ಬೀದರ್ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ತಲಾ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹಾಗೂ ಆಕರ್ಷಕ ಟ್ರೀ ಟ್ರೀ ಪಾರ್ಕ್‌ಗಳನ್ನು ನಿರ್ಮಿಸಿ, ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿ ರೂಪಿಸಲು ಆದ್ಯತೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೀದರ್ ನಗರದಲ್ಲಿ ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅರಣ್ಯ ಭವನ ಹಾಗೂ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ನೌಬಾದ್ ಟ್ರೀ ಪಾರ್ಕ್ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
“ತಾವು ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆಯ ಹಸಿರು ಪರಿಸರವನ್ನು ಬೆಳೆಸುವ ಹಾಗೂ ಸಾರ್ವಜನಿಕರಿಗೆ ಉತ್ತಮ ಉದ್ಯಾನವನಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಗಳನ್ನು ರೂಪಿಸಲಾಗಿತ್ತು. ಪ್ರತಿಯೊಂದು ತಾಲ್ಲೂಕಿನಲ್ಲೂ ಸುಂದರವಾದ ಟ್ರೀ ಪಾರ್ಕ್ ನಿರ್ಮಾಣವಾಗಬೇಕು ಎಂಬುದು ತಮ್ಮ ಆಶಯವಾಗಿದೆ” ಎಂದು ತಿಳಿಸಿದರು.

ಟ್ರೀ ಪಾರ್ಕ್‌ಗಳು ಕೇವಲ ಹಸಿರು ತಾಣಗಳಾಗಿರದೆ, ಮಕ್ಕಳು ಆಟವಾಡಲು, ಕುಟುಂಬಗಳು ವಿರಾಮದ ಸಮಯ ಕಳೆಯಲು ಹಾಗೂ ಸಾರ್ವಜನಿಕರು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ಜನರಿಗೆ ಉತ್ತಮ ಪರಿಸರ ಹಾಗೂ ಮನರಂಜನಾ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.
ಭಾಲ್ಕಿ ತಾಲ್ಲೂಕಿನ ಇಂಚೂರು ಗ್ರಾಮದಲ್ಲಿ ಈಗಾಗಲೇ ಅಭಿವೃದ್ಧಿಪಡಿಸಿ ಉದ್ಘಾಟಿಸಿರುವ ಟ್ರೀ ಪಾರ್ಕ್ ಜಿಲ್ಲೆಯ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ರೂಪುಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ಹಾಗೂ ಮಕ್ಕಳು ಭೇಟಿ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಆಕರ್ಷಕ ಟ್ರೀ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಬೀದರ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿ ರೂಪಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡುವುದು ತಮ್ಮ ಸಂಕಲ್ಪವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಸಮಾರಂಭದಲ್ಲಿ ಶಾಸಕ ರಹೀಂ ಖಾನ್, ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ್ ವಿಠಲರಾವ್, ಪ್ರಾದೇಶಿಕ ವಿಭಾಗದ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆಶೀಶ್ ರೆಡ್ಡಿ, ಶ್ರೀನಿವಾಸ ಯರಡೋಣಿ, ಬಿಡಿಎ ಅಧ್ಯಕ್ಷ ವಿನೋದ ಅಪ್ಪೆ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ, ಗುತ್ತಿಗೆದಾರ ಸೂರ್ಯಕಾಂತ ಅಲ್ಮಾಜೆ ಸೇರಿದಂತೆ ಅಧಿಕಾರಿಗಳಾದ ಚಂದ್ರಶೇಖರ ಹೇಮಾ, ವಿರೇಶ ಕಲ್ಯಾಣಿ, ಪ್ರವೀಣಕುಮಾರ ಮೋರೆ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ :




