ಬೀದರ್ ತಾಲೂಕಿನ ಅಲಿಯಂಬರ್ ಮಾರ್ಗವಾಗಿ ಚಂದಾಪೂರ, ನಿಟ್ಟೂರು(ಬಿ) ಇತರೆ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ಅಲಿಯಂಬರ್ ಗ್ರಾಮ ಸಮೀಪದ ಸೇತುವೆಯೊಂದು ಸೋಮವಾರ ಬೆಳಿಗ್ಗೆ ಏಕಾಏಕಿ ಕುಸಿದು ಬಿದ್ದಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಘಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಒ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಸಂಚಾರ ನಡೆಯದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸೇತುವೆಯ ಒಂದು ಭಾಗದಲ್ಲಿ ಬುಲಡ್ಜೋರ್ ಮುಖಾಂತರ ತಾತ್ಕಾಲಿಕ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಈ ಬಗ್ಗೆ ಗ್ರಾಮಸ್ಥರಾದ ಬಸವರಾಜ ಭಾವಿಕಟ್ಟೆ ಮಾತನಾಡಿ, “ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಕಬ್ಬಿಣದ ಸರಳು ತೇಲಿವೆ. ಅವಘಡ ಸಂಭವಿಸುವ ಮುನ್ನ ನೂತನ ಸೇತುವೆ ನಿರ್ಮಿಸುವಂತೆ ಕಳೆದ ಆಗಸ್ಟ್ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಿದ್ದಾರೆ” ಎಂದು ಹೇಳಿದರು.

“ಬೀದರ್ ಜನವಾಡ ಮಾರ್ಗವಾಗಿ ನಿಟ್ಟೂರ(ಬಿ), ಭಾಲ್ಕಿ ಕಡೆ ಸಂಚರಿಸುವ ನೂರಾರು ವಾಹನಗಳಿಗೆ ಇದೇ ರಸ್ತೆ ಪ್ರಮುಖವಾಗಿದೆ. ಸೇತುವೆ ಕುಸಿತದಿಂದ ವಾಹನ ಸಂಚಾರ ಸ್ಥಗಿತವಾಗಿದ್ದು, ವಾಹನ ಸವಾರರು ಸುತ್ತುಬಳಸಿ ತೆರಳಬೇಕಾದ ಸ್ಥಿತಿ ಎದುರಾಗಿದೆ. ಕೂಡಲೇ ತಾತ್ಕಾಲಿಕ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ತ್ವರಿತವಾಗಿ ಗುಣಮಟ್ಟದ ಹೊಸ ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮ ವಹಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಎಸ್‌ಸಿ ಮೀಸಲಾತಿ ಕೈಬಿಟ್ಟಿದ್ದಕ್ಕೆ ಆಕ್ರೋಶ: ಅ.16ರಂದು ಹೋರಾಟದ ಎಚ್ಚರ





