ಜೆಡಿಎಸ್‌ನ 18 ಮಂದಿ ಶಾಸಕರು ಇದ್ದರೂ, ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ 14 ಮತ ಬಿದ್ದದ್ದು ಪಕ್ಷವು ಅಳಿವಿನ ಹಾದಿಯ ಕಡೆ ಸಾಗುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ. ತಮ್ಮ ಶಾಸಕರುಗಳಿಗೆ ಪಕ್ಷದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಮೈತ್ರಿ ಹೀಗೆಯೇ ಮುಂದುವರೆದರೆ ಜಾತ್ಯತೀತ ಪಕ್ಷ ಜೆಡಿಎಸ್, ಕೋಮುವಾದಿ ಪಕ್ಷದ ರಾಜಕೀಯ ಆಟಕ್ಕೆ ಬಲಿಯಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ. 2028ರ ಚುನಾವಣೆಯಲ್ಲಿ ಜೆಡಿಎಸ್ ತನ್ನ ಎಲ್ಲ ಮತಬ್ಯಾಂಕ್ ಬಿಜೆಪಿಗೆ ಒಪ್ಪಿಸಿ ಕೈ ಕಟ್ಟಿ ನಿಲ್ಲುವಂತಾದರೂ ಅಚ್ಚರಿಪಡಬೇಕಾಗಿಲ್ಲ.
ಜೆಡಿಎಸ್ ಒಂದು ಕಾಲದಲ್ಲಿ ಪ್ರಬಲವಾದ ಪ್ರಾದೇಶಿಕ ಪಕ್ಷವಾಗಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿತ್ತು. ಜನತಾ ದಳ ಪಕ್ಷದ ವಿಭಜನೆಯಿಂದಾಗಿ ಕರ್ನಾಟಕದಲ್ಲಿ 1999ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ ಜೆಡಿಎಸ್ 10 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ನಂತರ 2004ರ ಚುನಾವಣೆಯಲ್ಲಿ58 ಸ್ಥಾನ ಗೆದ್ದು ಕಿಂಗ್‌ಮೇಕರ್ ಪಾತ್ರವಹಿಸಿ ಮೊದಲು ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತು. ನಂತರ ಬಿಜೆಪಿ ಜತೆಗೆ ಸರ್ಕಾರ ರಚಿಸಿ ವಿವಾದಕ್ಕೆ ಕಾರಣವಾಯಿತು. ರಾಜಕೀಯ, ಅಧಿಕಾರಕ್ಕಾಗಿ ಮಾಡಿಕೊಂಡ ಈ ತೀರ್ಮಾನದಿಂದ ಪಕ್ಷದ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರಿತು. ಇದರ ಪರಿಣಾಮ 2008ರ ಚುನಾವಣೆಯಲ್ಲಿ JDS 28 ಸ್ಥಾನಗಳಿಗೆ ಇಳಿಯಿತು.
2013ರ ಚುನಾವಣೆಯಲ್ಲಿ JDS 40 ಸ್ಥಾನಗಳನ್ನು ಗೆದ್ದು ಸ್ವಲ್ಪ ಏರಿಕೆ ಕಂಡಿತು. ಇದಾದ ನಂತರ 2018ರ ಚುನಾವಣೆಯಲ್ಲಿ 37 ಸ್ಥಾನಗಳನ್ನು ಗೆದ್ದು ಮತ್ತೆ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ ಎಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತು, ಇದು JDSಗೆ ದೊಡ್ಡ ಹೊಡೆತ ನೀಡಿತು.
ಮತಬ್ಯಾಂಕ್ ಶೇಕಡಾವಾರು ಗಣನೀಯಾವಾಗಿ ಕುಸಿತ ಕಂಡಿತು. ಈ ಸಂದರ್ಭದಲ್ಲಿ JDS ತನ್ನ ರಾಜಕೀಯ ಭವಿಷ್ಯವನ್ನು ಉಳಿಸಿಕೊಳ್ಳಲು ಮತ್ತೆ ಮೈತ್ರಿ ಕಡೆ ಮುಖ ಮಾಡಿತು. ಬಿಜೆಪಿ ಜತೆಗಿನ ಮೈತ್ರಿ ಮೂಲಕ ರಾಜಕೀಯದಲ್ಲಿ ಹೊಸ ಅವಕಾಶವನ್ನು ಹುಡುಕಲು ಪ್ರಯತ್ನಮಾಡುತ್ತಿದೆ.
ಬಿಜೆಪಿ ಜೊತೆಗಿನ ಮೈತ್ರಿ
2023ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಭಾರೀ ಕುಸಿತ ಕಂಡಿತು. ಈ ಹಿನ್ನೆಲೆ, ತನ್ನ ರಾಜಕೀಯ ಭವಿಷ್ಯವನ್ನು ಉಳಿಸಿಕೊಳ್ಳಲು 2023ರ ಚುನಾವಣೆಯ ನಂತರ ಜೆಡಿಎಸ್ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿತು. ಈ ಮೈತ್ರಿ ಹಲವು ರಾಜಕೀಯ ಲೆಕ್ಕಾಚಾರಗಳ ಆಧಾರದ ಮೇಲೆ ನಡೆಯಿತು.
2024ರ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಯಿಂದ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಯಿತು. ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಸುಲಭವಾಗಿ ಗೆಲುವು ಸಾಧಿಸಿತು, ಹಾಸನ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡರೂ ಕೂಡ ಕುಮಾರಸ್ವಾಮಿಗೆ ಕೇಂದ್ರದಲ್ಲಿ ಡೊಡ್ಡ ಖಾತೆಯ ಮಂತ್ರಿ ಸ್ಥಾನ ಸಿಕ್ಕಿದ್ದು ಜೆಡಿಎಸ್‌ಗೆ ದೊಡ್ಡ ಲಾಭ ತಂದುಕೊಟ್ಟಿತು.
ಆದರೂ ಬಿಜೆಪಿ ಜೊತೆಗಿನ ಮೈತ್ರಿಯನ್ನು ಸ್ವಂತ ಜೆಡಿಎಸ್ ಶಾಸಕರು, ನಾಯಕರುಗಳೇ ಸಾರ್ವಜನಿಕವಾಗಿ ವಿರೋಧಿಸಿದರು. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎದುರಾಳಿಯಾಗಿದ್ದಾರೆ; ಹಾಗೆಯೇ ಪಕ್ಷದ ಸಿದ್ಧಾಂತ ಮತ್ತು ರಾಜಕೀಯ ನಿಲುವುಗಳ ವಿರೋಧಗಳೂ ಕೂಡ ಇವೆ. ಕೆಲ ಬಿಜೆಪಿಗರು ಈ ಮೈತ್ರಿಗೆ ವಿರುದ್ದವಾಗಿ ಆಗಾಗ ಮಾತನಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ.
ಬಿಜೆಪಿ ಜತೆಗಿನ ಮೈತ್ರಿ ಜೆಡಿಎಸ್‌ಗೆ ತಾತ್ಕಾಲಿಕ ರಾಜಕೀಯ ಲಾಭ ನೀಡಿರಬಹುದು. ಆದರೆ ದೀರ್ಘಾವಧಿಯಲ್ಲಿ ಈ ಮೈತ್ರಿಯಿಂದ ಪಕ್ಷದ ಮತಬ್ಯಾಂಕ್ ಮತ್ತು ಸಂಘಟನಾ ಶಕ್ತಿಯ ಮೇಲೆ ದೂಡ್ಡ ಪರಿಣಾಮ ಬೀರುತ್ತದೆ.
ಈ ಎರಡು ವರ್ಷಗಳಲ್ಲಿ ಜೆಡಿಎಸ್ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ವಿಶೇಷವಾಗಿ “ಜೆಡಿಎಸ್ ತನ್ನ ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆಯೇ?” ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತಿದೆ.
ಸ್ವತಂತ್ರ ಅಸ್ತಿತ್ವದ ಸಂಕಷ್ಟ
ಜೆಡಿಎಸ್ ತನ್ನ ರಾಜಕೀಯವನ್ನು ʼಪ್ರಾದೇಶಿಕ ಜಾತ್ಯತೀತʼ ಮತ್ತು ಗ್ರಾಮೀಣ ಆಧಾರದ ಮೇಲೆ ಕಟ್ಟಿಕೊಂಡಿದೆ. ಆದರೆ ಬಿಜೆಪಿ ಜತೆಗಿನ ಮೈತ್ರಿ ನಂತರ ಪಕ್ಷದ ಮೂಲ ಸಿದ್ಧಾಂತ ಮತ್ತು ರಾಜಕೀಯ ನಿಲುವುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
ಜಾತ್ಯತೀತ ಪದವನ್ನು ಮರೆತು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗಿದೆ. ನಾಗಮಂಗಲ ಮತ್ತು ಮದ್ದೂರಿನ ಕೋಮುಗಲಭೆ, ಕೆರಗೋಡು ಹನುಮ ಧ್ವಜ ವಿವಾದದಲ್ಲಿ ನೇರ ಕುಮಾರಸ್ವಾಮಿಯವರೇ ಹೋಗಿ ನಿಂತದ್ದು ಇದಕ್ಕೆ ಸಾಕ್ಷಿಯಾಗಿದೆ.
ಬಿಜೆಪಿ ಜತೆಗಿನ ಮೈತ್ರಿಯಿಂದ ಪಕ್ಷದ ಸ್ವತಂತ್ರ ಅಸ್ತಿತ್ವದ ಮೇಲೆ ಪರಿಣಾಮ ಬೀರಿದೆ. ಅಧಿಕಾರದ, ರಾಜಕೀಯ ಲೆಕ್ಕಾಚಾರದ ಮೇಲೆ ರಾಷ್ಟ್ರೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಕೆಲವು ರಾಜಕೀಯ ಲಾಭವಾದರೂ, ಪಕ್ಷದ ಸಿದ್ಧಾಂತ ಮತ್ತು ರಾಜಕೀಯ ನಿಲುವುಗಳ ಬಗ್ಗೆ ತನ್ನ ಮತದಾರರಲ್ಲಿ ಗೊಂದಲ ಉಂಟುಮಾಡಿದೆ. ಹಲವು ಬಾರಿ ಮೈತ್ರಿಗಳ ಬದಲಾವಣೆಯಿಂದ ಕಾರ್ಯಕರ್ತರಲ್ಲಿಯೂ ಕೂಡ ಅಸಮಾಧಾನ ಕಂಡುಬಂದಿದೆ.
ಪಕ್ಷದ ನಾಯಕತ್ವದ ವಿಚಾರವಾಗಿಯೂ ಚರ್ಚೆಯಲ್ಲಿದೆ. ದೇವೇಗೌಡರು ಮತ್ತು ಅವರ ಕುಟುಂಬದ ಸುತ್ತ ಪಕ್ಷದ ರಾಜಕೀಯ ಕೇಂದ್ರೀಕೃತವಾಗಿದೆ ಎಂಬುವ ಟೀಕೆಗಳು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಕುಟುಂಬ ರಾಜಕೀಯದಿಂದ ಹೊಸ ನಾಯಕತ್ವ ಬೆಳೆಸುವಲ್ಲಿ ಡೊಡ್ಡ ಅಡ್ಡಿಯಾಗುತ್ತಿದೆ. ಇಂದಿನ ಯುವ ಮತದಾರರನ್ನು ಸೆಳೆಯಲು ಹೊಸ ಮುಖಗಳು ಮತ್ತು ಹೊಸ ರಾಜಕೀಯ ನಾಯಕರ ಅಗತ್ಯವಿದೆ. ಕುಂಟುಂಬ ರಾಜಕೀಯದಿಂದ ಸ್ವಲ್ಪ ಹೊರಬಂದು ಹೊಸಬರಿಗೆ, ಯುವಜನರಿಗೆ ಹೆಚ್ಚು ಆದ್ಯತೆ ಕೊಡುವುದು ಅನಿವಾರ್ಯ.
ಅಳಿವಿನ ಹಾದಿಯತ್ತ ಜೆಡಿಎಸ್?
ಯಾವುದೇ ಸರ್ಕಾರ ರಚನೆಗೆ ನಿರ್ಣಾಯಕ ಪಕ್ಷವಾಗಿದ್ದ ಜೆಡಿಎಸ್, ಈಗ ತನ್ನ ಅಸ್ತಿತ್ವದ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎದುರಿಸುತ್ತಿದೆ. ʼಜೆಡಿಎಸ್ ಅಳಿವಿನ ಹಾದಿಯತ್ತ ಸಾಗುತ್ತಿದೆಯೇ?ʼ ಎಂಬುದು ಹೆಚ್ಚು ಚರ್ಚೆಯಾಗುತ್ತಿದೆ.
ಬಿಜೆಪಿ ಜತೆ ಮೈತ್ರಿ ನಂತರ ಮೊದಲ ಚುನಾವಣೆಯಲ್ಲೇ ಸೋಲು ಕಂಡಿತು, ಒಕ್ಕಲಿಗ ಮತಗಳೇ ನಿರ್ಣಾಯಕವಾಗಿರುವ ಹಾಗೂ ಜೆಡಿಎಸ್ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿತು.
ಇದಾದ ನಂತರದಲ್ಲಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವುಗೊಂಡಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿ ಹೀನಾಯವಾಗಿ ಸೋಲು ಕಂಡಿತು. ಕುಮಾರಸ್ವಾಮಿ ಎರಡು ಬಾರಿ ಸ್ವರ್ಧಿಸಿ ಗೆಲುವು ಕಂಡಿದ್ದ ಸ್ವಕ್ಷೇತ್ರದಲ್ಲಿ ಸೋಲು ಕಂಡಿದ್ದು ಜೆಡಿಎಸ್‌ಗೆ ಭಾರೀ ಹಿನ್ನಡೆಯಾಯಿತು.
2018ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ 7ಕ್ಕೆ 7 ವಿಧಾನಸಭಾ ಸ್ಥಾನಗಳನ್ನು ಗೆದ್ದು ಜೆಡಿಎಸ್ ಭದ್ರಕೋಟೆಯಾಗಿ ಮಾಡಿಕೊಂಡಿತ್ತು, ಪಕ್ಷದ ರಾಜಕೀಯ ನಿಲುವುಗಳಿಂದ 2023ರ ಚುನಾವಣೆಯಲ್ಲಿ ಕೇವಲ ಕೆ ಆರ್ ಪೇಟೆ ಒಂದು ವಿಧಾನಸಭಾ ಕ್ಷೇತ್ರ ಗೆದ್ದು ತನ್ನ ಅಸ್ತಿತ್ವವನ್ನು ಬಹುಪಾಲು ಕಳೆದುಕೊಂಡಿತು.
ದಿನದಿಂದ ದಿನಕ್ಕೆ ಜೆಡಿಎಸ್ ಅಳಿವಿನ ಹಾದಿಯತ್ತ ಸಾಗುತ್ತಿದೆ. ಪಕ್ಷ ಸಂಘಟನೆಯಿಲ್ಲದೆ ಬಿಜೆಪಿಯ ಕೋಮು ರಾಜಕೀಯಕ್ಕೆ ಬಲಿಯಾಗಿ ತನ್ನ ಹಾದಿಯನ್ನು ಅಂತ್ಯ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿದ್ದೀರಾ? ಬಿಜೆಪಿಯ ‘ನಿಷ್ಠೆ’ ಪರೀಕ್ಷಿಸಲು ಹೋಗಿ ಮುಖಭಂಗ ಅನುಭವಿಸಿದ ಜೆಡಿಎಸ್
ಜೆಡಿಎಸ್‌ನ 18 ಮಂದಿ ಶಾಸಕರು ಇದ್ದರೂ, ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ 14 ಮತ ಬಿದ್ದದ್ದು ಪಕ್ಷವು ಅಳಿವಿನ ಹಾದಿಯ ಕಡೆ ಸಾಗುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ. ತಮ್ಮ ಶಾಸಕರುಗಳಿಗೆ ಪಕ್ಷದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಮೈತ್ರಿ ಹೀಗೆಯೇ ಮುಂದುವರೆದರೆ ಜಾತ್ಯತೀತ ಪಕ್ಷ ಜೆಡಿಎಸ್, ಕೋಮುವಾದಿ ಪಕ್ಷದ ರಾಜಕೀಯ ಆಟಕ್ಕೆ ಬಲಿಯಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ. 2028ರ ಚುನಾವಣೆಯಲ್ಲಿ ಜೆಡಿಎಸ್ ತನ್ನ ಎಲ್ಲ ಮತಬ್ಯಾಂಕ್ ಬಿಜೆಪಿಗೆ ಒಪ್ಪಿಸಿ ಕೈಕಟ್ಟಿ ನಿಲ್ಲುವಂತಾದರೂ ಅಚ್ಚರಿಪಡಬೇಕಾಗಿಲ್ಲ.




