ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕು, ಬರಗಾಲದಿಂದ ಸಂಕಷ್ಟಕ್ಕೀಡಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50,000 ಪರಿಹಾರ ನೀಡಬೇಕು ಹಾಗೂ ಸ್ಥಗಿತಗೊಂಡಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ (BSSK) ಪುನರಾರಂಭಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಬೀದರ್ ಜಿಲ್ಲಾ ಘಟಕದಿಂದ ಧರಣಿ ನಡೆಸಲಾಯಿತು.
ಬೀದರ್ ನಗರದ ಅಂಬೇಡ್ಕರ್ ವೃತ್ತದ ಸಮೀಪದ ಪ್ರವಾಸಿ ಮಂದಿರದ ಎದುರು ಧರಣಿ ನಡೆಸಿದ ಪಕ್ಷದ ಮುಖಂಡರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರಿಗೆ ಬರೆದ ಮನವಿಯನ್ನು ಸ್ಥಳಕ್ಕೆ ಆಗಮಿಸಿದ ಬೀದರ್ ತಹಸೀಲ್ದಾರ್ ರವೀಂದ್ರ ದಾಮಾ ಅವರಿಗೆ ಸಲ್ಲಿಸಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದಪ್ಪ ಫುಲಾರಿ ಮಾತನಾಡಿ, “ಈ ವರ್ಷ ಸಮರ್ಪಕ ಮಳೆಯಾಗದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಮಾಡಿದ ಖರ್ಚು ಕೂಡ ಮರಳಿ ಪಡೆಯಲಾಗದೆ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವಿಶೇಷವಾಗಿ ಕಬ್ಬು ಬೆಳೆಗಾರರು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಬೆಳೆ ನಿರ್ವಹಣಾ ಖರ್ಚು ಹಾಗೂ ಸೂಕ್ತ ಬೆಲೆ ದೊರೆಯದಿರುವುದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ತಿಳಿಸಿದರು.
ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ಸಂಕಷ್ಟಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ರೈತರ ಬದುಕು ಹಾಗೂ ಕೃಷಿ ಚಟುವಟಿಕೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಮೇಲ್ಕಂಡ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಸೈಯದ್ ಜಮೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಜಾವೀದ್, ಎಂ.ಡಿ. ಶರೀಫ್, ನಂದಿ ಬಸವ, ರಾಜಶೇಖರ್ ಜಿ., ಕಂಟೆಪ್ಪಾ, ಪುಂಡಲಿಕರಾವ್, ಶಾಂತಕುಮಾರ, ಸೈಯದ್ ಮುಖೀಮ್, ಮಚೀಂದ್ರ ಕಾಂಬಳೆ, ಶಿವಕುಮಾರ, ಗೋರಖನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಅಂಬೇಡ್ಕರ್ ಭವನಕ್ಕೆ ನಿವೇಶನ ಮಂಜೂರು ಮಾಡಿ





