ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದರ್ ಜಿಲ್ಲಾ ರೈತ ಸಂಘಗಳ ಸಮನ್ವಯ ಸಮಿತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಬ್ಬಿನ ದರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಕರೆ ನೀಡಲಾಗಿತ್ತು. ಆದರೆ, ರೈತರು ಮುತ್ತಿಗೆ ಹಾಕುವ ನಿರ್ಧಾರ ಕೈಬಿಟ್ಟು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾಂಕೇತಿಕ ಧರಣಿ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಮಾಯಿಸಿದ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿಗೆ ಬರೆದ ಮನವಿಯನ್ನು ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.

ಕಬ್ಬಿನ ಎಫ್‌ಆರ್‌ಪಿ ಹಾಗೂ ಎಂಎಸ್‌ಪಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಎರಡು ತಿಂಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರು ಜಂಟಿಯಾಗಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದರೂ ಸರ್ಕಾರಗಳು ಬೇಡಿಕೆಗಳಿಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿವೆ ಎಂದು ರೈತ ಮುಖಂಡರು ಆರೋಪಿಸಿದರು.
ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.3ರಂದು ಗುರ್ಲಾಪುರದಿಂದ ಹಿಂಡಲಗಾ ಜೈಲಿನವರೆಗೆ ನಡೆಸುತ್ತಿರುವ ಜೈಲ್ ಭರೋ ಆಂದೋಲನಕ್ಕೆ ಪ್ರತಿಭಟನಾಕಾರರು ಬೆಂಬಲ ಸೂಚಿಸಿದರು.
ರೈತರ ಪ್ರಮುಖ ಬೇಡಿಕೆಗಳು:
ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸಬೇಕು. ಬರಗಾಲದ ಹಿನ್ನೆಲೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರಾಜ್ಯ ಸರ್ಕಾರ ಕಬ್ಬಿಗೆ ಎಸ್‌ಎಪಿ ತುರ್ತಾಗಿ ಘೋಷಿಸಬೇಕು. ಬೆಳೆ ವಿಮೆ ಪಾವತಿಸಿದ ರೈತರಿಗೆ ಶೇ 100ರಷ್ಟು ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅನುದಾನದಡಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದರು.
ಹೊಲಗಳಲ್ಲಿ ಕಬ್ಬು ಬೆಳೆ ಸುಟ್ಟುಹೋದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಹಗಲು ವೇಳೆಯಲ್ಲಿ ನಿರಂತರ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು. ಕಾಡುಪ್ರಾಣಿಗಳಿಂದ ರೈತರ ಬೆಳೆಗಳಿಗೆ ಆಗುತ್ತಿರುವ ಹಾನಿ ತಡೆಯಲು ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದರ್, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಲ್ಲಾರೆಡ್ಡಿ ಮುರಾಳ್, ಎಸ್‌ಕೆಎಂ ಅಧ್ಯಕ್ಷ ಬಾಬುರಾವ್ ಹೊನ್ನಾ ಸೇರಿದಂತೆ ಪ್ರಮುಖರಾದ ಗುಂಡುರೆಡ್ಡಿ, ಕೊಂಡಿಬಾರಾವ್ ಪಾಂಡ್ರೆ, ನಸೀರ್ ಅಹ್ಮದ್, ಶಿವರಾಜ್ ಪಾಟೀಲ್ ಅತಿವಾಳ, ಶಂಕರ್ ಪಾಟೀಲ್, ಬಸವರಾಜ್ ಅಷ್ಟೂರ್, ನಾಗಶೆಟ್ಟಪ್ಪ ಲಂಜವಾಡೆ, ರುದ್ರಯ್ಯಾ ಸ್ವಾಮಿ, ವಿನೋದ್ ಚಿಂತಾಮಣಿ, ವಿಜಯಕುಮಾರ್ ಬಾವಗಿ, ಶಿವಾನಂದ ಸ್ವಾಮಿ, ಶಫಾಯತ್ ಅಲಿ, ಪ್ರಭಾವತಿ, ಶಿವನಂದಾ ಗೋರಚಿಂಚೋಳಿ, ಕಮಲಾಬಾಯಿ, ಶಕುಂತಲಾ ಹಾಗೂ ಸೋಮನಾಥ್ ಸೇರಿದಂತೆ ಅನೇಕ ರೈತರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಭಾಲ್ಕಿ | ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ




