ಪೌರ ಕಾರ್ಮಿಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಲ್ಲಾಬಾದ್ ಏತ ನೀರಾವರಿ ರೈತ ಹೋರಾಟ ಸಮಿತಿ ಹಾಗೂ ಆದರ್ಶ ಗ್ರಾಮ ಸಮಿತಿ, ಯಾಳವಾರ ವತಿಯಿಂದ ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಜೇವರಗಿ ತಾಲೂಕು ಪೌರ ಕಾರ್ಮಿಕರ ಸಂಘ, ಎಐಟಿಯುಸಿ ಹಾಗೂ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಎಐಡಿಆರ್‌ಎಂ) ನೇತೃತ್ವದಲ್ಲಿ ಏಪ್ರಿಲ್ 13ರಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ ಸಮಿತಿಯ ಮುಂಖಡರು ಮಾತನಾಡಿ, ‘ಹಲವು ವರ್ಷಗಳಿಂದ ಪುರಸಭೆಯಲ್ಲಿ ಸೇವೆ ಸಲ್ಲಿಸಿರುವ 16 ಜನ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ’ ಎಂದು ಆರೋಪಿಸಿವೆ.
‘ನಗರದ ಸ್ವಚ್ಛತೆಗಾಗಿ ದುಡಿದ ಕಾರ್ಮಿಕರ ಸೇವೆಯನ್ನು ಪರಿಗಣಿಸದೇ, ಅವರ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸದೇ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಕೆಲಸ ಖಾಯಂ ಮಾಡುವ ಸಂದರ್ಭದಲ್ಲಿ ಕಾರ್ಮಿಕರನ್ನು ಸೇವೆಯಿಂದ ದೂರ ಮಾಡಿರುವುದು ಖಂಡನೀಯ’ ಎಂದರು.
‘ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದ ದಾಖಲೆಗಳು ಹಾಗೂ ನ್ಯಾಯಾಲಯದಲ್ಲಿ ಸಲ್ಲಿಸಲಾದ ದಾಖಲೆಗಳನ್ನೇ ನಕಲಿ ಎಂದು ಬಿಂಬಿಸಿ, ತಪ್ಪು ಮಾಹಿತಿ ಆಧರಿಸಿ ವರದಿ ಸಿದ್ಧಪಡಿಸಿ ನ್ಯಾಯಾಲಯವನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ 17 ಜನ ಪೌರ ಕಾರ್ಮಿಕರ ವಿರುದ್ಧ ಸಂಚು ರೂಪಿಸಿ ಜೇವರಗಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.
ಸಂಬಂಧಿತ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಿ, ಸಮಗ್ರ ತನಿಖೆ ನಡೆಸಿ ಅನ್ಯಾಯಕ್ಕೆ ಒಳಗಾದ ಪೌರ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಸರ್ಕಾರವೇ ಬಸವಾದಿ ಶರಣರ ಹಿಂದೂ ಸಮಾವೇಶ ತಡೆಯಲಿ : ಜ್ಞಾನಪ್ರಕಾಶ ಸ್ವಾಮೀಜಿ
ಈ ಸಂದರ್ಭದಲ್ಲಿ ಡಾ. ಮಹೇಶಕುಮಾರ ರಾಠೋಡ, ಬಾಬು ಬಿ. ಪಾಟೀಲ್, ಇಬ್ರಾಹಿಂ ಪಟೇಲ್ ಯಾಳವಾರ, ರಾಜಾ ಪಟೇಲ್, ಮಲ್ಲಣ್ಣ ಬಿ ತಳವಾರ, ಯಲ್ಲಲಿಂಗ್ ಎಚ್ ಸೇರಿದಂತೆ ಅನೇಕ ಇದ್ದರು.





