ಕೇಂದ್ರ ಸರ್ಕಾರವು ಪಂಚರಾಜ್ಯಗಳ ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ₹3 ರಷ್ಟು ಹೆಚ್ಚಿಸಿರುವುದನ್ನು ಆಮ್ ಆದ್ಮಿ ಪಾರ್ಟಿ ಬೀದರ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪಕ್ಷ ಮುಖಂಡರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಶನಿವಾರ ಸಲ್ಲಿಸಿದರು.
ʼಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇಂಧನ ದರ ಏರಿಕೆ ಮತ್ತೊಂದು ದೊಡ್ಡ ಹೊಡೆತವಾಗಿದೆ. ಅಡುಗೆ ಅನಿಲದ ಬೆಲೆ ಹೆಚ್ಚಳದಿಂದ ಮನೆಮಂದಿಯ ಜೀವನ ಅಸ್ತವ್ಯಸ್ತವಾಗಿದ್ದು, ಕುಟುಂಬಗಳ ನಿರ್ವಹಣೆ ಕಷ್ಟಕರವಾಗಿದೆʼ ಎಂದು ದೂರಿದರು.
ʼನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಅನೇಕ ಸಣ್ಣ ವ್ಯಾಪಾರಿಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ದಿನನಿತ್ಯದ ಖರ್ಚು ಹೆಚ್ಚಾಗಿ ಸಾಮಾನ್ಯ ಜನರು ಬದುಕು ಸಾಗಿಸುವುದೇ ಕಷ್ಟಕರವಾಗಿದೆʼ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ʼಕೇಂದ್ರ ಸರ್ಕಾರವು ಜನಸಾಮಾನ್ಯರ ಸಂಕಷ್ಟವನ್ನು ಮನಗಂಡು ತಕ್ಷಣವೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ನಿಯಂತ್ರಿಸಿ ಜನರಿಗೆ ಪರಿಹಾರ ನೀಡಬೇಕು. ಜೊತೆಗೆ ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಿ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ ವಿಶ್ವವಿದ್ಯಾಲಯಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಿ
ಆಪ್ ಜಿಲ್ಲಾಧ್ಯಕ್ಷ ಸಿದ್ದು ಫೂಲಾರಿ, ಉಪಾಧ್ಯಕ್ಷ ರಾಜಕುಮಾರ ಎನ್.ಪಾಟೀಲ ಬಾವಗಿ, ಪ್ರಧಾನ ಕಾರ್ಯದರ್ಶಿ ಎಂ.ಡಿ.ಜಾವೀದ್ ಹಾಗೂ ಪ್ರಮುಖರಾದ ವೆಂಕಟರಾವ್ ಹಿಂಡಾ, ನಂದಿ ಬಸವ ಪಾಟೀಲ, ಡಿ.ಕೆ.ಯೋಹಾನ್, ಕಂಟೆಪ್ಪಾ ಗುಪ್ತಾ, ಓಂಕಾರ್ ಇದ್ದರು.




