ಬಿ.ಟಿ. ಜಾಹ್ನವಿ ಅವರ 'ದೂಪ್ದಳ್ಳಿ ಸೆಕ್ಸಿ ದುರಗ' ಕತೆಯನ್ನು ರಂಗಕಲಾವಿದೆ, ನೃತ್ಯಗಾರ್ತಿ ವಾಣಿ ಸತೀಶ್ ಪ್ರಸ್ತುತಪಡಿಸಿದರು. ಅವರ ಕತೆ, ಇವರ ಏಕವ್ಯಕ್ತಿ ಅಭಿನಯ- ಎರಡೂ ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥವು. ಇದು ಇನ್ನಷ್ಟು ಪ್ರದರ್ಶನಗಳನ್ನು ಕಾಣಲಿ, ನಾಡಿನಾದ್ಯಂತ ನಡೆದಾಡಲಿ...
ಅದೊಂದು ಪುಟ್ಟ ಹಜಾರ- ಈದಿನ ಚಾವಡಿ. ಒಂದಷ್ಟು ಚೇರುಗಳು. ಆ ಚೇರುಗಳ ಮುಂದೆ ಒಂದು ಬಿಳಿಬಣ್ಣದ ರೌಂಡ್ ಟೇಬಲ್. ಅದರ ಹಿಂದಕ್ಕೆ ಒಂದು ಕಪ್ಪು ಪರದೆ. ಅಲ್ಲೊಂದು ಪುಟ್ಟ ರಂಗಭೂಮಿ ಜೀವ ತಳೆದಿತ್ತು. ಜೀವತುಂಬಲಿರುವ ಕಲಾವಿದೆ ಪ್ರೇಕ್ಷಕರೊಂದಿಗೆ ಕೂತು ಅದೂ-ಇದೂ ಹರಟುತ್ತ ಹಗುರಾಗುತ್ತಿದ್ದರು. ನಡುವೆ ನೀರು ಕುಡಿಯುತ್ತಿದ್ದರು. ಪ್ರೇಕ್ಷಕರು ಕಾಫಿ-ಟೀ ಕುಡಿದರು, ಬಿಸ್ಕೆಟ್ ತಿಂದು ಸಿದ್ಧರಾದರು. ಮುಂದೇನಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ, ಅಂದಾಜು ಇರಲಿಲ್ಲ.
ನೆಲದ ಸೊಗಡಿನ ಗಟ್ಟಿ ಕತೆಗಳಿಗೆ ಹೆಸರಾದ ಬಿ.ಟಿ. ಜಾಹ್ನವಿ ಅವರ ‘ದೂಪ್ದಳ್ಳಿ ಸೆಕ್ಸಿ ದುರಗ’ ಕತೆಯನ್ನು ರಂಗಕಲಾವಿದೆ, ನೃತ್ಯಗಾರ್ತಿ ವಾಣಿ ಸತೀಶ್ ಪ್ರಸ್ತುತಪಡಿಸಲು ಅಣಿಯಾದರು. ಅದು ಏಕವ್ಯಕ್ತಿ ಅಭಿನಯ. ಒಬ್ಬ ಕಲಾವಿದೆಯೇ ಸಂಪೂರ್ಣ ಕಥೆಯನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗಿಸುವ ಕಲಾರೂಪವೇ ಏಕವ್ಯಕ್ತಿ ಅಭಿನಯ. ಇದು ಕೇವಲ ಅಭಿನಯವಲ್ಲ- ಧ್ವನಿ, ದೇಹಭಾಷೆ, ಭಾವನೆ, ಮೌನ, ಸಮಯಪ್ರಜ್ಞೆ, ಮನಸ್ಸಿನ ಆಳದಲ್ಲಿ ನಡೆಯುವ ತಳಮಳ ಮತ್ತು ಹೋರಾಟ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ, ಆ ವ್ಯಕ್ತಿಗಿರಬೇಕು. ಅದೇ ಏಕವ್ಯಕ್ತಿ ಅಭಿನಯದ ವೈಶಿಷ್ಟ್ಯ ಮತ್ತು ಸವಾಲು.
ಅಂತಹ ಸವಾಲಿನ ಕೆಲಸಕ್ಕೆ ಸಿದ್ಧರಾದ ವಾಣಿಯವರು, ಆ ರೌಂಡ್ ಟೇಬಲ್ ಮೇಲೆ ಹೋಗಿ ಕೂತರು. ಪಕ್ಕದಲ್ಲಿ ಶೃತಿ ಹೊಮ್ಮಿಸುವುದಕ್ಕಾಗಿ ಪುಟ್ಟ ರೆಕಾರ್ಡರ್ ಇಟ್ಟುಕೊಂಡರು. ಶೃತಿ ಶುರುವಾಯಿತು. ವಾಣಿಯವರ ಅಭಿನಯವೂ ಆರಂಭವಾಯಿತು.
ಅಲ್ಲಿಯವರೆಗೆ ನಾವು ನೋಡಿದ, ನಮ್ಮ ನಡುವೆಯೇ ಸುತ್ತಾಡುತ್ತಿದ್ದ ವಾಣಿಯವರು ಇವರೇನಾ ಎನ್ನುವಷ್ಟು ಸಂಪೂರ್ಣವಾಗಿ ಬದಲಾಗಿದ್ದರು. ಮುಂದೆ ಕೂತವರನ್ನು ಕ್ಯಾಮರಾಗಳೆಂದು ಭಾವಿಸಿದರು. ಕತೆಯಾದರು, ಪಾತ್ರವಾದರು. ನೀರು ಕುಡಿದಷ್ಟೇ ಸಲೀಸಾಗಿ ಒಂದೊಂದು ಪಾತ್ರವನ್ನು ಬಿಡಿಸಿಡುತ್ತ, ಮುಂದೆ ಕೂತವರನ್ನು ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋದರು.
ಏಕವ್ಯಕ್ತಿ ಕಲಾರೂಪದ ಮೊದಲ ದೊಡ್ಡ ಸಮಸ್ಯೆ ಎಂದರೆ ಮಾನಸಿಕ ಒತ್ತಡ. ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಕೆಲಸವಲ್ಲ. ವೇದಿಕೆ ಮೇಲೆ ಕೂತಿರುವ ಕಲಾವಿದೆ ತನ್ನೊಳಗಿನ ಆತಂಕ, ಮರೆವು, ಭಯ ಮತ್ತು ಒಂಟಿತನದೊಂದಿಗೆ ನಿರಂತರ ಹೋರಾಡುತ್ತಿರಬೇಕಾಗುತ್ತದೆ. ಸಹನಟರ ಬೆಂಬಲವಿಲ್ಲದ ಕಾರಣ, ತಪ್ಪು ನಡೆದರೂ ತಕ್ಷಣ ತಿದ್ದಿಕೊಳ್ಳಬೇಕಾದ್ದು ಕೂಡ ಅವರದೇ ಜವಾಬ್ದಾರಿಯಾಗಿರುತ್ತದೆ.
ಇದನ್ನು ಓದಿದ್ದೀರಾ?: ಆಂದ್ರೆ ಟಾರ್ಕೋವ್‌ಸ್ಕಿ ಚಿತ್ರಗಳ ಶಬ್ದಲೋಕ
ದೇಹದ ಸಾಮರ್ಥ್ಯವೂ ಇಲ್ಲಿ ದೊಡ್ಡ ಸವಾಲಾಗುತ್ತದೆ. ಏಕೆಂದರೆ ಇದು ಕಲಾವಿದನ ನಿಜವಾದ ಸಾಮರ್ಥ್ಯವನ್ನು ಅನಾವರಣಗೊಳಿಸುವ ಕಲಾರೂಪ. ಇಲ್ಲಿ ಅಲಂಕಾರಕ್ಕಿಂತ ಆತ್ಮ ಮುಖ್ಯ. ಪ್ರೇಕ್ಷಕರ ಮನಸ್ಸಿನೊಂದಿಗೆ ನೇರ ಸಂಭಾಷಣೆ ನಡೆಸುವ ಶಕ್ತಿ ಇದಕ್ಕಿದೆ. ಏಕವ್ಯಕ್ತಿ ಅಭಿನಯದಲ್ಲಿ ಕಲಾವಿದನ ದೇಹವೇ ಹಲವು ಪಾತ್ರಗಳ ರೂಪಕವಾಗಬೇಕು.
ಜಾಹ್ನವಿಯವರ ಈ ಕತೆಯಲ್ಲಿ ಅಮ್ಮ, ಅಜ್ಜಿ, ಅಪ್ಪ, ರಾಮಪ್ಪ, ಗೆಳತಿಯರು ಮತ್ತು ಸೆಕ್ಸಿ ದುರಗ- ಇವರೊಂದಿಗೆ ಸಂವಾದಿಸುವ ಕಥೆಗಾರ್ತಿ. ಇವಿಷ್ಟೂ ಪಾತ್ರಗಳ ವಯಸ್ಸು, ಮನಸ್ಸು, ಧ್ವನಿ ಮತ್ತು ಏರಿಳಿತಗಳನ್ನು ವಾಣಿಯವರು ತೂಗಿಸಿದ-ತಲುಪಿಸಿದ ರೀತಿ ಅದ್ಭುತವಾಗಿತ್ತು. ಸುಮಾರು ಒಂದೂವರೆ ತಾಸು, ಯಾರೊಬ್ಬರೂ ಅಲುಗಾಡಲಿಲ್ಲ. ಕುರ್ಚಿಗಳು ಕಿರುಗುಡಲಿಲ್ಲ. ಮೊಬೈಲ್ ಮಾತನಾಡಲಿಲ್ಲ. ಅಷ್ಟರಮಟ್ಟಿಗೆ ವಾಣಿಯವರ ಅಭಿನಯ ಸೂಜಿಗಲ್ಲಿನಂತೆ ಸೆಳೆದಿತ್ತು, ಕುರ್ಚಿಗಂಟಿಸಿತ್ತು.
ಬಿ.ಟಿ.ಜಾಹ್ನವಿಯವರ ‘ದೂಪ್ದಳ್ಳಿ ಸೆಕ್ಸಿ ದುರಗ’ ಕತೆ, ಕನ್ನಡ ಕಥಾಲೋಕದಲ್ಲೊಂದು ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಸುಮಾರು 30 ವರ್ಷಗಳ ಹಿಂದೆ, ‘ಲಂಕೇಶ್ ಪತ್ರಿಕೆ’ಯಲ್ಲಿ ಇದ್ದಾಗ, ಪ್ರಕಟಣೆಗಾಗಿ ಜಾಹ್ನವಿಯವರು ಈ ಕತೆ ಕಳಿಸಿದ್ದರು. ಮೊದಲ ಓದುಗನಾದ ನನ್ನನ್ನು ಆ ಕತೆ ಬೆಚ್ಚಿ ಬೀಳಿಸಿತ್ತು. ಅದರ ಗುಂಗಿನಿಂದ ಹೊರಬರಲಾದರೆ ಇಡೀ ವಾರ ಒದ್ದಾಡಿದ್ದೆ. ಅದೇ ಕತೆ, 30 ವರ್ಷಗಳ ನಂತರ, ವಾಣಿಯವರ ಅಭಿನಯದಲ್ಲಿ ಕಣ್ಮುಂದೆ ಬಿಚ್ಚಿಕೊಂಡಾಗ, ಅವರು ಪ್ರಸ್ತುತಪಡಿಸಿದ ರೀತಿಗೆ, ಅವರ ಅಭಿನಯಕ್ಕೆ, ಕತೆ ಹೊಮ್ಮಿಸಿದ ಹೊಳಹುಗಳಿಗೆ ಮೂಕನಾಗಿದ್ದೆ.
ಆ ತಕ್ಷಣವೇ ನನ್ನ ಮನಸ್ಸು 30 ವರ್ಷಗಳ ಹಿಂದಕ್ಕೆ ಓಡಿತ್ತು. ನಮ್ಮ ನಡುವಿನ ಅಲ್ಲಮ ಎಂದೇ ಹೆಸರಾದ ಕಿ.ರಂ. ನಾಗರಾಜರು, ಅವರ ಮನೆಯಲ್ಲಿಯೇ ಸಾಹಿತ್ಯದ ಒಲವುಳ್ಳ ಒಂದಷ್ಟು ಜನರನ್ನು ಕಲೆಹಾಕಿ, ಒಂದು ಕತೆ, ಕವಿತೆ, ನಾಟಕ ಕುರಿತು ಮಾತನಾಡುವುದು, ಸಂವೇದನೆಯನ್ನು ಹಂಚಿಕೊಳ್ಳುವುದಕ್ಕೆ ಮುನ್ನುಡಿ ಬರೆದಿದ್ದರು. ಅದಕ್ಕೆ ಅವರೇ ಮುಂದಾಗಿ ‘ಆಪ್ತ ರಂಗಭೂಮಿ’ ಎಂದು ಹೆಸರಿಟ್ಟಿದ್ದರು. ಒಬ್ಬೊಬ್ಬರೆ ಕೂತು ಕತೆ ಹೇಳುವ, ಅಭಿನಯಿಸುವ, ಅರ್ಥೈಸುವ, ಅದನ್ನು ವಿಸ್ತರಿಸುವ ಒಂದು ವಿಶಿಷ್ಟ ಪ್ರಯೋಗ. ವಾಣಿಯವರ ಏಕವ್ಯಕ್ತಿ ಅಭಿನಯ ನೋಡುತ್ತಿದ್ದಂತೆ, ಕಿರಂ ಕೂಡ ನೆನಪಾದರು.

ಏಕವ್ಯಕ್ತಿ ಅಭಿನಯವೆಂದರೆ ಕೇವಲ ಒಬ್ಬ ವ್ಯಕ್ತಿಯ ಪ್ರದರ್ಶನವಲ್ಲ. ಅದು ಒಬ್ಬ ಕಲಾವಿದ ತನ್ನೊಳಗಿನ ನೂರಾರು ಪಾತ್ರಗಳೊಂದಿಗೆ ನಡೆಸುವ ಆತ್ಮಸಂವಾದ. ಅದರ ಯಶಸ್ಸು ಕೇವಲ ಚಪ್ಪಾಳೆಗಳಲ್ಲಿ ಅಳೆಯಲಾಗುವುದಿಲ್ಲ. ಪ್ರೇಕ್ಷಕರ ಮನಸ್ಸಿನಲ್ಲಿ ಮೂಡುವ ಮೌನವೂ ಮುಖ್ಯವಾಗುತ್ತದೆ. ಅದೇ ರೀತಿ ವಾಣಿಯವರ ಅಭಿನಯ ಅಲ್ಲಾಡಿಸಿದ ಬಗೆಯನ್ನು ಬಗೆದಿಡುವುದು ನೋಡಿದವರೆಲ್ಲರಿಗೂ ಸಾಧ್ಯವಾಗಲಿಲ್ಲ. ಆದರೂ ಆಯೋಜಿಸಿದ ಗೌರಿ, ಎಂ.ಆರ್. ಕಮಲ, ಡಿ. ಉಮಾಪತಿ, ಗಿರಿಧರ್ ಕಾರ್ಕಳ, ಕೆ. ಷರೀಫಾ, ಡಾ. ವಾಸು ಅವರು ತಕ್ಷಣದ ತಮ್ಮ ಪ್ರತಿಕ್ರಿಯೆಯಲ್ಲಿ ವಾಣಿಯವರ ಅಭಿನಯವನ್ನು, ಕತೆ ಕಲಕಿದ ಬಗೆಯನ್ನು ಭಿನ್ನವಾಗಿ ಬಿಡಿಸಿಟ್ಟರು.
ಜಾಹ್ನವಿಯವರ ಕತೆ, ವಾಣಿಯವರ ಏಕವ್ಯಕ್ತಿ ಅಭಿನಯ- ಎರಡೂ ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥವು. ಇದು ಇನ್ನಷ್ಟು ಪ್ರದರ್ಶನಗಳನ್ನು ಕಾಣಲಿ, ನಾಡಿನಾದ್ಯಂತ ನಡೆದಾಡಲಿ, ಕಲೆ ಮತ್ತು ಸಾಹಿತ್ಯ ಮನುಷ್ಯರನ್ನಾಗಿಸಲಿ.

ಲೇಖಕ, ಪತ್ರಕರ್ತ



