ಬೀದರ್ ನಗರದ ಬ್ರಿಮ್ಸ್ (ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಜಿಲ್ಲಾ ಆಸ್ಪತ್ರೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜುಕುಮಾರ್ ಎಂಬುವವರ ಬಳಿ ಭಾರಿ ಪ್ರಮಾಣದ ನಗದು ಹಣ ಪತ್ತೆಯಾಗಿದೆ.
ಪರಿಶೀಲನೆ ವೇಳೆ ಸಂಜುಕುಮಾರ್ ಅವರ ಬಳಿ ₹1 ಲಕ್ಷ ನಗದು ಹಾಗೂ ₹1 ಲಕ್ಷ ಮೊತ್ತದ ಚೆಕ್ ಹಾಗೂ ಹಲವಾರು ಎಟಿಎಂ ಕಾರ್ಡ್‌ಗಳು ಪತ್ತೆಯಾಗಿದ್ದು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರ ಬಳಿ ಇಷ್ಟೊಂದು ಹಣ ಹೇಗೆ ಬಂದಿತು ಎಂಬ ಬಗ್ಗೆ ಉಪಲೋಕಾಯುಕ್ತರು ಬ್ರಿಮ್ಸ್ ಅಧಿಕಾರಿಗಳನ್ನು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.
ಹಣದ ಮೂಲದ ಕುರಿತು ಕೇಳಿದಾಗ ಲ್ಯಾಬ್ ಟೆಕ್ನಿಶಿಯನ್ ಸಂಜುಕುಮಾರ್ ಸಮರ್ಪಕ ಉತ್ತರ ನೀಡಲು ವಿಫಲರಾಗಿದ್ದು, ತಡಬಡಾಯಿಸಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದಲೂ ಉಪಲೋಕಾಯುಕ್ತರು ಸ್ಪಷ್ಟನೆ ಕೇಳಿ, ಆಸ್ಪತ್ರೆಯ ಒಳಾಂಗಣ ವ್ಯವಸ್ಥೆ ಹಾಗೂ ಸಿಬ್ಬಂದಿಯ ಕಾರ್ಯವೈಖರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : BJP ಜತೆಗೆ ಮೈತ್ರಿ: ಅಳಿವಿನ ಹಾದಿ ತಲುಪಿತೇ ಜೆಡಿಎಸ್?
ಪತ್ತೆಯಾದ ಹಣವನ್ನು ಜಪ್ತಿ ಮಾಡುವಂತೆ ಹಾಗೂ ಪ್ರಕರಣವನ್ನು ಸುಮೋಟೋ ಆಧಾರದ ಮೇಲೆ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಸೂಚನೆ ನೀಡಿದರು.




