ಭಾರತೀಯ ಚುನಾವಣಾ ಆಯೋಗ (ಇಸಿಐ) ಈ ಹಿಂದೆ ಕೈಗೊಂಡ ಅವೈಜ್ಞಾನಿಕ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಾಚರಣೆಯ ನೂನ್ಯತೆಗಳಿಂದಾಗಿ ಲಕ್ಷಾಂತರ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಈ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇದೀಗ ತಮ್ಮ ಮತದಾನದ ಹಕ್ಕನ್ನು ಪಡೆಯಲು ಈ ಮತದಾರರು ಫಾರ್ಮ್ 6 ಸಲ್ಲಿಸಲು ಅಲೆದಾಡುವಂತಾಗಿದೆ.
ತಮ್ಮದೇ ಸಿಬ್ಬಂದಿಯ ಕ್ಷೇತ್ರ ಮಟ್ಟದ ಪರಿಶೀಲನೆ (BLO ಸರ್ವೇ) ಲೋಪದಿಂದಾಗಿ ಲಕ್ಷಾಂತರ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ, ಚುನಾವಣಾ ಆಯೋಗವು ಈ ಕುರಿತು ಸ್ಪಷ್ಟನೆ ನೀಡಿದೆ. “ಯಾರ ಹೆಸರು ಕರಡು ಪಟ್ಟಿಯಲ್ಲಿ ಬಿಟ್ಟುಹೋಗಿದೆಯೋ ಅವರು ಹೊಸದಾಗಿ ‘ಫಾರ್ಮ್ 6’ (Form 6) ಸಲ್ಲಿಸಿ ಮತ್ತೆ ಹೆಸರು ಸೇರ್ಪಡೆಗೊಳಿಸಬಹುದು” ಎಂದು ತಿಳಿಸಿದೆ.
ಇದನ್ನೂ ಓದಿ: ಎನ್ಯೂಮರೇಷನ್ ಫಾರ್ಮ್ ಸಲ್ಲಿಸಿ ಮತದಾನದ ಹಕ್ಕು ಉಳಿಸಿಕೊಳ್ಳಿ: ಮೊಹಮ್ಮದ್ ಸಿರಾಜ್ ಹುಣಚಗಿ
ಬಿಎಲ್‌ಒ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಲಭ್ಯವಿಲ್ಲದಿದ್ದರೆ ಅಥವಾ ಎನ್ಯುಮರೇಷನ್ ಫಾರ್ಮ್‌ಗಳು ಸರಿಯಾಗಿ ಸಲ್ಲಿಕೆಯಾಗದಿದ್ದರೆ ಅಂತಹ ಮತದಾರರನ್ನು ನೇರವಾಗಿ ‘ಗೈರುಹಾಜರಿ/ಸ್ಥಳಾಂತರಗೊಂಡಿದ್ದಾರೆ (ASD/Shifted)’ ಎಂದು ಗುರುತಿಸಿ ಕರಡು ಪಟ್ಟಿಯಿಂದ ಕೈಬಿಡಲಾಗಿತ್ತು.
ಇದರಿಂದಾಗಿ ಹಲವು ವರ್ಷಗಳಿಂದ ನಿಯಮಿತವಾಗಿ ಮತದಾನ ಮಾಡುತ್ತಿದ್ದ ಲಕ್ಷಾಂತರ ನಾಗರಿಕರು ಒಂದೇ ರಾತ್ರಿಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಮತ್ತು ಹಕ್ಕುಗಳ ಹೋರಾಟಗಾರರು, “ಚುನಾವಣಾ ಆಯೋಗದ ಆಡಳಿತಾತ್ಮಕ ಎಡವಟ್ಟಿಗೆ ನಾಗರಿಕರು ಸರ್ಕಾರಿ ಕಚೇರಿಗಳು ಮತ್ತು ಇಂಟರ್ನೆಟ್ ಕೆಫೆಗಳಿಗೆ ಅಲೆಯುವಂತೆ ಮಾಡಲಾಗಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಅರ್ಜಿಯೊಂದರ ವಿಚಾರಣೆ ಮತ್ತು ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಈ ಹೊಸ ನಿರ್ದೇಶನವನ್ನು ನೀಡಿದೆ. ಈ ಹಿಂದೆ ಹೆಸರು ನೋಂದಾಯಿಸಿಕೊಂಡು, ಈಗಿನ SIR ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವವರು ಉದ್ಯೋಗ/ಸ್ಥಳ ಬದಲಾವಣೆ ಅಥವಾ ಇತರ ಯಾವುದೇ ಕಾರಣವಿದ್ದರೂ ಕರಡು ಪಟ್ಟಿಯ ‘ಆಕ್ಷೇಪಣೆ ಮತ್ತು ಹಕ್ಕುಗಳ ಸಲ್ಲಿಕೆ’ ಅವಧಿಯಲ್ಲಿ ಫಾರ್ಮ್-6 ಅನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಸಲ್ಲಿಸಬಹುದು ಎಂದು ಆಯೋಗ ತಿಳಿಸಿದೆ.
ಸಾಮಾನ್ಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಮತ್ತೆ ಫಾರ್ಮ್-6 ಸಲ್ಲಿಸಿದರೆ ‘ಸುಳ್ಳು ಘೋಷಣೆ’ ಎಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ, SIR ಕರಡು ಪಟ್ಟಿಯಿಂದ ಹೆಸರು ಕಳೆದುಕೊಂಡವರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ಯಾವುದೇ ಭೀತಿಯಿಲ್ಲದೆ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ಹೇಳಿದೆ.




