ಬೀದರ್ ಪ್ರಸ್ಥಭೂಮಿಯ ಸುತ್ತಮುತ್ತಲಿನ ಗುಡ್ಡಗಳನ್ನು ಅಕ್ರಮವಾಗಿ ಕಡಿದು, ನೈಸರ್ಗಿಕ ಪರಿಸರ ನಾಶಪಡಿಸುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಟೀಮ್ ಯುವಾ ವತಿಯಿಂದ ಜಿಲ್ಲಾಧಿಕಾರಿಗೆ ಸಮಗ್ರ ವರದಿ ಹಾಗೂ ಅಧಿಕೃತ ದೂರು ಸಲ್ಲಿಸಲಾಗಿದೆ.
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣದ ಬಳಿಕ ನಡೆದ ಪತ್ರಿಕಾಗೋಷ್ಠಿಗಳಲ್ಲಿ ಹಿರಿಯ ಪತ್ರಕರ್ತರು ಬೀದರ್ ನಗರದ ಸುತ್ತಮುತ್ತಲಿನ ಗುಡ್ಡಗಳ ಅಕ್ರಮ ಕಡಿತ ಮತ್ತು ಪರಿಸರ ನಾಶದ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು, ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಸಚಿವರ ನಿರ್ದೇಶನದ ಮೇರೆಗೆ ಟೀಮ್ ಯುವಾ ಸಂಸ್ಥೆಯು ಕ್ಷೇತ್ರ ಭೇಟಿ ಹಾಗೂ ಡ್ರೋನ್ ಸಮೀಕ್ಷೆ ನಡೆಸಿ, ಅಕ್ರಮ ಗಣಿಗಾರಿಕೆ, ಪರಿಸರ ಹಾನಿ ಮತ್ತು ಕಾನೂನು ಉಲ್ಲಂಘನೆಗೆ ಸಂಬಂಧಿಸಿದ ಅಂಶಗಳನ್ನು ಒಳಗೊಂಡ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠಲರಾವ್ ಅವರಿಗೆ ವರದಿಯ ಪ್ರತಿಯನ್ನು ನೀಡಲಾಗಿದೆ.
ಶಹಾಪುರ, ಮಲ್ಕಾಪುರ, ಮಿರ್ಜಾಪುರ (ಟಿ), ಅಷ್ಟೂರ್, ಸೋಲಪುರ, ಮಾಮನ್‌ಕೇರಿ, ನಾವದಗೇರಿ, ಅಲಿಯಾಬಾದ್, ಚೊಂಡಿ, ಚಾವಳಿ ಮತ್ತು ಸುಲ್ತಾನ್‌ಪುರ ಸೇರಿದಂತೆ 11 ಗ್ರಾಮಗಳಲ್ಲಿ ಯಾವುದೇ ಪರವಾನಗಿ, ಗಣಿಗಾರಿಕೆ, ಪರಿಸರ ಅನುಮತಿಯಿಲ್ಲದೆ ಯಂತ್ರೋಪಕರಣಗಳ ಮೂಲಕ ಗುಡ್ಡಗಳ ಇಳಿಜಾರುಗಳನ್ನು ಕಡಿದು ಮರಂ ಮತ್ತು ಬಂಡೆಗಳನ್ನು ಸಾಗಿಸಲಾಗುತ್ತಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
ಸೋಲಪುರದ ಅನಂತಶಯನ ದೇವಾಲಯದ ಸಮೀಪದ ಬೃಹತ್ ಗುಡ್ಡ ಅಗೆದು ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಸಮತಟ್ಟು ಮಾಡಲಾಗಿದೆ. ಇದರಿಂದ ಕೆರೆಗೆ ನೀರು ಹರಿದುಬರುವ ನೈಸರ್ಗಿಕ ಹಳ್ಳಗಳು ಮುಚ್ಚಿಹೋಗಿದ್ದು, ಕೆರೆಯ ದಂಡೆಯಲ್ಲಿ ಮಣ್ಣು ಮತ್ತು ಕಲ್ಲುಗಳನ್ನು ಸುರಿದ ಪರಿಣಾಮ ಹೂಳು ತುಂಬುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಬೀದರ್ ಪ್ರಸ್ಥಭೂಮಿಯಲ್ಲಿರುವ ರಂಧ್ರಯುಕ್ತ ಲ್ಯಾಟರೈಟ್ ಶಿಲಾಪದರವು ಮಳೆನೀರನ್ನು ಹೀರಿಕೊಂಡು ಅಂತರ್ಜಲ ಮರುಪೂರಣಕ್ಕೆ ನೆರವಾಗುತ್ತದೆ. ಗುಡ್ಡಗಳ ಕಡಿತದಿಂದ ಈ ಪದರ ನಾಶವಾದರೆ ಬಾವಿ, ಕೊಳವೆಬಾವಿಗಳು ಬತ್ತಿಹೋಗುವ ಜತೆಗೆ ಐತಿಹಾಸಿಕ ಕರೇಜ್ (ಸುರಂಗ ಬಾವಿ) ಜಲವ್ಯವಸ್ಥೆಗೂ ಅಪಾಯ ಎದುರಾಗಲಿದೆ. ಪ್ರಸ್ಥಭೂಮಿಯ ಹುಲ್ಲುಗಾವಲುಗಳು ನಾಶವಾಗುತ್ತಿರುವುದರಿಂದ ಕೃಷ್ಣಮೃಗ, ತೋಳ, ನವಿಲು ಸೇರಿದಂತೆ ವಿವಿಧ ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಾವದಗೇರಿ ಹೊರತುಪಡಿಸಿ ಉಳಿದ 10 ಗ್ರಾಮಗಳು ಈ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಇತ್ತೀಚೆಗೆ ಬೀದರ್ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಆಡಳಿತಾತ್ಮಕ ಹಸ್ತಾಂತರದ ಸಂದರ್ಭದಲ್ಲಿ ಹಿಂದಿನ ದಾಖಲೆಗಳು ನಾಶವಾಗುವ ಹಾಗೂ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಸ್ಥಳ ಪರಿಶೀಲನೆಗೂ ಮುನ್ನ ಅಕ್ರಮ ಚಟುವಟಿಕೆ ನಡೆಸುವವರಿಗೆ ಮಾಹಿತಿ ಸೋರಿಕೆಯಾಗುತ್ತಿರುವ ಶಂಕೆಯನ್ನೂ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.
ಅಕ್ರಮ ಚಟುವಟಿಕೆಗಳಿಗೆ ತಕ್ಷಣ ಕಡಿವಾಣ ಹಾಕಲು ವರದಿಯಲ್ಲಿ ಹಲವು ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಮೊದಲ ಹಂತವಾಗಿ ವರದಿಯಲ್ಲಿ ಗುರುತಿಸಿರುವ 11 ಸ್ಥಳಗಳಲ್ಲಿ ಏಳು ದಿನಗಳೊಳಗೆ ಗಣಿಗಾರಿಕೆ ಮತ್ತು ಭೂ ಸಮತಟ್ಟು ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಬೇಕು ಎಂದು ಒತ್ತಾಯಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ, ಕಂದಾಯ, ಅರಣ್ಯ, ಮಾಲಿನ್ಯ ನಿಯಂತ್ರಣ ಮಂಡಳಿ, ಸಣ್ಣ ನೀರಾವರಿ, ಪೊಲೀಸ್, ಮಹಾನಗರ ಪಾಲಿಕೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡ ರಚಿಸಿ 15 ದಿನಗಳೊಳಗೆ ಡ್ರೋನ್ ಮತ್ತು ಡಿಜಿಪಿಎಸ್ ತಂತ್ರಜ್ಞಾನದ ಮೂಲಕ ಸ್ಥಳ ಪರಿಶೀಲನೆ ನಡೆಸಿ, ಪರಿಸರ ಹಾನಿಯ ಪ್ರಮಾಣ ಅಳೆಯಬೇಕು ಎಂದು ಮನವಿ ಮಾಡಲಾಗಿದೆ.
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 21 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಬೇಕು. ಅಕ್ರಮ ಗಣಿಗಾರಿಕೆಗೆ ಬಳಸಿದ ಯಂತ್ರೋಪಕರಣಗಳನ್ನು ಜಪ್ತಿ ಮಾಡಿ, ಸಾಗಿಸಿದ ಖನಿಜದ ಮೌಲ್ಯ ಹಾಗೂ ದಂಡ ವಸೂಲಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ತನಿಖೆ ಪೂರ್ಣಗೊಳ್ಳುವವರೆಗೆ ಬಾಧಿತ ಪ್ರದೇಶಗಳಲ್ಲಿ ಖಾತಾ, ಆಸ್ತಿ ನೋಂದಣಿ, ಬಡಾವಣೆ ಹಾಗೂ ಕಟ್ಟಡ ಪರವಾನಗಿಗಳನ್ನು ತಡೆಹಿಡಿಯಬೇಕು. ಹಿಂದಿನ ಗ್ರಾಮ ಪಂಚಾಯಿತಿಗಳ ಎಲ್ಲ ದಾಖಲೆಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸಂರಕ್ಷಿಸಬೇಕು. ಅಕ್ರಮಕ್ಕೆ ಸಹಕರಿಸಿದ ಅಥವಾ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕಾಲಮಿತಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಒತ್ತಾಯಿಸಲಾಗಿದೆ.
ದೀರ್ಘಕಾಲೀನ ಪರಿಸರ ಸಂರಕ್ಷಣೆಗಾಗಿ ಐಐಎಸ್‌ಸಿ, ಐಐಟಿ ಹೈದರಾಬಾದ್, ಸಿಇಪಿಟಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ತಜ್ಞರ ನೆರವಿನಿಂದ ಸ್ವತಂತ್ರ ಜಲಭೂವಿಜ್ಞಾನ ಅಧ್ಯಯನ ನಡೆಸಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಪಡೆ ರಚಿಸಿ ಗುಡ್ಡಗಳ ಸಂರಕ್ಷಣೆಗೆ ನಿರಂತರ ನಿಗಾ ವ್ಯವಸ್ಥೆ ರೂಪಿಸಬೇಕು ಎಂದು ಸಲಹೆ ನೀಡಲಾಗಿದೆ.
ನರೇಗಾ ಯೋಜನೆಯ ಜಿಯೋ-ಎಂಜಿಎನ್‌ಆರ್‌ಇಜಿಎ ಮಾದರಿಯಲ್ಲಿ ಜಿಯೋ ಟ್ಯಾಗ್ ಮಾಡಿದ ಡ್ರೋನ್ ಹಾಗೂ ಉಪಗ್ರಹ ಚಿತ್ರಗಳ ಮೂಲಕ ಗುಡ್ಡಗಳ ಮೇಲೆ ನಿರಂತರ ನಿಗಾ ವಹಿಸಬೇಕು. ಕೆರೆಗಳ ಜಲಾನಯನ ಪ್ರದೇಶ, ಕರೇಜ್ ಜಲಮೂಲಗಳು ಮತ್ತು ಹುಲ್ಲುಗಾವಲುಗಳ ಸುತ್ತ ಗಣಿಗಾರಿಕೆ ನಿಷೇಧಿತ ಬಫರ್ ವಲಯ ಘೋಷಿಸಬೇಕು. ಹಾನಿಗೊಳಗಾದ ಗುಡ್ಡಗಳನ್ನು ತಪ್ಪಿತಸ್ಥರ ವೆಚ್ಚದಲ್ಲಿ ಹಾಗೂ ನರೇಗಾ ಯೋಜನೆಯ ಸಹಯೋಗದೊಂದಿಗೆ ಪುನಶ್ಚೇತನಗೊಳಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ : ಬೀದರ್ | ಪೋಷಣ ಅಭಿಯಾನ ಯೋಜನೆಯಡಿ 2 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಲ್ಲಿಸಿರುವ ವರದಿಯ ಆಧಾರದ ಮೇಲೆ 30 ದಿನಗಳೊಳಗೆ ಕೈಗೊಂಡ ಕ್ರಮಗಳ ವರದಿ (Action Taken Report) ನೀಡುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ. ಕ್ರಮ ಕೈಗೊಳ್ಳುವಲ್ಲಿ ವಿಳಂಬವಾದರೆ ಸಾರ್ವಜನಿಕ ಹಿತಾಸಕ್ತಿ ರಕ್ಷಣೆಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹಾಗೂ ಲೋಕಾಯುಕ್ತರ ಮೊರೆ ಹೋಗಲಾಗುವುದು ಎಂದು ಟೀಮ್ ಯುವಾ ಸಂಸ್ಥಾಪಕ ಹಾಗೂ ಸಂಚಾಲಕ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಕುಮಾರ್ ಮಾಳಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



