದ್ಧತಿ ಜಾರಿಯಲ್ಲಿರುವುದರಿಂದ ಮತ ಎಣಿಕೆ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದೆ. ಒಟ್ಟು 144 ಮತಪೆಟ್ಟಿಗೆಗಳಲ್ಲಿರುವ ಮತಗಳನ್ನು ಟೇಬಲ್‌ವಾರು ವಿಂಗಡಿಸಿ, ತಲಾ 25 ಮತಗಳ ಬಂಡಲ್‌ಗಳನ್ನು ಸಿದ್ಧಪಡಿಸಿ ಬ್ಯಾರೆಲ್‌ನಲ್ಲಿ ಹಾಕಿ ರ್‍ಯಾಂಡಮೈಸೇಷನ್ ಮಾಡಲಾಗುತ್ತದೆ. ಬಳಿಕ ಪ್ರತಿ ಸುತ್ತಿನಲ್ಲಿ ಪ್ರತಿ ಟೇಬಲ್‌ಗೆ 40 ಬಂಡಲ್‌ಗಳಂತೆ ಮತಗಳನ್ನು ವಿತರಿಸಿ ಎಣಿಕೆ ನಡೆಸಲಾಗುತ್ತದೆ.

ಮೊದಲ ಹಂತದಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಎಣಿಸಲಾಗುತ್ತದೆ. ತಿರಸ್ಕೃತ ಮತಗಳನ್ನು ಹೊರತುಪಡಿಸಿ ಸಿಂಧು ಮತಗಳ ಆಧಾರದಲ್ಲಿ ಗೆಲುವಿಗೆ ಅಗತ್ಯವಾದ ಕೋಟಾವನ್ನು ನಿರ್ಧರಿಸಲಾಗುತ್ತದೆ. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಯಾವುದೇ ಅಭ್ಯರ್ಥಿ ನಿಗದಿತ ಕೋಟಾ ತಲುಪಿದರೆ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
ಯಾವುದೇ ಅಭ್ಯರ್ಥಿ ಗೆಲುವಿನ ಕೋಟಾ ತಲುಪದಿದ್ದರೆ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಆರಂಭವಾಗುತ್ತದೆ. ಅತ್ಯಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಹಂತ ಹಂತವಾಗಿ ಎಲಿಮಿನೇಟ್ ಮಾಡಿ, ಅವರ ಮತಗಳನ್ನು ಮತಪತ್ರಗಳಲ್ಲಿರುವ ಮುಂದಿನ ಪ್ರಾಶಸ್ತ್ಯದ ಆಧಾರದಲ್ಲಿ ಇತರ ಅಭ್ಯರ್ಥಿಗಳಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆ ಮುಂದುವರಿದು ನಿಗದಿತ ಕೋಟಾ ತಲುಪುವ ಅಭ್ಯರ್ಥಿಯನ್ನು ಅಂತಿಮವಾಗಿ ವಿಜಯಿ ಎಂದು ಘೋಷಿಸಲಾಗುತ್ತದೆ.
ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧ
ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿಗಳು, ಚುನಾವಣಾ ಏಜೆಂಟ್‌ಗಳು ಹಾಗೂ ಮತ ಎಣಿಕೆಗೆ ನಿಯೋಜಿತ ಸಿಬ್ಬಂದಿ ಸೇರಿದಂತೆ ಯಾರೂ ಮೊಬೈಲ್ ಫೋನ್‌ಗಳನ್ನು ತರುವಂತಿಲ್ಲ. ಬೆಂಕಿಪೊಟ್ಟಣ, ಲೈಟರ್, ಫೌಂಟೇನ್ ಇಂಕ್ ಪೆನ್, ಸಿಗರೇಟ್, ಪಾನ್, ಬೀಡಾ, ತಂಬಾಕು ಹಾಗೂ ನೀರಿನ ಬಾಟಲಿಗಳನ್ನೂ ತರಲು ನಿಷೇಧ ಹೇರಲಾಗಿದೆ ಎಂದು ಜಹೀರಾ ನಸೀಮ್ ತಿಳಿಸಿದರು.
ಮತ ಎಣಿಕೆ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಭದ್ರತಾ ಕೊಠಡಿಯ ಸಿಬ್ಬಂದಿಗೆ ಅಂದು ರಜೆ ಘೋಷಿಸಲಾಗಿದೆ.
ವಾಹನಗಳ ಪ್ರವೇಶ ನಿರ್ಬಂಧ
ಮತ ಎಣಿಕೆ ದಿನ ವಿಶ್ವವಿದ್ಯಾಲಯದ ಆವರಣದಲ್ಲಿ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಭ್ಯರ್ಥಿಗಳು ಹಾಗೂ ಪತ್ರಕರ್ತರ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಸೋಯಾಬೀನ್: ತಗ್ಗಿದ ಇಳುವರಿ, ಧಾರಣೆ ಏರಿಕೆ
ಈ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ) ಹಾಗೂ ಪ್ರಭಾರಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಪ್ರಮೀಳಾ ಎಂ.ಕೆ. ಸೇರಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.






