ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ, ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ನಡೆಸಲಾಗಿದೆ ಎನ್ನಲಾದ ನಕಲಿ ‘ಸ್ಟಿಂಗ್ ಆಪರೇಷನ್’ ವಿಡಿಯೋ ಹರಿದಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಕೇಶ್ ಶೆಟ್ಟಿ ರಾಕೇಶ್ ಶೆಟ್ಟಿ ಅವರ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ನಿವಾಸ ಮತ್ತು ಕಚೇರಿಗಳ ಮೇಲೆ ಸಿಸಿಬಿ ಅಧಿಕಾರಿಗಳ ತಂಡ ಸೋಮವಾರ ದಾಳಿ ನಡೆಸಿ ತೀವ್ರ ಶೋಧ ನಡೆಸಿದೆ.
ಸಿಸಿಬಿಯ ಸೈಬರ್ ಕ್ರೈಂ ವಿಭಾಗದ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡಗಳು ಏಕಕಾಲಕ್ಕೆ ರಾಕೇಶ್ ಶೆಟ್ಟಿ ಅವರ ನಿವಾಸ ಮತ್ತು ಪವರ್ ಟಿವಿ ಮಾಧ್ಯಮ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿದೆ. ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು, ಹಾರ್ಡ್‌ಡಿಸ್ಕ್‌ಗಳು ಮತ್ತು ಇಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದುಕೊಂಡಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಸುಳಿಯಲ್ಲಿ ಸಿಲುಕಿದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಹಿನ್ನೆಲೆ ಏನು?
ಕಳೆದ ಸೆಪ್ಟೆಂಬರ್ ಅಂತ್ಯದಲ್ಲಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಸಂಚು ರೂಪಿಸಿ ನಕಲಿ ವಿಡಿಯೋ ರೂಪಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ದೂರು ಸಲ್ಲಿಕೆಯಾದ ಬೆನ್ನಲ್ಲೇ ತನಿಖೆ ಆರಂಭಿಸಿದ್ದ ಸಿಸಿಬಿ ಪೊಲೀಸರು, ಈಗಾಗಲೇ ಹಲವಾರು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದಲ್ಲಿ ದಕ್ಷಿಣ ಕನ್ನಡ ಮೂಲದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಮತ್ತು ರಾಕೇಶ್ ಶೆಟ್ಟಿ ಹೆಸರುಗಳು ಮುಂಚೂಣಿಗೆ ಬಂದಿದೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಇದೊಂದು ಸಂಪೂರ್ಣ ಸುಳ್ಳು ಮತ್ತು ಸೃಷ್ಟಿಸಿದ ಕಟ್ಟುಕಥೆ. ನನ್ನ ತೇಜೋವಧೆ ಮಾಡಲು, ಬ್ಲ್ಯಾಕ್‌ಮೇಲ್ ಮಾಡಲು ಈ ರೀತಿ ಹುನ್ನಾರ ನಡೆಸಲಾಗಿದೆ. ಸತ್ಯಾಂಶ ಹೊರಬರಬೇಕು ಎಂಬ ಕಾರಣಕ್ಕಾಗಿಯೇ ನಾನೇ ಖುದ್ದು ದೂರು ನೀಡಿದ್ದೇನೆ” ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ, ನಕಲಿ ವಿಡಿಯೋ ಪ್ರಸಾರವಾಗದಂತೆ ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತರಲಾಗಿತ್ತು.
ಇನ್ನು ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ರಾಕೇಶ್ ಶೆಟ್ಟಿ ಅವರು ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ನಗರ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಿ ಮುಂಗಡ ಜಾಮೀನು ಪಡೆದುಕೊಂಡಿದ್ದರು. ಆ ಬಳಿಕ ಸಿಸಿಬಿ ಸೈಬರ್ ಕ್ರೈಂ ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದರು. ತನಿಖೆ ವೇಳೆ ವಿಡಿಯೋ ಚಿತ್ರೀಕರಣ ಮತ್ತು ವೈರಲ್ ಆದ ಹಿನ್ನೆಲೆಯ ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಲು ಸಿಸಿಬಿ ಇಂದು ಶೋಧ ಕಾರ್ಯಾಚರಣೆ ನಡೆಸಿದೆ.
ಸಿಸಿಬಿಯ ಉನ್ನತ ಅಧಿಕಾರಿಗಳು ದಾಳಿಯ ವೇಳೆ ಪವರ್ ಟಿವಿ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿಯ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.




