ಭಾರತ ಸರ್ಕಾರದ ಗೃಹ ಮತ್ತು ಹಣಕಾಸು ಸಚಿವಾಲಯಗಳಂತಹ ಅತ್ಯಂತ ಪ್ರಮುಖ ಆಡಳಿತಾತ್ಮಕ ಕಚೇರಿಗಳನ್ನು ಒಳಗೊಂಡಿರುವ ನವದೆಹಲಿಯ ಐತಿಹಾಸಿಕ ‘ನಾರ್ತ್ ಬ್ಲಾಕ್’ ಕಟ್ಟಡದ ಮೇಲ್ಚಾವಣಿಯಲ್ಲಿ ಸೋಮವಾರ ಬೆಳಿಗ್ಗೆ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ಮತ್ತು ಸಾಲು ಸಾಲು ಪ್ರಶ್ನೆಗಳಿಗೆ ಕಾರಣವಾಗಿದೆ.
ರೈಸಿನಾ ಹಿಲ್‌ನಲ್ಲಿರುವ ಕೆಂಪು ಕಲ್ಲಿನ ನಾರ್ತ್ ಬ್ಲಾಕ್ ಕಟ್ಟಡದ ಟೆರೇಸ್‌ನಲ್ಲಿ ಅಳವಡಿಸಲಾಗಿದ್ದ ಎಸಿ ಬಾಯ್ಲರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ದಟ್ಟವಾದ ಕಪ್ಪು ಹೊಗೆ ಬಾನಿನತ್ತ ಚಿಮ್ಮಿದೆ. ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದ್ದು, ತಕ್ಷಣವೇ ಸ್ಥಳಕ್ಕೆ ಧಾವಿಸಿದ 6 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿವೆ.
ಸಂಸತ್ತಿಗೆ ತೆರಳುವ ಹಾದಿಯಲ್ಲಿ ಈ ದೃಶ್ಯವನ್ನು ಗಮನಿಸಿದ ಸಂಸದ ಮಿಲಿಂದ್ ದೇವ್‌ರಾ ಅವರು, ನಾರ್ತ್ ಬ್ಲಾಕ್ ಹಿಂಭಾಗದಿಂದ ದಟ್ಟ ಹೊಗೆ ಏರುತ್ತಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿ ಎಕ್ಸ್ (X) ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಎಸಿ ಬಾಯ್ಲರ್‌ನಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದಾಗ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಪ್ರಾಥಮಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರವು ಶಾರ್ಟ್ ಸರ್ಕ್ಯೂಟ್ ಎಂಬ ವಿವರಣೆ ನೀಡಿದೆಯಾದರೂ, ಸಾರ್ವಜನಿಕರು ಮತ್ತು ವಿಪಕ್ಷಗಳು ಘಟನೆಯ ಸತ್ಯಾಸತ್ಯತೆ ಹೊರಬರಬೇಕೆಂದು ಆಗ್ರಹಿಸುತ್ತಿವೆ. ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಸಾಫ್ಟ್‌ವೇರ್ ಮತ್ತು ಆಲ್ಗರಿದಮ್ ವಿವರಗಳನ್ನು ಹಂಚಿಕೊಳ್ಳಲು ಚುನಾವಣಾ ಆಯೋಗವು ಆರ್‌ಟಿಐ ವಿನಾಯಿತಿಗಳನ್ನು ಉಲ್ಲೇಖಿಸಿ ನಿರಾಕರಿಸಿರುವ ಬೆನ್ನಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಶಂಕೆ ಉಂಟುಮಾಡಿದೆ.
ಇದನ್ನೂ ಓದಿ: ದೆಹಲಿ | ರಸ್ತೆ ಕಳಪೆ ಕಾಮಗಾರಿ ಪ್ರಶ್ನಿಸಿದಕ್ಕೆ ಹಲ್ಲೆ; ಯುವಕನ ಕಪಾಳಕ್ಕೆ ಹೊಡೆದ ದುರಹಂಕಾರಿ ಸಚಿವ
ಘಟನೆ ಬೆನ್ನಲ್ಲೇ ‘ಇಂಡಿಯಾ ವಿತ್ ಕಾಂಗ್ರೆಸ್’ ಎಕ್ಸ್ ಖಾತೆಯಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಪ್ರಶ್ನಿಸಿ ಪೋಸ್ಟ್ ಮಾಡಲಾಗಿದೆ. “#VoteChori ಮತ್ತು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಮೂಲ ಸಾಫ್ಟ್‌ವೇರ್ (#SIR) ವಿವರಗಳನ್ನು ಬಹಿರಂಗಪಡಿಸಲು ಸರ್ಕಾರ ನಿರಾಕರಿಸುತ್ತಿರುವ ಈ ಸಂದರ್ಭದಲ್ಲೇ ನಾರ್ತ್ ಬ್ಲಾಕ್‌ನಲ್ಲಿ ಬೆಂಕಿ ಬಿದ್ದಿರುವುದು ತೀವ್ರ ಅನುಮಾನಕ್ಕೆ ಕಾರಣವಾಗಿದೆ. ಕೇವಲ ‘ಶಾರ್ಟ್ ಸರ್ಕ್ಯೂಟ್’ ಎಂಬ ಸಿದ್ಧ ವಿವರಣೆಯನ್ನು ನೀಡಿ ಈ ವಿಷಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಬೆಂಕಿಯಿಂದ ಎಷ್ಟು ಹಾನಿಯಾಗಿದೆ, ಪ್ರಮುಖ ಸರ್ಕಾರಿ ಕಡತಗಳು ಅಥವಾ ದಾಖಲೆಗಳು ನಾಶವಾಗಿವೆಯೇ ಹಾಗೂ ಈ ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆದಿದೆಯೇ ಎಂಬ ಬಗ್ಗೆ ಸತ್ಯಾಂಶಗಳು ಹೊರಬರಬೇಕು” ಎಂದು ಆ ಪೋಸ್ಟ್‌ನಲ್ಲಿ ಆಗ್ರಹಿಸಲಾಗಿದೆ.





