ಭಾಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜೈರಾಜ ಪಾತ್ರೆ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಬಿ.ಜಿ. ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ನಡೆದ ತಾಲೂಕು ಪತ್ರಕರ್ತರ ಸಂಘದ ಚುನಾವಣೆ ಪ್ರಕ್ರಿಯೆಯಲ್ಲಿ ಆಯ್ಕೆ ನಡೆಯಿತು.
ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಜೈರಾಜ ಪಾತ್ರೆ ಹಾಗೂ ಗಣಪತಿ ಬೋಚರೆ ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಘಟಕವು ಪತ್ರಕರ್ತರ ಗೌಪ್ಯ ಅಭಿಪ್ರಾಯ ಸಂಗ್ರಹಿಸುವ ಮೂಲಕ ಚುನಾವಣಾ ಪ್ರಕ್ರಿಯೆ ನಡೆಸಿತು. ಚುನಾವಣೆಯ ನೇತೃತ್ವ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ದೇವಪ್ಪ ಅವರು, ಪತ್ರಕರ್ತರ ಅಭಿಪ್ರಾಯದ ಆಧಾರದ ಮೇಲೆ ಜೈರಾಜ ಪಾತ್ರೆ ಅವರನ್ನು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು. ಇದೇ ವೇಳೆ ಸಂತೋಷ ಬಿ.ಜಿ. ಪಾಟೀಲ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಪ್ರಕಟಿಸಿದರು.
ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅವರು ಮಾತನಾಡಿ, “ಪತ್ರಕರ್ತರು ಹಲವು ಸಂಕಷ್ಟಗಳ ನಡುವೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಸಂಘದ ಪದಾಧಿಕಾರಿಗಳು ಧ್ವನಿಯಾಗಬೇಕು ಎಂದು ಹೇಳಿದರು. ಸರ್ಕಾರ ಪತ್ರಕರ್ತರಿಗಾಗಿ ಜಾರಿಗೊಳಿಸಿರುವ ವಿವಿಧ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ಕಾರ್ಯನಿರ್ವಹಿಸಬೇಕು” ಎಂದು ತಿಳಿಸಿದರು.
ನೂತನ ತಾಲೂಕು ಅಧ್ಯಕ್ಷ ಜೈರಾಜ ಪಾತ್ರೆ ಮಾತನಾಡಿ, “ತಾಲೂಕಿನ ಎಲ್ಲ ಪತ್ರಕರ್ತರು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡುತ್ತೇನೆ. ಪತ್ರಕರ್ತರ ಹಿತಾಸಕ್ತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದರು.
ಇದನ್ನೂ ಓದಿ : ಬೀದರ್ | ಪ್ರತೀ ಮನೆಯಲ್ಲೂ ಇರಲಿ ಗ್ರಂಥಾಲಯ: ಶೈಲಜಾ ಹುಡುಗೆ
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಉಪಾಧ್ಯಕ್ಷ ಬಸವರಾಜ ಕಾಮಶೆಟ್ಟಿ ಹಾಗೂ ಪೃಥ್ವಿರಾಜ ಎಸ್., ಕಾರ್ಯದರ್ಶಿಗಳಾದ ಸ್ವಾಮಿದಾಸ ನಾಗೂರೆ ಮತ್ತು ಸಂತೋಷ ಚಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶ್ರೀಕಾಂತ ಪಾಟೀಲ ಹಾಗೂ ಅನಿಲ ಪಾಟೀಲ ಹಾಲಹಿಪ್ಪರಗಾ, ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಜಯರಾಜ ದಾಬಶೆಟ್ಟೆ, ಅಶೋಕ ರಾಜೋಳೆ, ಗಣಪತಿ ಬೋಚರೆ, ವಿಜಯಕುಮಾರ ಪರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.




